ಹಾಸನ: ಚನ್ನರಾಯಪಟ್ಟಣದ ನಾಗೇಶ್ ಎಜುಕೇಶನ್ ಟ್ರಸ್ಟ್ನ ಜ್ಞಾನಸಾಗರ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಬಕ್ರೀದ್(Bakrid) ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮವೊಂದು ವಿವಾದದ ಸ್ವರೂಪ ಪಡೆದುಕೊಂಡಿದೆ. ಶಾಲೆಯ ನೂರಾರು ಮಕ್ಕಳನ್ನು ಒಂದೆಡೆ ಸೇರಿಸಿ ಖುರಾನ್ನ(Quaran) ಶ್ಲೋಕವನ್ನು ಉರ್ದು ಭಾಷೆಯಲ್ಲಿ ಪಠಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಿನ್ನೆ(ಜೂನ್ 30) ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಸದ್ಯ ಈಗ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಲಾ ಆಡಳಿತ ಮಂಡಳಿ, ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ. ಕೇವಲ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಆಚರಣೆಯನ್ನು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಜೂನ್ 28 ರ ಬುಧವಾರ ಶಾಲೆಯ ಸಭಾಂಗಣದಲ್ಲಿ ನಡೆದಿದ್ದ ಬಕ್ರೀದ್ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನಮಾಜ್ ರೀತಿಯ ಖುರಾನ್ ಪಠಣೆ ಮಾಡಲಾಗಿದ್ದು ಉಳಿದ ಮಕ್ಕಳು ಕಣ್ಣು ಮುಚ್ಚಿ ಕೈ ಮುಗಿದು ಕುಳಿತಿದ್ದಾರೆ. ಹಾಗೂ ಬಕ್ರೀದ್ ಏಕೆ ಆಚರಿಸಲಾಗುತ್ತೆ ಎಂಬ ಬಗ್ಗೆ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡಿದೆ. ಕೆಲ ಪೋಷಕರೂ ಕೂಡ ಈ ಆಚರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಹಿಂದೂಪರ ಸಂಘಟನೆಗಳ ಹೋರಾಟದ ಬಳಿಕ ಈ ಘಟನೆ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಮುಂದೆ ಈ ರೀತಿ ಆಚರಣೆ ಮಾಡೋದಿಲ್ಲ ಎಂದಿದೆ.
ಇದನ್ನೂ ಓದಿ: ಪೊಲೀಸ್ ಠಾಣೆಯಿಂದ ಲಾರಿ ಚಾಲಕ ನಾಪತ್ತೆ ಪ್ರಕರಣ; ಸ್ಮಶಾನದ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆ
ನಮ್ಮ ಶಾಲೆಯಲ್ಲಿ ಜಾತ್ಯಾತೀತ ತತ್ವ ಪಾಲನೆ ಮಾಡಲಾಗುತ್ತೆ, ಬಕ್ರೀದ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಬ್ಬದ ಬಗ್ಗೆ ಅರಿವು ಮೂಡಿಸಲಾಗಿದೆ. ಬೇರೆ ಯಾವ ಮಕ್ಕಳಿಂದಲೂ ಪ್ರಾರ್ಥನೆ ಮಾಡಿಸಲಾಗಿಲ್ಲ. ಕೇವಲ ಮುಸ್ಲಿಂ ಮಕ್ಕಳು ಮಾತ್ರ ಪ್ರಾರ್ಥನೆ ಮಾಡಿದ್ದು ಉಳಿದವರು ಮೌನವಾಗಿದ್ದಾರೆ ಅಷ್ಟೆ. ಆದರೂ ಇಂತಹ ಆಚರಣೆಯಿಂದ ಸಮಸ್ಯೆ ಆಗೋದಾದರೆ ಮುಂದೆ ಇಂತಹ ಆಚರಣೆ ಮಾಡುವುದಿಲ್ಲ ಎಂದು ಶಾಲೆಯ ಪ್ರಾಂಶುಪಾಲರಾದ ಸುಜಾ ಫಿಲಿಪ್ ಅವರು ಸ್ಪಷ್ಟನೆ ನೀಡಿದ್ದಾರೆ.
ಶಾಲೆಯಲ್ಲಿ ಇಂತಹ ಆಚರಣೆ ಖಂಡನೀಯ ಹಾಗಾಗಿಯೇ ನಿನ್ನೆ ಶಾಲೆ ಎದುರು ಪ್ರತಿಭಟನೆ ಮಾಡಲಾಗಿದೆ. ನಡೆದಿರೋ ಘಟನೆಯ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಶಾಲಾ ಆಡಳಿತ ಮಂಡಳಿಯವರು ಸಹ ಮುಂದೆ ಹೀಗೆ ಮಾಡೋದಿಲ್ಲ ಎಂದು ಹೇಳಿದ ಬಳಿಕ ಪ್ರತಿಭಟನೆ ಕೈ ಬಿಡಲಾಗಿದೆ ಎಂದು ವಿಶ್ವಹಿಂದೂಪರಿಷತ್ ಮುಖಂಡರಾದ ಶ್ಯಾಮ್ ತಿಳಿಸಿದರು.
ಹಾಸನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:40 am, Sat, 1 July 23