ಹಾಸನ, ಅ.16: ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಇಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮದ್ಯದ ಅಂಗಡಿ ತೆರೆದ ವಿಚಾರವಾಗಿ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ (K. M. Shivalinge Gowda) ಮತ್ತು ಬಿಜೆಪಿ ಶಾಸಕ ಹೆಚ್.ಕೆ.ಸುರೇಶ್ (H.K. Suresh) ಕಿತ್ತಾಡಿಕೊಂಡಿದ್ದಾರೆ. ಶಾಸಕರ ವಾಗ್ವಾದ ಕಂಡು ಸಚಿವ ಕೆ.ಎನ್. ರಾಜಣ್ಣ (K.N.Rajanna) ಅವರು ಕಕ್ಕಾಬಿಕ್ಕಿಯಾದ ಪ್ರಸಂಗವೂ ನಡೆಯಿತು.
ಜನತಾ ದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಶಾಸಕ ಸುರೇಶ್ ಅವರು, ಮದ್ಯದಂಗಡಿ ತೆರೆದು ಹೆಣ್ಣುಮಕ್ಕಳ ತಾಳಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ಶಿವಲಿಂಗೇಗೌಡ, ಜನ ಸೇರಿಸುವವನು ನಾನು, ನೀನು ಹದಿನೈದು ಜನ ಕರೆದುಕೊಂಡು ಬಂದು ಸಭೆ ಹಾಳು ಮಾಡಲು ಬಂದಿದ್ದೀಯಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶಿವಕುಮಾರ್ ರನ್ನು ಜೈಲಿಗೆ ಕಳಿಸಲೆಂದೇ ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಿರುವರೇ? ಕೆಎಂ ಶಿವಲಿಂಗೇಗೌಡ
ಈ ವೇಳೆ ಸಿಟ್ಟಾದ ಸುರೇಶ್, ನನಗೂ ಜಾವಗಲ್ ಗ್ರಾಮ ಸೇರುತ್ತದೆ, ನನಗೂ ಹಕ್ಕಿದೆ ಎಂದು ಹೇಳಿದ ಸುರೇಶ್, ಮದ್ಯದಂಗಡಿ ತೆರೆದಿರುವವನು ಶಿವಲಿಂಗೇಗೌಡರ ಸ್ನೇಹಿತ ಎಂದು ಮೈಕ್ ಹಿಡಿದು ಆರೋಪಿಸಿದ್ದಾರೆ. ಇದರಿಂದ ಕೆರಳಿದ ಶಿವಲಿಂಗೇಗೌಡ ಅವರು, ಓವರ್ ಆಗಿ ಆಡಬೇಡ. ನಮ್ಮ ಸರ್ಕಾರ ಬಂದು ಐದು ತಿಂಗಳು ಆಯ್ತು ಒಂದು ಮದ್ಯದಂಗಡಿಗೂ ಅನುಮತಿ ನೀಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತೆರೆದಿದ್ದಾರೆ ಎಂದು ಆರೋಪಿಸಿದರು.
ಇಷ್ಟು ಹೇಳಿದ್ದೇ ತಡ, ಹರ್ಷಗೊಂಡ ಕೈ ಕಾರ್ಯಕರ್ರತರು ಶಿವಲಿಂಗೇಗೌಡರ ಪರ ಜೈಕಾರ ಕೂಗಿದರು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಸುರೇಶ್ ಪರ ಜೈಕಾರ ಕೂಗಿದ್ದಾರೆ. ಶಾಸಕರ ನಡುವಿನ ಕಿತ್ತಾಟ ನೋಡಿ ಸಚಿವ ರಾಜಣ್ಣ ಅವರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಸಕರನ್ನು ಸಮಾಧಾನಪಡಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Mon, 16 October 23