
ಹಾಸನ, ಅಕ್ಟೋಬರ್ 3: ಬೆಂಗಳೂರಿನಲ್ಲಿ ಐಟಿ ಉದ್ಯೋಗ ಮಾಡುತ್ತಿದ್ದ ಹಾಸನ ಮೂಲದ ಯುವಕ ರಜೆ ನಿಮಿತ್ತ ಊರಿಗೆ ಬಂದಿದ್ದ ವೇಳೆ ಭೀಕರ ರಸ್ತೆ ಅಪಘಾತಕ್ಕೆ ಸಿಲುಕಿದ್ದರು. ಸತತ ಮೂರು ತಿಂಗಳ ಚಿಕಿತ್ಸೆಯ ಬಳಿಕ ಅವರು ಬ್ರೈನ್ ಡೆಡ್ ಸ್ಥಿತಿ ತಲುಪಿ ಮೃತಪಟ್ಟಿದ್ದು, ತೀವ್ರ ದುಃಖದ ನಡುವೆಯೂ ಪೋಷಕರು ಏಕೈಕ ಮಗನ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಕಟ್ಟೆ ಗ್ರಾಮದ ಚಂದ್ರೇಗೌಡ ಹಾಗೂ ಶಿವಮ್ಮ ದಂಪತಿಯ ಏಕೈಕ ಪುತ್ರ 31 ವರ್ಷದ ರವಿಕುಮಾರ್ ಮೃತಪಟ್ಟ ಯುವಕ.
ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್, ರಜೆ ನಿಮಿತ್ತ ಊರಿಗೆ ಬಂದಿದ್ದರು. ಜುಲೈ 6ರಂದು ಹೊಳೆನರಸೀಪುರ ತಾಲೂಕಿನ ಪರಸನಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರವಿಕುಮಾರ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ನಿಗಾ ಘಟಕದಲ್ಲಿ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡಿದರೂ ರವಿಕುಮಾರ್ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸತತ ಮೂರು ತಿಂಗಳ ಚಿಕಿತ್ಸೆಯ ಬಳಿಕ ಅವರು ಬ್ರೈನ್ ಡೆಡ್ ಸ್ಥಿತಿ ತಲುಪಿರುವುದಾಗಿ ವೈದ್ಯರು ಘೋಷಿಸಿದರು. ಕಣ್ಣೆದುರೇ ಬೆಳೆದು ನಿಂತಿದ್ದ ಏಕೈಕ ಮಗನನ್ನು ಕಳೆದುಕೊಂಡು ಪೋಷಕರು ತೀವ್ರ ಶೋಕದಲ್ಲಿದ್ದರು. ಈ ದುಃಖದ ನಡುವೆಯೂ ರವಿಕುಮಾರ್ ಅವರ ನೆನಪನ್ನು ಶಾಶ್ವತವಾಗಿಡುವ ಉದ್ದೇಶದಿಂದ ಅಂಗಾಂಗ ದಾನಕ್ಕೆ ಮುಂದಾದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಅಂಗಾಂಗ ದಾನ: ಆದರೆ ಕಿಡ್ನಿ ಕಸಿಗಾಗಿ ಇಂದಿಗೂ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ
ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ದಾನ ಸಂಸ್ಥೆಯಾದ ಜೀವಸಾರ್ಥಕತೆ ಮೂಲಕ ರವಿಕುಮಾರ್ ಅವರ ಅಂಗಾಂಗಗಳನ್ನು ದಾನ ಮಾಡಲಾಯಿತು. ಈ ಮೂಲಕ ಅಂಗಾಂಗಗಳ ಅಗತ್ಯವಿದ್ದ ಹಲವು ರೋಗಿಗಳಿಗೆ ನವಜೀವನ ದೊರೆಯುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 am, Sat, 3 October 26