ಒಂದು ಕಂಟ್ರೋಲ್ ರೂಂ ಸಿದ್ಧತೆಗಾಗಿ 50 ಲಕ್ಷಕ್ಕೆ ಟೆಂಡರ್: ಹಾಸನಾಂಬೆ ಜಾತ್ರೆಯ ಖರ್ಚು ಕೇಳಿ ಶಾಕ್​ ಆದ ಸಚಿವ ಶಿವಲಿಂಗೇಗೌಡ

ಹಾಸನಾಂಬೆ ಉತ್ಸವದ ಸಿದ್ಧತಾ ಸಭೆಯಲ್ಲಿ ಒಂದು ಕಂಟ್ರೋಲ್ ರೂಂ ನಿರ್ಮಾಣಕ್ಕೆ 50 ಲಕ್ಷ ರೂ. ಟೆಂಡರ್ ವಿಚಾರ ಕೇಳಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಶಾಕ್​​ ಆಗಿದ್ದಾರೆ. ನಾಲ್ಕು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 65 ಲಕ್ಷ ಟೆಂಡರ್ ಬಗ್ಗೆ ಕೇಳಿಯೂ ಕಂಗಾಲಾದ ಸಚಿವರು, ನಾನು ಆತ್ಮಸಾಕ್ಷಿಗೆ ವಿರುದ್ಧ ನಡೆಯಲ್ಲ ಮತ್ತು ಆತ್ಮ ಒಪ್ಪದೆ ಹೋದರೆ ಮಾಡಲ್ಲ. ಬೇಕಿದ್ರೆ ಸಿಎಂಗೆ ಹೇಳಿ ವಾಪಸ್ ಹೋಗ್ತಿನಿ ಎಂದು ತಿಳಿಸಿದ್ದಾರೆ.

ಒಂದು ಕಂಟ್ರೋಲ್ ರೂಂ ಸಿದ್ಧತೆಗಾಗಿ 50 ಲಕ್ಷಕ್ಕೆ ಟೆಂಡರ್: ಹಾಸನಾಂಬೆ ಜಾತ್ರೆಯ ಖರ್ಚು ಕೇಳಿ ಶಾಕ್​ ಆದ ಸಚಿವ ಶಿವಲಿಂಗೇಗೌಡ
ಸಚಿವ ಶಿವಲಿಂಗೇಗೌಡ ನೇತೃತ್ವದಲ್ಲಿ ಸಭೆ
Image Credit source: Tv9 Kannada
Edited By:

Updated on: Oct 09, 2026 | 7:53 PM

ಹಾಸನ, ಅಕ್ಟೋಬರ್​​ 09: ಹಾಸನಾಂಬೆ ಉತ್ಸವ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಸಭೆ ನಡೆಯಿತು. ಈ ವೇಳೆ ತಯಾರಿ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಹಾಸನಾಂಬೆ ಜಾತ್ರೆಯ ಖರ್ಚು ಕೇಳಿ ಶಿವಲಿಂಗೇಗೌಡ ಶಾಕ್​ ಆಗಿದ್ದಾರೆ. ಒಂದು ಕಂಟ್ರೋಲ್ ರೂಂ ಸಿದ್ಧತೆಗಾಗಿ 50 ಲಕ್ಷಕ್ಕೆ ಟೆಂಡರ್ ಎಂದು ಅಧಿಕಾರಿಗಳು ಹೇಳಿದ್ದು ಕೇಳಿ ಕಂಗಾಲಾದ ಸಚಿವರು, ಒಂದು ಕಂಟ್ರೋಲ್ ರೂಂಗೆ ಇಷ್ಟು ದುಡ್ಡಾ ಎಂದು ಪ್ರಶ್ನಿಸಿದ್ದಾರೆ. ಐವತ್ತು ಲಕ್ಷ ಅಂದ್ರೆ ಅರ್ಧ ಕೋಟಿ ರೀ… ಜನ ಏನಂತಾರೆ? ರಾಜ್ಯದಲ್ಲಿ ಬರಗಾಲ ಇದೆ ಜನರು ಏನು ಮಾತನಾಡುತ್ತಾರೆ ಎಂದು ಕೇಳಿದ್ದಾರೆ.

‘ನಾನು ಆತ್ಮಸಾಕ್ಷಿಗೆ ವಿರುದ್ಧ ನಡೆಯಲ್ಲ’

ಈ ವೇಳೆ ಸರ್ ಹಂಗೆಲ್ಲಾ ಹೇಳ್ಬೇಡಿ ಎಂದು ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದ್ದು, ಬೇಡ ಅಂದ್ರೆ ಡಿಲೀಟ್ ಮಾಡಿಸೋಣ ಎಂದು ತಿಳಿಸಿದ್ದಾರೆ. ಹಂಗಲ್ಲ ಮೇಡಂ, ಒಂದು ಕಂಟ್ರೋಲ್ ರೂಂಗೆ ಇಷ್ಟು ಹಣನಾ? ನನಗೆ ಒಂದೂ ಅರ್ಥ ಆಗ್ತಿಲ್ಲ. ಜಾತ್ರೆ ಚೆನ್ನಾಗಿ ಮಾಡಬೇಕು ಅನ್ನೋದು ನನಗೂ ಸಹ ಇಷ್ಟ. ಆದರೆ ಇಷ್ಟೊಂದು ದುಂದುವೆಚ್ಚಾ ಬೇಕಾ? ಈ ಕರ್ಮದಲ್ಲಿ ನಾನು ಪಾಲುದಾರ ಆಗ್ಬೇಕಾ ಎಂದು ಪ್ರಶ್ನಿಸಿದ್ದಾರೆ. ನಾನು ಆತ್ಮಸಾಕ್ಷಿಗೆ ವಿರುದ್ಧ ನಡೆಯಲ್ಲ, ಆತ್ಮ ಒಪ್ಪದೆ ಹೋದರೆ ಮಾಡಲ್ಲ. ಬೇಕಿದ್ರೆ ಸಿಎಂಗೆ ಹೇಳಿ ವಾಪಸ್ ಹೋಗ್ತಿನಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ದಿನಾಂಕ ಫಿಕ್ಸ್: ಈ ಬಾರಿ ಹೇಗಿರಲಿದೆ ಉತ್ಸವ? ವಿವರಗಳು ಇಲ್ಲಿವೆ

ನಾಲ್ಕು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 65 ಲಕ್ಷ ಟೆಂಡರ್ ಬಗ್ಗೆ ಕೇಳಿಯೂ ಕಂಗಾಲಾದ ಸಚಿವರು, ಅಯ್ಯೋ ಇದರಲ್ಲೆಲ್ಲ ನಾನು ಭಾಗಿಯಾಗಲ್ಲ. ನೀವು ಅದೇನೊ ಮಾಡ್ಕೊಳಿ ಎಂದಿದ್ದಾರೆ. ಈ ವೇಳೆ ನೀವು ಬೇಡ ಎಂದರೆ ಬೇಡ ಸರ್ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾನು ಬೇಡ ಎಂದು ಹೇಳಲ್ಲ. ಆದರೆ ಆದರೆ ಇಷ್ಟೊಂದು ಹಣ ಯಾಕೆ? ಅದರ ಮೊತ್ತ ಕಡಿಮೆ‌ಮಾಡಿ ಎನ್ನುವುದು ನನ್ನ ಅಭಿಪ್ರಾಯ ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದ ಪ್ರಸಂಗ ನಡೆದಿದೆ. ಕ್ರೌಡ್ ಮ್ಯಾನೇಜ್ಮೆಂಟ್​​ಗಾಗಿ ಎಐ ಟೆಕ್ನಾಲಜಿ ಬಳಸಲು 12 ಲಕ್ಷ ಮೀಸಲು ಬಗ್ಗೆಯೂ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದು, ಈ ಎಐ ಬಗ್ಗೆ ನಂಗೇನು ಗೊತ್ತಿಲ್ಲ. ನಂಗೆ ಗೊತ್ತಿರದಿಲ್ಲೊದನ್ನ ಗೊತ್ತು ಎನ್ನಲ್ಲ. ನೀವು ಅದೇನೋ ಮಾಡಿ ಎಂದು ಸಚಿವರು ಅಧಿಕಾರಿಗಳಿಗೆ ಇದೇ ವೇಳೆ ತಿಳಿಸಿದ್ದಾರೆ.

ಗುತ್ತಿಗೆದಾರರ ಜೊತೆಗೂ ಸಚಿವರ ಚೌಕಾಸಿ!

ಕಾಮಗಾರಿಗಳ ಬಿಲ್​​​ ಕಡಿಮೆ ಮಾಡಿ ಎಂದು ಸಭೆಯಲ್ಲಿ ಗುತ್ತಿಗೆದಾರನ ಜತೆ ಶಿವಲಿಂಗೇಗೌಡ ಚೌಕಾಸಿ ಕೂಡ ಮಾಡಿದ್ದಾರೆ. ದೇವರ ಕೆಲಸ ಮಾಡ್ತೀರಾ ಕಡಿಮೆ ದರಕ್ಕೆ ಕೆಲಸ ಮಾಡಿ ಎಂದ ಸಚಿವರು, ಕೆಲಸ ಚೆನ್ನಾಗಿ ಮಾಡದಿದ್ರೆ ನಾನು ಬಿಲ್​ ಕೊಡುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:31 pm, Fri, 9 October 26

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us