ಹಾಸನ ಟಿಕೆಟ್ ಫೈಟ್: ಹಾಸನ ಅಖಾಡದಲ್ಲಿ ಕ್ಷಣಕ್ಕೊಂದು ತಿರುವು, ದಿನಕ್ಕೊಂದು ಬೆಳವಣಿಗೆ, ಹೆಚ್ಡಿಕೆಗೆ ದೊಡ್ಡಗೌಡ್ರ ಖಡಕ್ ಸೂಚನೆ
ಹಾಸನ ಜೆಡಿಎಸ್ ಟಿಕೆಟ್ ವಿಚಾರವಾಗಿ ದಳ ಮನೆಯಲ್ಲಿ ಶುರುವಾದ ಫೈಟ್ ತಾರಕಕ್ಕೇರಿದ್ದು, ದೇವೇಗೌಡ ಮಧ್ಯೆ ಪ್ರವೇಶಿಸಿ ಖಡಕ್ ಸೂಚನೆ ಕೊಟ್ಟಿದ್ದಾರೆ. ಇದರಿಂದ ಹಾಸನ ಅಖಾಡದಲ್ಲಿ ಕ್ಷಣಕ್ಕೊಂದು ತಿರುವು, ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ.
ಬೆಂಗಳೂರು: ಹಾಸನ ಟಿಕೆಟ್ ಫೈಟ್ (Hassan Ticket Fight) ದಳಪತಿ ಮನೆಯಲ್ಲಿ ದಂಗಲ್ ಸೃಷ್ಟಿಸಿದೆ. ಹಾಸನ ಟಿಕೆಟ್ ಬೇಕೇ ಬೇಕು ಎಂದು ರೇವಣ್ಣ (HD Revanna) ಕುಟುಂಬ ಬಿಗಿ ಪಟ್ಟು ಹಿಡಿದಿದೆ. ಒಂದು ಕಡೆ ಭವಾನಿ ರೇವಣ್ಣ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎನ್ನುವ ಮಟ್ಟಿಗೆ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತಾಡುತ್ತಿದ್ದಾರೆ. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿ ಸ್ವರೂಪ್ ಭವಾನಿ ಅಬ್ಬರದ ನಡುವೆ ಸೈಲೆಂಟ್ ಆಗಿದ್ದಾರೆ. ಹಾಸನದಲ್ಲಿ ನಡೆಯುತ್ತಿರುವ ಹೈಡ್ರಾಮಾ ದಳಪತಿಗಳಿಗೆ ಕಬ್ಬಿಣದ ಕಡಲೆಯಂತಾಗಿದೆ. ಅಣ್ಣ ಒಂದು ಲೆಕ್ಕಚಾರ ಹಾಕಿದ್ರೆ, ತಮ್ಮ ಮತ್ತೊಂದು ಲೆಕ್ಕಾಚಾರದಲ್ಲಿದ್ದಾರೆ. ಪ್ರತಿಷ್ಠೆಯ ಜಿದ್ದಾಜಿದ್ದಿಯಲ್ಲಿ ಸಹೋದರರ ಅಂತರಂಗ, ಬಹಿರಂಗ ಗುದ್ದಾಟದ ನಡುವೆ ದೊಡ್ಡಗೌಡ್ರು(HD Devegowda) ಪ್ರವೇಶಿಸಿದ್ದಾರೆ.
ಹೆಚ್ಡಿಕೆಗೆ ದೊಡ್ಡಗೌಡ್ರ ಖಡಕ್ ಸೂಚನೆ
ಹಾಸನ ಟಿಕೆಟ್ ಗೊಂದಲ ನಿವಾರಿಸಲು ಕುಮಾರಸ್ವಾಮಿ ಕರೆದ ಮೀಟಿಂಗ್ ನಡೆಸಲು ಸಕಲ ಸಿದ್ಧತೆ ನಡೆಸಿದ್ದರು. ಈ ಮೂಲಕ ಮನೆಯಲ್ಲೇ ದೊಡ್ಡ ಯುದ್ಧಕ್ಕೆ ಕಾರಣವಾಗಿರುವ ಹಾಸನ ಟಿಕೆಟ್ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿತ್ತು. ಆದ್ರೆ, ಇದರ ಮಧ್ಯೆ ದೇವೇಗೌಡರು ಅಖಾಡಕ್ಕೆ ಇಳಿದಿದ್ದು, ಟಿಕೆಟ್ ಗೊಂದಲ ನಿವಾರಣೆಗೆ ಹೆಚ್ಡಿಕೆ ಆಯೋಜಿಸಿದ್ದ ಮೀಟಿಂಗ್ಅನ್ನೇ ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಇದೀಗ ದೇವೇಗೌಡ ಮತ್ತೊಂದು ಹೆಜ್ಜೆ ಮುಂದಿಟ್ಟು ನನ್ನ ಗಮನಕ್ಕೆ ಬಾರದೇ ಯಾವುದೇ ನಿರ್ಧಾರ ಬೇಡ ಎಂದು ಕುಮಾರಸ್ವಾಮಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಭೆ ರದ್ದಾದ ಬಗ್ಗೆ ಕುಮಾರಸ್ವಾಮಿಯವರ ಗಮನಕ್ಕೂ ತರದೇ ಆದೇಶ ಹೊರಡಿಸಲಾಗಿತ್ತು. ಬಳಿಕ ಕುಮಾರಸ್ವಾಮಿ ಜೊತೆ ಮಾತನಾಡಿರುವ ಗೌಡ್ರು, ಹಾಸನ ಟಿಕೆಟ್ ವಿಚಾರವಾಗಿ ನನ್ನ ಗಮನಕ್ಕೆ ಬಾರದೇ ಯಾವುದೇ ನಿರ್ಧಾರ ಬೇಡ.ದಿಢೀರ್ ನಿರ್ಧಾರದಿಂದ ಗೊಂದಲ ಸೃಷ್ಟಿಯಾಗುತ್ತದೆ. ಆ ಕಾರಣಕ್ಕೆ ಸದ್ಯ ಯಾವುದೇ ನಿರ್ಧಾರ ಬೇಡ. ಟಿಕೆಟ್ ವಿಚಾರಕ್ಕೆ ಸಮಯವಿದೆ. ಕೂತು ಒಮ್ಮತದ ನಿರ್ಧಾರಕ್ಕೆ ಬರುವಂತೆ ಸೂಚಿಸಿದ್ದಾರೆ. ಅಲ್ಲದೇ ಹಾಸನ ಟಿಕೆಟ್ ನಿರ್ಧಾರದಿಂದ ಪಕ್ಷ ಮತ್ತು ಕುಟುಂಬಕ್ಕೆ ಹಿನ್ನೆಡೆಯಾಗದಂತೆ ಮುತುವರ್ಜಿ ವಹಿಸುವಂತೆ ಕುಮಾರಸ್ವಾಮಿಗೆ ಸಲಹೆ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಹಾಸನ ಟಿಕೆಟ್ ಫೈಟ್ ಇಲ್ಲಿಗೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಬದಲಿಗೆ ಇನ್ನಷ್ಟು ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ.
ಈ ಬಾರಿ ಹಾಸನದ ಜೆಡಿಎಸ್ ಟಿಕೆಟ್ ಯಾರಿಗೆ? ತಾವೇ ಘೋಷಿಸಿಕೊಂಡಿರುವಂತೆ ಭವಾನಿ ರೇವಣ್ಣಗೆ ಟಿಕೆಟ್ ಸಿಗುತ್ತಾ? ಅಥವಾ ಬಿಜೆಪಿಯ ಪ್ರೀತಂ ಗೌಡ ಸವಾಲಿಗೆ ಸೆಡ್ಡು ಹೊಡೆದಿರುವ ರೇವಣ್ಣ ಹಾಸನದ ಅಖಾಡಕ್ಕೆ ಇಳಿಯುತ್ತಾರಾ? ಇಲ್ಲ ಹೆಚ್.ಡಿ.ಕುಮಾರಸ್ವಾಮಿ ಶೋಧಿಸಿರುವ ಸ್ವರೂಪ್ ಗೌಡಗೆ ಟಿಕೆಟ್ ಸಿಗುತ್ತಾ? ಹೀಗೆ ಮೂರು ಪ್ರಶ್ನೆ, ಮೂರು ಆಯ್ಕೆ, ನೂರಾರು ತಂತ್ರ. ಆದ್ರೆ ಸಿಗಬೇಕಾಗಿರುವ ಉತ್ತರ, ಹೊರ ಬೀಳಬೇಕಾಗಿರುವ ನಿರ್ಧಾರ ಮಾತ್ರ ಒಂದೇ. ಹಾಸನದ ಅಭ್ಯರ್ಥಿ ಯಾರು ಎನ್ನುವುದು. ಆದ್ರೆ ಇದೇ ಉತ್ತರ ಹುಡುಕುತ್ತಿರುವ ದಳಪತಿಗಳ ನಡೆಯಿಂದಲೇ ಟಿಕೆಟ್ ವಿಚಾರ ಮತ್ತಷ್ಟು ಕಗ್ಗಂಟ್ಟಾಗುತ್ತಿದೆ.