ಹಾಸನ, ಸೆ.04: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ (Prajwal Revanna) ಅವರು ಅನರ್ಹಗೊಂಡ ಬೆನ್ನಲ್ಲೇ ಶಾಸಕ ಹೆಚ್ಡಿ ರೇವಣ್ಣ (HD Revanna) ಅವರಿಗೂ ಈಗ ಸಂಕಷ್ಟ ಎದುರಾಗಿದೆ. ಚುನಾವಣಾ ಅಕ್ರಮಕ್ಕೆ (Election malpractices) ಸಂಬಂಧಪಟ್ಟಂತೆ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಹೆಚ್ಡಿ ರೇವಣ್ಣರಿಗೂ ಈಗ ಹೈಕೋರ್ಟ್ ಸಮನ್ಸ್ (High Court summons) ಜಾರಿ ಮಾಡಿದೆ. ಈ ಸಂಬಂಧ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಕುಟುಂಬ ರಾಜಕೀಯದಲ್ಲಿ ಹೋರಾಟ ಮಾಡಿಕೊಂಡೇ ಬಂದಿರೋದು. ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಈ ಪಕ್ಷ ಮುಗಿಸೋದಕ್ಕೆ ಹೊರಟಿದ್ರೆ ಏನ್ ಮಾಡೋಕಾಗುತ್ತೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಡಿ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಎಲ್ಲವೂ ಆದ್ರಪ್ಪ. ನನಗೆ ಕೋರ್ಟ್ ನೋಟಿಸ್ ಕೊಟ್ಟರೆ ನಮ್ಮ ವಕೀಲರ ಮೂಲಕ ಉತ್ತರ ಕೊಡುತ್ತೇನೆ ಎಂದರು. ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸುಪ್ರೀಂಕೋರ್ಟ್ನಲ್ಲಿ ತಡೆ ಸಿಗುವ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿ ರೇವಣ್ಣ, ಮುಂಚಿತವಾಗಿ ನಾನ್ಯಾಕೆ ಅದರ ಬಗ್ಗೆ ಹೇಳಲಿ. ಪ್ರಜ್ವಲ್ ಸುಪ್ರೀಂಕೋರ್ಟ್ಗೆ ಹಾಕ್ತಾರೋ ಏನ್ ಮಾಡ್ತಾರೋ. ಅದು ಅವರಿಗೆ ಬಿಟ್ಟಿದ್ದು, ಅವರ ಕೇಸ್ ಅದು. ಅವರ ಕೇಸ್‌ನಲ್ಲಿ ಏನಾಗುತ್ತೋ ನಾನು ಏನ್ ಹೇಳಲಿ. ಕೆಲವರು ಭವಿಷ್ಯ ನುಡಿಯೋರು ಇದ್ದಾರೆ, ಅದನ್ನ ನಾನ್ಯಾಕೆ ಹೇಳಲಿ. ಕಾನೂನು ಏನಿದೆ ಅದನ್ನ ಪ್ರಜ್ವಲ್‌ರವರು ಮಾಡಿಕೊಳ್ತಾರೆ. ಪ್ರಜ್ವಲ್‌ರವರಿಗೇನು ಏಜ್ ಇಲ್ವಾ? ಅವರು ಏನ್ ಮಾಡಿದ್ದಾರೆ? ಎಂತು ಮಾಡಿದ್ದಾರೆ ಗೊತ್ತಿಲ್ಲ ನನಗೆ. ಅದನ್ನೆಲ್ಲಾ ತಿಳ್ಕೊಂಡು ಎಲ್ಲಾ ಆದ ಮೇಲೆ ಸವಿಸ್ತಾರವಾಗಿ ಹೇಳುತ್ತೇನೆ. ನಮ್ಮ ಜೀವನದಲ್ಲಿ ನಾವು ಯಾವ ಆಸ್ತಿಯನ್ನು ಮುಚ್ಚಿಟ್ಟಿಲ್ಲ. ಐಟಿ ರಿಪೋರ್ಟ್ ಅನ್ನು ನಾನು ಕೊಡ್ತೀನಿ ನನ್ನ ಹೆಂಡತಿನೂ ಕೊಡ್ತಾರೆ. ಪಡುವಲ ಹಿಪ್ಪೆ ಬಳಿ ತೆಂಗು, ಅಡಿಕೆ, ಸಪೋಟ, ಮಾವಿನ ತೋಟವು ಇದೆ. ಎಲ್ಲವನ್ನು ಚೆಕ್ ಮೇಲೆ ತೆಗೆದುಕೊಂಡಿರೋದು. ನನ್ನದೆಲ್ಲ ಚೆಕ್ ವ್ಯವಹಾರನೆ. ಪ್ರತಿ ಹಂತ ಹಂತದಲ್ಲೂ ಇನ್ಕಮ್ ಟ್ಯಾಕ್ಸ್ಗೆ ಮಾಹಿತಿ ಕೊಡುತ್ತಿದ್ದೇನೆ ಎಂದು ಹೆಚ್ಡಿ ರೇವಣ್ಣ ತಿಳಿಸಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅನರ್ಹ ಬೆನ್ನಲ್ಲೇ ಇದೀಗ ತಂದೆ ಹೆಚ್.ಡಿ.ರೇವಣ್ಣ ಶಾಸಕ ಸ್ಥಾನಕ್ಕೂ ಕುತ್ತು
ರಾಜ್ಯದ ಏಕೈಕ ಸಂಸತ್ ಸ್ಥಾನ ಹೊಂದಿದ್ದ ಜೆಡಿಎಸ್ಗೆ ಹೈಕೋರ್ಟ್ ತೀರ್ಪು ಬಿಗ್ ಶಾಕ್ ನೀಡಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಮಾಣ ಪತ್ರ ಸಲ್ಲಿಸುವಾಗ ಪ್ರಜ್ವಲ್ ರೇವಣ್ಣ ತಮ್ಮ ಆಸ್ತಿ ವಿವರವನ್ನು ಮುಚ್ಚಿಟ್ಟಿದ್ದಾರೆಂಬ ಆರೋಪದದಲ್ಲಿ ಸಲ್ಲಿಕೆಯಾಗಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಸದಸ್ಯತ್ವವನ್ನೇ ಅಸಿಂಧುಗೊಳಿಸಿ ಆದೇಶ ನೀಡಿದೆ. ಪ್ರಜ್ವಲ್ ರೇವಣ್ಣ ತಮ್ಮ ಸಂಸತ್ ಸದಸ್ಯತ್ವ ಕಳೆದುಕೊಂಡಿದ್ದಾರೆ. ಇದರ ನಡುವೆ ಹೆಚ್ಡಿ ರೇವಣ್ಣರಿಗೂ ಈಗ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಹಾಸನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ