ಲಂಚ ಕೊಟ್ಟಿದ್ದಕ್ಕೆ ಯಾರಾದರೂ ರಶೀದಿ ಕೊಡ್ತಾರೇನ್ರಿ? ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಟಾಂಗ್

| Updated By: ಆಯೇಷಾ ಬಾನು

Updated on: Sep 04, 2022 | 5:32 PM

ಆರೋಪ ಸಾಬೀತಾಗದಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದಿದ್ದಾರೆ. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಬಗ್ಗೆ ಭಯ ಯಾಕೆ? ನೀವು ಪ್ರಾಮಾಣಿಕರಲ್ಲವೇ?ಹಾಗಿದ್ದರೆ ಹೆದರುವುದು ಯಾಕೆ? ಕೆಂಪಣ್ಣ ಕಾಂಗ್ರೆಸ್ಸೋ ಬಿಜೆಪಿಯೋ ನನಗೆ ಗೊತ್ತಿಲ್ಲ.

ಲಂಚ ಕೊಟ್ಟಿದ್ದಕ್ಕೆ ಯಾರಾದರೂ ರಶೀದಿ ಕೊಡ್ತಾರೇನ್ರಿ? ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಟಾಂಗ್
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಹಾಸನ: ಭ್ರಷ್ಟಾಚಾರ ಆರೋಪಕ್ಕೆ ಸಾಕ್ಷ್ಯ ನೀಡಲಿ ಎಂಬ ಬಿಜೆಪಿ ನಾಯಕರ(BJP Leaders) ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಲಂಚ ಕೊಟ್ಟಿದ್ದಕ್ಕೆ ಯಾರಾದರೂ ರಶೀದಿ ಕೊಡ್ತಾರೇನ್ರಿ? ಎಂದು ಟಾಂಗ್ ಕೊಟ್ಟಿದ್ದಾರೆ.

ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ಮಾಡಲಿ ಸತ್ಯ ಗೊತ್ತಾಗುತ್ತೆ. ನ್ಯಾಯಾಂಗ ತನಿಖೆಯಾದ್ರೆ ದಾಖಲೆ ಕೊಡುವುದಾಗಿ ಕೆಂಪಣ್ಣ ಹೇಳಿದ್ದಾರೆ. ಆರೋಪ ಸಾಬೀತಾಗದಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದಿದ್ದಾರೆ. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಬಗ್ಗೆ ಭಯ ಯಾಕೆ? ನೀವು ಪ್ರಾಮಾಣಿಕರಲ್ಲವೇ? ಹಾಗಿದ್ದರೆ ಹೆದರುವುದು ಯಾಕೆ? ಕೆಂಪಣ್ಣ ಕಾಂಗ್ರೆಸ್ಸೋ ಬಿಜೆಪಿಯೋ ನನಗೆ ಗೊತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್​ನಲ್ಲಿ ಇದ್ದರಾ? ಗುತ್ತಿಗೆದಾರರ ಸಂಘದಲ್ಲಿ ಬಿಜೆಪಿ ಸೇರಿ ಎಲ್ಲಾ ಪಕ್ಷದವರು ಇದ್ದಾರೆ. ಕೆಂಪಣ್ಣ ನನಗೆ ಗೊತ್ತಿರುವ ಹಾಗೆ ಯಾವ ಪಕ್ಷದಲ್ಲೂ ಇಲ್ಲ. ಪಕ್ಷಾತೀತವಾಗಿ ಗುತ್ತಿಗೆದಾರ ಸಂಘದ ಕೆಂಪಣ್ಣ ಭೇಟಿಯಾಗಿದ್ದಾರೆ. ಕಮಿಷನ್​ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲು ನನಗೆ ಹೇಳಿದ್ದಾರೆ. ಸದನಲ್ಲಿ ಕಮಿಷನ್ ಆರೋಪವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದೇನೆ ಎಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿದರು.

ಒಬ್ಬ ಪಕ್ಷ ಬಿಟ್ಟು ಹೋಗುವುದರಿಂದ ಏನೂ ಹಿನ್ನಡೆ ಆಗುವುದಿಲ್ಲ

ಬಿಜೆಪಿಯವರು ಹೇಳುವುದು ಒಂದು, ಮಾಡೋದು ಮತ್ತೊಂದು. ಬಿಜೆಪಿಯವರು ಮಹಾನ್ ಸುಳ್ಳುಗಾರರು, ಸತ್ಯ ಮುಚ್ಚಿ ಹಾಕ್ತಾರೆ. ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ನಾರಾಯಣಗುರು, ಕನಕದಾಸರು ಸೇರಿದಂತೆ ಹಲವರ ಚರಿತ್ರೆಯನ್ನೇ ತಿರುಚಿ ಹಾಕಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಪಕ್ಷ ಬಿಟ್ಟು ಹೋಗುವುದರಿಂದ ಏನೂ ಹಿನ್ನಡೆ ಆಗುವುದಿಲ್ಲ. ಪಕ್ಷ ಮುಳುಗಡೆ ಆಗಿ ಬಿಡುತ್ತೆ, ಬಹಳ‌ ಹಿನ್ನಡೆ ಆಗುತ್ತೆ ಎಂಬುದಿಲ್ಲ. ಬಿಜೆಪಿಯವರು ಕುಣಿಗಲ್‌‌ನಿಂದ ಟಿಕೆಟ್ ಕೊಡ್ತೀವೆಂದು ಹೇಳಿದ್ದಾರೆ. ಹೀಗಾಗಿ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಸಿಟ್ಟಿಂಗ್ ಎಂಎಲ್‌ಎ ಬಿಟ್ಟು ನಾವು ಹೇಗೆ ಟಿಕೆಟ್ ಕೊಡಲು ಆಗುತ್ತೆ. ಕುಣಿಗಲ್‌ನಿಂದ ಟಿಕೆಟ್ ಕೊಟ್ಟಿದ್ರೆ ಪಕ್ಷದಲ್ಲೇ ಉಳಿದುಕೊಳ್ಳೋರು ಆದರೆ ನಮ್ಮಲ್ಲಿ ಸಿಟ್ಟಿಂಗ್ ಎಂಎಲ್‌ಎ ಇದ್ದಾರೆ ಎಂದರು.

ಅರವಿಂದ ಲಿಂಬಾವಳಿ ಜನಪ್ರತಿನಿಧಿ ಆಗಲು ನಾಲಾಯಕ್

ಇನ್ನು ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ನಿಂದನೆ ಆರೋಪಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಮಾತನಾಡಿದ್ದು, ಅರವಿಂದ ಲಿಂಬಾವಳಿ ಜನಪ್ರತಿನಿಧಿ ಆಗಲು ನಾಲಾಯಕ್. ಮಹಿಳೆ ರಾಜಕಾಲುವೆ ಒತ್ತುವರಿ ಮಾಡಿದ್ದರೆ ಕ್ರಮ ಕೈಗೊಳ್ಳಿ. ಕಷ್ಟ-ಸುಖ ಹೇಳಿಕೊಳ್ಳಲು ಬಂದಾಗ ಕೆಟ್ಟದಾಗಿ ಬೈಯ್ಯೋದಾ?ಆಯಮ್ಮನಿಗೆ ರೇಪ್​ ಮಾಡಿದ್ದೀವಾ ಎಂದರೆ ಏನು ಅರ್ಥ? ತಾಳ್ಮೆಯಿಂದ ಮಹಿಳೆಯ ಕಷ್ಟ-ಸುಖ ಕೇಳಬೇಕು ಅಲ್ಲವೇ? ಲಿಂಬಾವಳಿ ಶಾಸಕರಾಗಲಿ ಲಾಯಕ್ಕಾ, ನಾಲಾಯಕ್ಕಾ ಹೇಳಿ? ಎಂದು ಹಾಸನ ಜಿಲ್ಲೆ ಗೊಲ್ಲರಹೊಸಳ್ಳಿಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:57 pm, Sun, 4 September 22