ಹಾಸನ ಜಿಲ್ಲೆ (Hassan) ಚನ್ನರಾಯಪಟ್ಟಣ ತಾಲೂಕಿನಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತವಾಗಿ ಒಂದೇ ಬೈಕ್ನಲ್ಲಿ ಹೊರಟಿದ್ದ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದರು (bike accident). ಅದರಲ್ಲಿ ಮಕ್ಕಳಿಬ್ಬರು ಮತ್ತು ಅಪ್ಪ-ಅಮ್ಮ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಆ ಮಕ್ಕಳು ಬೈಕಿನಲ್ಲಿ ಹೊರಟಿದ್ದು ಅಪ್ಪ-ಅಮ್ಮನ ಜೊತೆ ಅಲ್ಲ; ಬದಲಿಗೆ ಸೋದರ ಮಾವ ಮತ್ತು ಅತ್ತೆಯ ಜೊತೆ (relatives). ಅಲ್ಲಿಗೆ ಅಪ್ಪ-ಅಮ್ಮ (Parents) ಬದುಕುಳಿದಿದ್ದು, ಅವರ ಇಬ್ಬರೂ ಮಕ್ಕಳು (children) ಅಪಘಾತದಲ್ಲಿ ಅಸುನೀಗಿದ್ದಾರೆ.
ಇಬ್ಬರು ಮಕ್ಕಳ ಕಳೆದುಕೊಂಡ ಹೆತ್ತವರ ಕಣ್ಣೀರು..
ಆ ಪುಟಾಣಿ ಕಂದಮ್ಮಗಳು ಅತ್ತೆ ಮಾವನ ಜೊತೆಗೆ ಸಂಬಂಧಿಕರ ಮನೆಗೆ ಊಟಕ್ಕೆಂದು ಹೋಗಿದ್ದರು. ಊಟ ಮುಗಿಸಿ ರಾತ್ರಿಯೇ ಬೈಕ್ ನಲ್ಲಿ ವಾಪಸ್ ಮನೆಯತ್ತ ಹೊರಟಿದ್ರು, ಇನ್ನೇನು ಐದಾರು ಕಿಲೋ ಮೀಟರ್ ಕ್ರಮಿಸಿದ್ದರೆ ಮನೆ ಸೇರಿಕೊಂಡು ಸಿಹಿನಿದ್ರೆಗೆ ಜಾರಬೇಕಿತ್ತು. ಆದ್ರೆ ದಾರಿಯಲ್ಲೇ ಕಾದು ಕುಳಿತಿದ್ದ ಜವರಾಯ ಇಬ್ಬರೂ ಪುಟಾಣಿಗಳ ಜೊತೆ ಅವರನ್ನ ಕರೆದೊಯ್ದಿದ್ದ ಅತ್ತೆ ಮಾವನನ್ನು ಬಲಿ ಪಡೆದಿದೆ, ಕತ್ತಲ ರಾತ್ರಿಯಲ್ಲಿ ರಸ್ತೆಯಲ್ಲಿ ನಿಂತಿದ್ದ ಟ್ಯ್ರಾಕ್ಟರ್ ಗಮನಿಸದೆ ಹಿಂಬದಿಯಿಂದ ಡಿಕ್ಕಿಯಾದ ಬೈಕ್ ನಲ್ಲಿದ್ದ ಇಬ್ಬರು ಮಕ್ಕಳುಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಪುಟ್ಟ ಮಕ್ಕಳ ದಾರುಣ ಸಾವಿಗೆ ಎಲ್ಲರೂ ಮರುಗುತ್ತಿದ್ದಾರೆ.
ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಬಲಿ… ಊಟಕ್ಕೆ ಹೊರಟಿದ್ದ ಮಕ್ಕಳನ್ನು ಬಲಿ ಪಡೆದ ಅಜಾಗರೂಕತೆಯ ರೇಡಿಂಗ್… ಅತ್ತೆ ಮಾವನ ಜೊತೆಗೆ ಊಟಕ್ಕೆ ಹೋಗಿದ್ದ ಪುಟಾಣಿಗಳ ಸಾವಿಗೆ ಮರುಗಿದ ಜನ…ಮಕ್ಕಳನ್ನ ಕಳೆದುಕೊಂಡು ಹೆತ್ತವರ ಕಣ್ಣೀರು.. ಹೌದು ನಿನ್ನೆ ರಾತ್ರಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಾರೆಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ಮೂಲತಃ ಬೆಂಗಳೂರಿನ ಗುಂಜನಪಾಳ್ಯದ ಚಂದ್ರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನವಿಲೇ ಗೇಟ್ ನ ಸುಧಾ ಎಂಬುವವರನ್ನು ಮದುವೆಯಾಗಿ ಮಡದಿಯ ಮನೆಯಲ್ಲಿಯೇ ನೆಲಸಿದ್ದರು.
ಆದ್ರೆ ಏಳು ತಿಂಗಳ ಹಿಂದೆ ವಾಪಸ್ ಬೆಂಗಳೂರಿಗೆ ಪತ್ನಿ ಜೊತೆಗೆ ತೆರಳಿದ್ದ ಚಂದ್ರು ತನ್ನ ಇಬ್ಬರು ಮಕ್ಕಳಾದ ಗಾನವಿ ಮತ್ತು ಲೇಖನಾಳನ್ನ ತನ್ನ ಬಾವ ಮೈದುನ ಯೋಗೇಶ್ ಮನೆಯಲ್ಲೇ ಬಿಟ್ಟಿದ್ದರು. ಮಾವನ ಮನೆಯಲ್ಲಿದ್ದುಕೊಂಡೇ ಶಾಲೆಗೆ ಹೋಗುತ್ತಿದ್ದ ಪುಟಾಣಿಗಳು ನಿನ್ನೆ ರಾತ್ರಿ ಮಾವ ಯೋಗೇಶ್ (43) ಅತ್ತೆ ಲಕ್ಷ್ಮಿ(33) ಜೊತೆಗೆ ಬಿ. ಹೊಸೂರಿನಲ್ಲಿರುವ ದೊಡ್ಡಮ್ಮನ ಮನೆಗೆ ಊಟಕ್ಕೆ ಹೋಗಿದ್ದರು.
ಊಟ ಮುಗಿಸಿ ವಾಪಸ್ ಬೈಕ್ ನಲ್ಲಿ ಅತ್ತೆ ಮಾವನ ಜೊತೆಗೆ ರಾತ್ರಿ 10 ಗಂಟೆ ಸುಮಾರಿಗೆ ಬರುತ್ತಿದ್ದ ವೇಳೆ ದಾರಿಯಲ್ಲಿ ಡೀಸಲ್ ಖಾಲಿಯಾಗಿ ರಸ್ತೆ ನಡುವೆ ನಿಂತಿದ್ದ ಟ್ರ್ಯಾಕ್ಟರ್ ನೋಡದೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಈ ನಾಲ್ವರೂ ಕೂಡ ಸ್ಥಳದಲ್ಲೇ ಅಸುನೀಗಿದ್ದಾರೆ. ರಾತ್ರಿ 11 ಗಂಟೆ ವೇಳೆಗೆ ಅಪಘಾತ ನಡೆದ ವಿಚಾರ ತಿಳಿದು ಸ್ಥಳಕ್ಕೆ ಬಂದುನೋಡುವಷ್ಟರಲ್ಲಿ 10 ವರ್ಷದ ಗಾನವಿ, 7 ವರ್ಷದ ಲೇಖನ ಮತ್ತು ಯೋಗೇಶ್ -ಲಕ್ಷ್ಮಿ ದಂಪತಿ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವ್ಯಾಸಂಗಕ್ಕೆಂದು ಮಕ್ಕಳನ್ನು ಬಿಟ್ಟು ಬೆಂಗಳೂರಿನಲ್ಲಿದ್ದ ಪೋಷಕರು ಮಕ್ಕಳನ್ನ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಊಟಕ್ಕೆಂದು ಹೋಗಿ ಭೀಕರ ಅಪಘಾತದಲ್ಲಿ ನಾಲ್ವರು ಬಲಿಯಾಗಿದ್ದು ಸಂಬಂಧಿಕರ ಆಕ್ರಮಂದನ ಮುಗಿಲು ಮುಟ್ಟಿತ್ತು.
ಇನ್ನೊಂದು ತಿಂಗಳು ಕಳೆದಿದ್ದರೆ, ಪರೀಕ್ಷೆ ಮುಗಿಸಿ ಹೆತ್ತವರ ಜೊತೆ ಸೇರಬೇಕಿದ್ದ ಮಕ್ಕಳು
ನಿನ್ನೆ ಸಂಜೆ ನವಿಲೇ ಗೇಟ್ ಮನೆಯಿಂದ ತನ್ನ ಪತ್ನಿ ಹಾಗು ತಂಗಿ ಮಕ್ಕಳನ್ನ ಬೈಕ್ ನಲ್ಲಿ ಕರೆದುಕೊಂಡು ಬಿ.ಹೊಸೂರಿಗೆ ಹೋಗಿದ್ದ ಯೋಗೇಶ್ ಊಟ ಮುಗಿಸಿ ವಾಪಸ್ ಹೊರಟಿದ್ದಾರೆ. ರಾತ್ರಿಯಾಗಿದೆ ಬೆಳಿಗ್ಗೆ ಹೋಗಿ ಎಂದು ಹೇಳಿದರೂ ಕೇಳದೆ ಎಲ್ಲರೂ ರಾತ್ರಿಯೇ ಹೊರಟಿದ್ದಾರೆ. ಇನ್ನೇನು ಐದಾರು ಕಿಲೋ ಮೀಟರ್ ಹೋಗಿದ್ರೆ ಮನೆ ಸೇರಬಹುದಿತ್ತು. ಆದರೆ ಚನ್ನರಾಯಪಟ್ಟಣ ತಿಪಟೂರು ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ… ರಾತ್ರಿಯಾಗಿದೆ, ಬೇಗನೆ ಮನೆ ಸೇರಬೇಕೆಂಬ ಆತುರದಿಂದ ವೇಗವಾಗಿ ಬೈಕ್ ನಲ್ಲಿ ತೆರಳುವ ವೇಳೆ ರಸ್ತೆಯ ತಿರುವಿನಲ್ಲಿ ಡೀಸಲ್ ಖಾಲಿಯಾಗಿ ನಿಂತಿದ್ದ ಟ್ರ್ಯಾಕ್ಟರ್ ಕಂಡಿಲ್ಲ.
ವೇಗವಾಗಿ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ತಕ್ಷಣ ಸ್ಥಳೀಯ ನುಗ್ಗೆಹಳ್ಳಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹಗಳನ್ನ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ.
ಭೀಕರ ಅಪಘಾತದಿಂದ ಇಬ್ಬರು ಮಕ್ಕಳು ಹಾಗೂ ಇನ್ನೂ ಚಿಕ್ಕ ಪ್ರಾಯದವರನ್ನ ಕಳೆದುಕೊಂಡು ಸಂಬಂಧಿಕರ ರೋದನ ಕರುಣಾಜನಕವಾಗಿತ್ತು. ಇನ್ನೊಂದು ತಿಂಗಳು ಕಳೆದಿದ್ದರೆ, ಪರೀಕ್ಷೆ ಮುಗಿಸಿ ಹೆತ್ತವರ ಜೊತೆ ಸೇರಬೇಕಿದ್ದ ಮಕ್ಕಳು ಸಂಬಂಧಿಕರ ಮನೆಯ ಊಟಕ್ಕೆಂದು ಹೋಗಿ ಬಾರದ ಲೋಕಕ್ಕೆ ಹೊರಟಿದ್ದಾರೆ.
ಒಟ್ನಲ್ಲಿ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದವರ ಆತುರದ ಬೈಕ್ ರೇಡಿಂಗ್ ನಾಲ್ವರನ್ನು ಬಲಿ ಪಡೆದಿದೆ. ಬೇಗನೆ ಮನೆ ಸೇರಬೇಕೆಂಬ ಆತುರದಲ್ಲಿ ಮಾಡಿದ ಯಡವಟ್ಟಿನಿಂದ ಆದ ಅನಾಹುತ ಪುಟ್ಟ ಕಂದಮ್ಮಗಳೂ ಸೇರಿ ನಾಲ್ವರನ್ನು ಬಲಿ ಪಡೆದಿದ್ದು ನಿಜಕ್ಕೂ ದುರಂತವೇ ಸರಿ.
ವರದಿ: ಮಂಜುನಾಥ್ ಕೆ.ಬಿ, ಟಿವಿ 9, ಹಾಸನ