ಹಾಸನ: ಗಣೇಶ ಮೆರವಣಿಗೆ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಟ್ರಕ್ ಅಪಘಾತ ಸಂಭವಿಸಿ 9 ಜನರು ಸಾವನ್ನಪ್ಪಿದ್ದಾರೆ. ಸದ್ಯ ಈ ದುರಂತಕ್ಕೆ ರಾಜ್ಯದ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಪರಿಹಾರ ಘೋಷಿಸಿದ್ದಾರೆ.

ಹಾಸನ: ಗಣೇಶ ಮೆರವಣಿಗೆ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ
ಅಪಘಾತ, ಪ್ರಧಾನಿ ಮೋದಿ

Updated on: Sep 13, 2025 | 10:29 AM

ಹಾಸನ, ಸೆಪ್ಟೆಂಬರ್​ 13: ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ಗಣಪತಿ ಮೆರವಣಿಗೆ (Ganesh idol impression) ವೇಳೆ ಟ್ರಕ್ ಹರಿದು ವಿದ್ಯಾರ್ಥಿಗಳು ಸೇರಿ 9 ಜನರು ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜೊತೆಗೆ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ 

ಈ ಕುರಿತಾಗಿ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಹಾಸನದಲ್ಲಿ ನಡೆದ ದುರಂತ ಇದೊಂದು ಹೃದಯವಿದ್ರಾವಕ ಘಟನೆ. ದುಃಖಗೊಂಡಿರುವ ಕುಟುಂಬಗಳಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್​

ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಪ್ರಧಾನಿ ಮೋದಿ, ಪಿಎಂ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರಿಗೆ ತಲಾ 2 ಲಕ್ಷ ರೂ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದ್ದು, ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ದುರಂತದ ಬಗ್ಗೆ ಹಾಸನ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ನಿಗಾವಹಿಸಿದ್ದು, ಅಧಿಕಾರಿಗಳು-ವೈದ್ಯರ ತಂಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ: ಹಾಸನ ಟ್ರಕ್ ಅಪಘಾತ: ಮನೆಗೆ ಆಧಾರವಾಗಬೇಕಿದ್ದ ಯುವಕರೇ ಸಾವು, ಒಬ್ಬೊಬ್ಬರದು ಒಂದೊಂದು ಕಣ್ಣೀರ ಕಥೆ

ರಾತ್ರಿಯೇ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹಗಳ ಹಸ್ತಾಂತರ ಮಾಡಲಾಗಿದೆ. ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ತಜ್ಞ ವೈದ್ಯರ ತಂಡದ ರವಾನೆ ಆಗಿದ್ದು, ಗಾಯಾಳುಗಳ ಚಿಕಿತ್ಸೆಗೆ ಖುದ್ದಾಗಿ ಡಿಹೆಚ್​ಒ ಉಸ್ತುವಾರಿ ವಹಿಸಿದ್ದಾರೆ. ಅಗತ್ಯ ವೈದ್ಯರ ತಂಡವನ್ನು ರಚಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಾದ ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಕ್ಯಾಂಟರ್ ಚಾಲಕ ಭುವನ್ ವಿರುದ್ಧ ಎಫ್​ಐಆರ್​​ ದಾಖಲು

ಕ್ಯಾಂಟರ್ ಚಾಲಕ ಭುವನ್ ವಿರುದ್ಧ ಗೊರೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸದ್ಯ ಹಲ್ಲೆಗೊಳಗಾಗಿದ್ದ ಚಾಲಕ ಭುವನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಬಗ್ಗೆ ಪೊಲೀಸರು ಗೌಪ್ಯತೆ ಕಾಪಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 am, Sat, 13 September 25