ಶಿರಾಡಿ ಘಾಟ್​ನ​ ಹಲವೆಡೆ ಗುಡ್ಡ ಕುಸಿತ, ರಸ್ತೆಗೆ ಉರುಳಿದ ಬೃಹತ್​ ಬಂಡೆ: ವಾಹನ ಸವಾರರೇ ಎಚ್ಚರ

ಹಾಸನ ಜಿಲ್ಲೆಯ ಶಿರಾಡಿಘಾಟ್‌ನಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆ ಗುಡ್ಡ ಕುಸಿತ ಸಂಭವಿಸಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಈ ಸಮಸ್ಯೆ ಉಲ್ಬಣಗೊಂಡಿದೆ ಎನ್ನಲಾಗುತ್ತಿದೆ. ರಸ್ತೆಗೆ ಮಣ್ಣು ಮತ್ತು ಬಂಡೆಗಳು ಕುಸಿದು ಬಿದ್ದಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕಾಫಿ ಬೆಳೆಗಾರರು ಸಹ ಭಾರಿ ನಷ್ಟ ಅನುಭವಿಸುತ್ತಿದ್ದಾರೆ.

ಹಾಸನ, ಆಗಸ್ಟ್​ 18: ಹಾಸನ (Hassan) ಜಿಲ್ಲೆಯ ಶಿರಾಡಿಘಾಟ್ (Shiradi Ghat) ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆ ಗುಡ್ಡ ಕುಸಿಯುತ್ತಿದೆ. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಗುಡ್ಡ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ಸಕಲೇಶಪುರ ತಾಲೂಕಿನ ಕಪ್ಪಳ್ಳಿ ಬಳಿ ರಸ್ತೆಗೆ ಅಪಾರ ಪ್ರಮಾಣದ ಮಣ್ಣು ಮತ್ತು ಬೃಹತ್ ಬಂಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನೂರಾರು ಅಡಿ ಎತ್ತರದ ಗುಡ್ಡ ಕಡಿದು ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸದೆ ಮಳೆಗೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಯಾವಾಗ ಎಲ್ಲಿ ಗುಡ್ಡ ಕುಸಿದು ಬೀಳುತ್ತೋ ಎಂಬ ಆತಂಕದಲ್ಲಿ ವಾಹನ ಸವಾರರು ಇದ್ದಾರೆ.

ತಡೆಗೋಡೆ ಕುಸಿತ

ಶಿರಾಡಿಘಾಟ್​ನ ರಾಷ್ಟ್ರೀಯ ಹೆದ್ದಾರಿ 75 ಸುರಕ್ಷತೆಗೆ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ಕಟ್ಟಿದ್ದ ತಡೆಗೋಡೆ ಕುಸಿತಗೊಂಡಿದೆ. ಜುಲೈನಲ್ಲಿ ಮಳೆಗೆ ಸ್ವಲ್ಪ ಪ್ರಮಾಣದಲ್ಲಿ ತಡೆಗೋಡೆ ಕುಸಿತವಾಗಿತ್ತು. ಇದೀಗ 100 ಮೀಟರ್ ತನಕ ತಡೆಗೋಡೆ ಕುಸಿದಿದೆ. ಮತ್ತೆ ಮಳೆ ಹೆಚ್ಚಾದರೆ ರಸ್ತೆಯೇ ಕುಸಿದು ಬೀಳುವ ಆತಂಕವಿದೆ.

ಇನ್ನು, ಭಾರಿ ಮಳೆಯಿಂದ ಶಿರಾಡಿಘಾಟ್ ಭಾಗದ ಕಾಫಿ ಬೆಳೆಗಾರರು ಸಂಕಷ್ಟ ಕ್ಕೆ‌ಸಿಲುಕಿದ್ದಾರೆ. ಚತುಷ್ಪತ ರಸ್ತೆ ನಿರ್ಮಾಣಕ್ಕಾಗಿ ಕಡಿದಾಗಿ ಮಣ್ಣು ತೆಗೆದು ರಸ್ತೆ ನಿರ್ಮಿಸಿದ್ದರಿಂದ ಭೂಮಿ ಕೊಚ್ಚಿಹೋಗಿ ಕಾಫಿ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಪ್ರತಿಬಾರಿ ಮಳೆ ಹೆಚ್ಚಾದಾಗ ಕಾಫಿ ಗಿಡಗಳು ನಾಶವಾಗಿವೆ. ಕಾಫಿ ಗಿಡಗಳ ಜೊತೆಗೆ ಸಿಲ್ವರ್ ಮರಗಳು ಕೂಡ ಕುಸಿಯುತ್ತಿವೆ. ಸಕಲೇಶಪುರ ತಾಲೂಕಿನ ಕಪ್ಪಳ್ಳಿಯಿಂದ ಹೆಗ್ಗದ್ದೆವರೆಗೆ ಹಲವು ಕಡೆ ಕಾಫಿತೋಟ ಕುಸಿದಿದೆ. ಹತ್ತಾರು ಕಡೆ ಕಾಫಿ ತೋಟಗಳು ಕುಸಿದಿವೆ. ಒಂದೆಡೆ ರಸ್ತೆಗೆ ಮಣ್ಣು ಕುಸಿದು ಸಂಚಾರಕ್ಕೆ ತೊಂದರೆಯಾಗುತ್ತಿದ್ದರೇ, ಇನ್ನೊಂದು ಕಡೆ ಕಾಫಿ ತೋಟ ನಾಶವಾಗಿ ಬೆಳೆಗಾರರ ಪರದಾಡುವಂತಾಗಿದೆ.

ಇದನ್ನೂ ಓದಿ: ಹಾಸನದಲ್ಲಿ ವರುಣಾರ್ಭಟ: 15 ಕಡೆ ಭೂಕುಸಿತ, ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ತಾತ್ಕಾಲಿಕ ಬಂದ್

ಕುಸಿದು ಬಿದ್ದ ಗೋಡೆ, ಮೇಲ್ಚಾವಣಿ

ಸಕಲೇಶಪುರ ತಾಲೂಕಿನ ಹೊಸೂರು, ಗೊದ್ದು ಗ್ರಾಮದಲ್ಲಿ ಭಾರಿ ಮಳೆಗೆ ಮನೆಯ ಗೋಡೆ, ಮೇಲ್ಚಾವಣಿ ಕುಸಿದು ಬಿದ್ದಿದೆ. ಹೊಸೂರಿನ ಗಂಗಮ್ಮ, ಗೊದ್ದು ಗ್ರಾಮದ ಸಣ್ಣಪ್ಪಗೌಡಗೆ ಸೇರಿದ ಮನೆ ಮೇಲ್ಚಾವಣಿ ಕುಸಿದಿದ್ದು, ಹೆಚ್​. ಎನ್​.ಸಣ್ಣಪ್ಪಗೌಡ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆ ಹಾನಿ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Mon, 18 August 25