ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ: ಹಾಸನದಲ್ಲಿ ಒಎಂಆರ್ ಶೀಟ್ ಅದಲು ಬದಲು! ಡಿಸಿ ಹೇಳಿದ್ದೇನು?

ಹಾಸನ ನಗರದ ಗಂಧದ ಕೋಠಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ನಡೆದ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಯಲ್ಲಿ OMR ಶೀಟ್ ಹಾಗೂ ಪ್ರಶ್ನೆಪತ್ರಿಕೆ ಸಂಖ್ಯೆ ಅದಲು-ಬದಲಾಗಿದೆ ಎಂಬ ವದಂತಿಯಿಂದ ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲತಾಕುಮಾರಿ, KEA ಅಧಿಕಾರಿಗಳ ಜೊತೆ ಮಾತನಾಡಿ ತಾಂತ್ರಿಕವಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ, ಅಭ್ಯರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ: ಹಾಸನದಲ್ಲಿ ಒಎಂಆರ್ ಶೀಟ್ ಅದಲು ಬದಲು! ಡಿಸಿ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Image Credit source: gettyimages.com
Edited By:

Updated on: Aug 02, 2026 | 2:18 PM

ಮುಖ್ಯಾಂಶಗಳು

  • ಹಾಸನ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ವೇಳೆ OMR ಶೀಟ್ ಗೊಂದಲ.
  • ಪ್ರಶ್ನೆಪತ್ರಿಕೆ ಮತ್ತು ಒಎಂಆರ್ ಸಂಖ್ಯೆ ವ್ಯತ್ಯಾಸದಿಂದ ಆತಂಕಗೊಂಡ ಅಭ್ಯರ್ಥಿಗಳು ಕೊಠಡಿಯಿಂದ ಹೊರಕ್ಕೆ.
  • ಯಾವುದೇ ಸಮಸ್ಯೆಯಿಲ್ಲ, ಆತಂಕ ಪಡಬೇಡಿ ಎಂದು ಪರೀಕ್ಷಾರ್ಥಿಗಳಿಗೆ ಹಾಸನ ಜಿಲ್ಲಾಧಿಕಾರಿ ಅಭಯ.

ಹಾಸನ, ಆಗಸ್ಟ್ 02: ರಾಜ್ಯಾದ್ಯಂತ ಶನಿವಾರ ನಡೆದ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (PC) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಯ ವೇಳೆ, ಹಾಸನ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ಒಎಂಆರ್ (OMR) ಶೀಟ್‌ಗಳು ಅದಲು-ಬದಲಾಗಿವೆ ಎಂಬ ಗೊಂದಲ ಉಂಟಾಗಿ ಅಭ್ಯರ್ಥಿಗಳು ತೀವ್ರ ಆತಂಕಕ್ಕೊಳಗಾದ ಘಟನೆ ನಡೆದಿದೆ.

ಪರೀಕ್ಷಾ ಕೇಂದ್ರದಲ್ಲಿ ಗೊಂದಲ, ಅಭ್ಯರ್ಥಿಗಳ ಆಕ್ರೋಶ

ಹಾಸನ ನಗರದ ಗಂಧದ ಕೋಠಿ/ಆರ್.ಸಿ. ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಪರೀಕ್ಷಾ ಕೇಂದ್ರ ಸಂಖ್ಯೆ: 512) ನಲ್ಲಿ ಈ ಘಟನೆ ಸಂಭವಿಸಿದೆ. ಪರೀಕ್ಷೆ ಆರಂಭವಾದ ಸುಮಾರು ಒಂದು ಗಂಟೆಯ ಬಳಿಕ, ಎರಡು ಕೊಠಡಿಗಳಲ್ಲಿದ್ದ ಅಭ್ಯರ್ಥಿಗಳಿಗೆ ನೀಡಲಾದ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್‌ಗಳ ಸಂಖ್ಯೆ (Serial Number) ತಾಳೆಯಾಗುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಇದರಿಂದ ಆತಂಕಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಬಂದು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಪರೀಕ್ಷಾ ಹಾಲ್‌ನಲ್ಲಿ ಗಂಟೆಗೂ ಹೆಚ್ಚು ಕಾಲ ಗೊಂದಲ ಹಾಗೂ ಗಲಾಟೆ ನಡೆದಿದ್ದರಿಂದ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ ಎಂದು ಹಲವು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಸ್ಥಳಕ್ಕೆ ಡಿಸಿ ಭೇಟಿ: ಕೆಇಎ ಜೊತೆ ಮಾತುಕತೆ

ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಉಂಟಾಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಹಾಸನ ಜಿಲ್ಲಾಧಿಕಾರಿ (DC) ಲತಾಕುಮಾರಿ ಅವರು ಸ್ಥಳಕ್ಕೆ ಭೇಟಿ ನೀಡಿ, ಪರೀಕ್ಷಾ ಕೇಂದ್ರದ ಸಿಬ್ಬಂದಿ ಹಾಗೂ ಅಭ್ಯರ್ಥಿಗಳಿಂದ ಮಾಹಿತಿ ಪಡೆದರು. ಬಳಿಕ ಪರೀಕ್ಷಾ ಕೇಂದ್ರದಲ್ಲಿ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಭ್ಯರ್ಥಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

“ಎರಡು ಕೊಠಡಿಗಳಲ್ಲಿ ಗೊಂದಲವಾಗಿದೆ ಎಂದು ಅಭ್ಯರ್ಥಿಗಳು ಭಾವಿಸಿದ್ದರು. ಆದರೆ ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಯಾವುದೇ ರೀತಿಯ ಲೋಪವಾಗಿಲ್ಲ. ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಶೀಟ್ ಸಂಖ್ಯೆ ಬೇರೆ ಬೇರೆಯಾಗಿದ್ದರೂ ತಾಂತ್ರಿಕವಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ. ಪ್ರಶ್ನೆ ಪತ್ರಿಕೆ ಸಂಖ್ಯೆಯನ್ನು ಒಎಂಆರ್ ಶೀಟ್‌ನಲ್ಲಿ ಸರಿಯಾಗಿ ನಮೂದಿಸಿದರೆ ಸಾಕು. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಯಾವುದೇ ಅಭ್ಯರ್ಥಿಯೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.” ಎಂದು ಡಿಸಿ ಹೇಳಿದ್ದಾರೆ.

ಕೆಇಎ ಅಧಿಕಾರಿಗಳು ಸಹ ಪ್ರಶ್ನೆ ಪತ್ರಿಕೆ ಸಂಖ್ಯೆ ಹಾಗೂ ಒಎಂಆರ್ ಶೀಟ್ ಸಂಖ್ಯೆಯಲ್ಲಿ ವ್ಯತ್ಯಾಸವಾದರೂ ಮೌಲ್ಯಮಾಪನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪರೀಕ್ಷೆಯು ಸುಸೂತ್ರವಾಗಿ ಪೂರ್ಣಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us