ಹಾಸನದಲ್ಲಿ ಹೆಚ್ಚಾದ ಸರಗಳ್ಳರ ಹಾವಳಿ; ಒಂದೇ ದಿನ ಮೂರು ಕಡೆ ಕೃತ್ಯ, ರಸ್ತೆಯಲ್ಲಿ ಓಡಾಡಲು ಭಯಪಡುತ್ತಿರುವ ಮಹಿಳೆಯರು

ಹಾಸನ ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಒಂಟಿ ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಬೈಕ್​ನಲ್ಲಿ ಬರುವ ಖದೀಮರು ಕತ್ತಿಗೆಗೆ ಕೈ ಹಾಕಿ ಸರ ಕಿತ್ತು ಕೊಂಡು ಪರಾರಿಯಾಗುತ್ತಿದ್ದಾರೆ. ಇಂದೇ ದಿನದಲ್ಲಿ ಈ ರೀತಿಯ ಮೂರು ಘಟನೆಗಳು ನಡೆದಿವೆ. ಇದರಿಂದ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ.

ಹಾಸನದಲ್ಲಿ ಹೆಚ್ಚಾದ ಸರಗಳ್ಳರ ಹಾವಳಿ; ಒಂದೇ ದಿನ ಮೂರು ಕಡೆ ಕೃತ್ಯ, ರಸ್ತೆಯಲ್ಲಿ ಓಡಾಡಲು ಭಯಪಡುತ್ತಿರುವ ಮಹಿಳೆಯರು
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: Dec 04, 2023 | 10:05 AM

ಹಾಸನ, ಡಿ.04: ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ (Chain Snatching). ಹಾಸನ ನಗರದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ನಡೆದಿದೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಹಾಗೂ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಸರಗಳ್ಳರ ಹಾವಳಿ ಹೆಚ್ಚಾಗಿದ್ದು ಜನರು ರಸ್ತೆಯಲ್ಲಿ ಓಡಾಡುವಾಗ ಭಯದಿಂದಲೇ ಹೆಜ್ಜೆ ಹಾಕುವಂತಾಗಿದೆ. ಅಚ್ಚರಿ ಎಂದರೆ ಒಂದು ವಾರದ ಅಂತರದಲ್ಲಿ ಹಾಸನ (Hassan) ನಗರದ ವಿವಿದೆಡೆ ಏಳು ಪ್ರಕರಣಗಳು ದಾಖಲಾಗಿವೆ. ಸರಗಳ್ಳನ ಹಾವಳಿಯಿಂದ ಮಹಿಳೆಯರು ಆತಂಕಗೊಂಡಿದ್ದು ಖದೀಮರು ಎಲ್ಲಿಂದ ಬಂದು ಕತ್ತಿಗೆ ಕೈ ಹಾಕುತ್ತಾರೆ ಎಂಬ ಭಯವೇ ಹೆಚ್ಚಾಗಿದೆ.

ಸರಗಳ್ಳತನ -1

ಹಾಸನದ ವಿಜಯನಗರ ಮೂರನೇ ಕ್ರಾಸ್‌ನಲ್ಲಿ ಹೂವು ತರಕಾರಿ ತೆಗೆದುಕೊಂಡು ವಾಪಾಸ್ ಮನೆಗೆ ತೆರಳುತ್ತಿದ್ದ ವೃದ್ದೆ ಪುಟ್ಟ ಲಕ್ಣ್ಮಮ್ಮ‌ ಅವರ ಸರಗಳ್ಳತನವಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಎರಡೂವರೆ ಲಕ್ಷ ರೂ. ಮೌಲ್ಯದ 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳ್ಳತನ -2

ಮತ್ತೊಂದೆಡೆ ಗಣಪತಿ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ವಾಪಾಸ್ ಮನೆಗೆ ತೆರಳುತ್ತಿದ್ದ ಒಡಿಸ್ಸಾ ಮೂಲದ ಮಾನಸಿ ಎಂಬಾಕೆಯ ಸರ ಎಗರಿಸಿ ಖದೀಮರು ಪರಾರಿಯಾಗಿದ್ದಾರೆ. ಬೈಕ್‌ನಲ್ಲಿ ಬಂದ ಸರಗಳ್ಳರು ಮಹಿಳೆಯ ಕೊರಳಿನಲ್ಲಿದ್ದ 15 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜೈ ಶ್ರೀರಾಮ್ ಹೇಳುವಂತೆ ವೈದ್ಧನ ಮೇಲೆ ಹಲ್ಲೆ ಕೇಸ್; ಆಕ್ಷೇಪಾರ್ಹ ಪೋಸ್ಟ್ ಹಾಕಿದವನ ವಿರುದ್ಧ ಪ್ರಕರಣ ದಾಖಲು

ಸರಗಳ್ಳತನ -3

ಹಾಸನ ತಾಲೂಕಿನ, ದುದ್ದ ಹೋಬಳಿ ಹೆರಗು ಗ್ರಾಮದ ಮಹಿಳೆ ಪದ್ಮ ಅವರು ಸಂಬಂಧಿಕರ ಮನೆಯಿಂದ ವಾಪಾಸ್ ಮನೆಗೆ ತೆರಳುತ್ತಿದ್ದರು. ಗೌರಿಕೊಪ್ಪಲಿನ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರ ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಸರಗಳ್ಳತನ ಮಾಡಿದ್ದಾರೆ. ಪದ್ಮ ಅವರ ಕೊರಳಿನಲ್ಲಿದ್ದ 33 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಖದೀಮರು ಎಸ್ಕೇಪ್ ಆಗಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹೆಲ್ಮೆಟ್ ಹಾಕಿಕೊಂಡು ಬೈಕ್‌ನಲ್ಲಿ ಬರುತ್ತಿರುವ ಖತರ್ನಾಕ್ ಕಳ್ಳರು, ಒಂಟಿ ಮಹಿಳೆಯರು ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಅಟ್ಯಾಕ್ ಮಾಡುತ್ತಿದ್ದಾರೆ. ಒಂದು ವಾರದ ಅಂತರದಲ್ಲಿ ಹಾಸನ ನಗರದ ವಿವಿದೆಡೆ ಏಳು ಪ್ರಕರಣಗಳು ದಾಖಲಾಗಿವೆ.

ಮಂಕು ಬೂದಿ ಎರಚಿ‌ ಚಿನ್ನ ನಗದು ಕಳ್ಳತನ

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಗುಡ್ಡಹೊಸೂರು ಗ್ರಾಮದಲ್ಲಿ ಮಂಕು ಬೂದಿ ಎರಚಿ‌ ಚಿನ್ನ, ನಗದು ಕಳ್ಳತನ ಮಾಡಲಾಗಿರುವ ಘಟನೆ ನಡೆದಿದೆ. ಮಧ್ಯರಾತ್ರಿ 2 ಗಂಟೆಗೆ ಪಿಎಂ ಇಸ್ಮಾಯಿಲ್ ಎಂಬುವವರ ಮನೆ ಬಾಗಿಲು ತಟ್ಟಿದ ಮುಸುಕುಧಾರಿಗಳು, ಬಾಗಿಲು ತೆಗೆಯುತ್ತಿದ್ದಂತೆ ಬೂದಿ ಎರಚಿ ಮನೆಯವರನ್ನು ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡಿದ್ದಾರೆ. 45 ಗ್ರಾಂ ಚಿನ್ನ, 5 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ