ಹಾಸನ: ಹಸು ಮೇಯಿಸಲು ಜಮೀನಿನ ಬಳಿ ತೆರಳಿದ್ದ ಸೈನಿಕ ರಾಕೇಶ್ ತಾಯಿ ರತ್ನಮ್ಮ ನಾಪತ್ತೆ ಪ್ರಕರಣ ಒಂದೂವರೆ ತಿಂಗಳ ಬಳಿಕ ಬಯಲಾಗಿದೆ. ಯೋಧನ ತಾಯಿ ಧರಿಸಿದ್ದ ಬಟ್ಟೆಯ ಜೊತೆ ಅಸ್ಥಿಪಂಜರ ಪತ್ತೆಯಾಗಿದೆ.
ಭಾರತೀಯ ಸೇನೆಯಲ್ಲಿ ಶಿಮ್ಲಾದಲ್ಲಿ ಕರ್ತವ್ಯದಲ್ಲಿರೋ ಹಾಸನ ತಾಲ್ಲೂಕಿನ ನಾರಾಯಣಪುರ ಗ್ರಾಮದ ಸೈನಿಕ ರಾಕೇಶ್ ಕಳೆದ ಏಳು ವರ್ಷಗಳಿಂದ ದೇಶ ಕಾಯೋ ಕಾಯಕ ಮಾಡುತ್ತಿದ್ದಾರೆ. ಮನೆಯಲ್ಲಿದ್ದ ತಂದೆ ತಾಯಿ ಹೈನುಗಾರಿಕೆ ಮಾಡುತ್ತಾ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ಜುಲೈ 20 ರಂದು ದನಗಳನ್ನು ಮೇಯಿಸಲು ಜಮೀನಿನ ಬಳಿ ಹೋಗಿದ್ದ ರತ್ಮಮ್ಮ ಸಂಜೆ ಯಾದರೂ ಮನೆಗೆ ಮರಳಿಲ್ಲ. ಅವರ ಫೋನ್ ಗೆ ಕರೆ ಮಾಡಿದಾಗ ಜಮೀನಿನ ಬಳಿಯಿದ್ದ ಬೇರೆಯವರು ಫೋನ್ ರಿಸೀವ್ ಮಾಡಿ ನಿಮ್ಮ ತಾಯಿ ಫೋನ್ ಜಮೀನಿನ ಬಳಿ ಬಿದ್ದಿದೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೆ ಎಚ್ಚೆತ್ತ ಮಕ್ಕಳು ಶಾಂತಿಗ್ರಾಮ ಪೊಲೀಸರಿಗೆ ದೂರು ನೀಡಿದ್ದಾರೆ.
ಒಂದೆರಡು ದಿನ ನೋಡಿದ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಊರಿನಲ್ಲಿ ನಡೆದ ಕೆಲ ಘಟನೆ ಆದರಿಸಿ ರತ್ಮಮ್ಮ ಸಂಬಂಧಿಗಳು ರತ್ಮಮ್ಮ ಕಣ್ಮರೆ ಹಿಂದೆ ಮಹೇಶ ಎಂಬಾತನ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆತನನ್ನು ಕರೆತಂದು ವಿಚಾರಣೆ ಮಾಡಿದ್ರು ಪ್ರಯೊಜನ ಅಗಿಲ್ಲ. ಮನೆಯವರು ಹುಡುಕಬಾರದ ಜಾಗ ಇಲ್ಲ, ಶೋಧಿಸದ ಊರಿಲ್ಲ ಆದರೆ ರತ್ನಮ್ಮ ಮಾತ್ರ ಪತ್ತೆ ಆಗಿಲ್ಲ. ಸೇನೆಯಲ್ಲಿ ಇದ್ದ ಮಗ ಬಂದು ಒಂದು ತಿಂಗಳು ಹುಡುಕಾಡಿದ್ರು ಪ್ರಯೋಜನ ಆಗಿರಲಿಲ್ಲ. ನಿನ್ನೆ ನಾರಾಯಣಪುರದ ಜಗದೀಶ್ ಎಂಬುವವರ ಜೋಳದ ಹೊಲದಲ್ಲಿ ಜೋಳ ಕಟಾವಿಗೆ ಹೋದಾಗ ಹೊಲದ ಮಧ್ಯದಲ್ಲಿ ಮನುಷ್ಯನ ತಲೆ ಬುರುಡೆ, ಅಸ್ತಿ ಪಂಜರ ಪತ್ತೆಯಾಗಿದೆ. ಅಲ್ಲಿಯೇ ರತ್ನಮ್ಮ ಧರಿಸಿದ್ದ ಸೀರೆ ಕೂಡ ಸಿಕ್ಕಿದೆ. ಹಾಗಾಗಿ ಅದು ರತ್ನಮ್ಮ ದೇ ಅಸ್ತಿ ಪಂಜರ ಎನ್ನೋದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೂಡಲೆ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿ ಸಿಕ್ಕ ಅಸ್ತಿ ಪಂಜರ ವಶಕ್ಕೆ ಪಡೆದು ತನಿಖೆ ಶುರುಮಾಡಿದ್ದಾರೆ. ಆದ್ರೆ ಮತ್ತೊಂದು ಕಡೆ ನಾಪತ್ತೆಯಾದ ಎರಡು ಮೂರು ತಿಂಗಳಲ್ಲಿ ಅಸ್ತಿ ಪಂಜರ ಸಿಕ್ಕಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ರತ್ಮಮ್ಮ ಸಾವು ಆಕಸ್ಮಿಕ ಅಲ್ಲ, ಇದೊಂದು ಕೊಲೆ, ಕೊಲೆಮಾಡಿದ ಆರೋಪಿ ಮಹೇಶ್ ಆಕೆ ಮೇಲಿದ್ದ ಚಿನ್ನಾಭರಣ ದೋಚಿ ಮೃತದೇಹ ಇಲ್ಲಿ ಬಿಸಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಕೂಡಲೆ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ತಾವು ದೂರು ನೀಡಿದಾಗ ಪೊಲೀಸರು ಸರಿಯಾದ ಕ್ರಮಕೈಗೊಂಡಿಲ್ಲ ಎಂದು ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು, ಸ್ಥಳದಲ್ಲಿ ಮಹೇಶನ ಟವಲ್ ಕೂಡ ಸಿಕ್ಕಿದೆ. ಅಸ್ಥಿಪಂಜರ ಸಿಕ್ಕಿದ ಬಳಿಕ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಅಲ್ಲಿ ಸಿಕ್ಕ ಮೂಳೆಗಳು ರತ್ಮಮ್ಮರದ್ದೇ ಆಗಿದೆಯಾ, ಈ ಸಾವಿಗೆ ಕಾರಣ ಏನು? ಕೊಲೆ ಮಾಡಿ ಮೃತದೇಹ ಏಕೆ ಹೀಗೆ ಬಿಸಾಡಲಾಗಿದೆ? ಕೊಲೆಗೆ ಕಾರಣ ಯಾರು? ಈ ಎಲ್ಲಾ ಅಂಗಲ್ ನಲ್ಲಿ ತನಿಖೆ ಶುರುವಾಗಿದ್ದು ಕುಟುಂಬ ಸದಸ್ಯರು ಆರೋಪಿಸಿರೋ ಮಹೇಶ ನನ್ನು ಕೂಡ ವಶಕ್ಕೆ ಪಡೆದು ಪೊಲೀಸರು ಕ್ರಮ ವಹಿಸಿದ್ದಾರೆ.