ದಾನ ಮಾಡಿದ್ದ ಶಾಲೆ ಜಾಗ ಹಿಂಪಡೆಯಲು ಮುಂದಾದ ಮಾಜಿ ಶಾಸಕ ಬಿ.ಆರ್.ಗುರುದೇವ್, ಬಿ.ಸಿದ್ದಣ್ಣಯ್ಯ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಧರಣಿ

| Updated By: ಆಯೇಷಾ ಬಾನು

Updated on: Oct 11, 2021 | 5:55 PM

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಇರುವ ಶಾಲೆಗೆ ಬಿ.ಜಿ.ಗುರಪ್ಪ 4 ಎಕರೆ ಜಮೀನು ದಾನ ನೀಡಿದ್ದರು. ಆದ್ರೆ ಈಗ ತಂದೆ ದಾನ ನೀಡಿದ್ದ ಜಾಗ ಹಿಂಪಡೆಯಲು ಮಗನಾದ ಮಾಜಿ ಶಾಸಕ ಗುರುದೇವ್ ಮುಂದಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ದಾನ ಮಾಡಿದ್ದ ಶಾಲೆ ಜಾಗ ಹಿಂಪಡೆಯಲು ಮುಂದಾದ ಮಾಜಿ ಶಾಸಕ ಬಿ.ಆರ್.ಗುರುದೇವ್, ಬಿ.ಸಿದ್ದಣ್ಣಯ್ಯ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಧರಣಿ
ದಾನ ಮಾಡಿದ್ದ ಶಾಲೆ ಜಾಗ ಹಿಂಪಡೆಯಲು ಮುಂದಾದ ಮಾಜಿ ಶಾಸಕ ಬಿ.ಆರ್.ಗುರುದೇವ್, ಬಿ.ಸಿದ್ದಣ್ಣಯ್ಯ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಧರಣಿ
Follow us on

ಹಾಸನ: ಅದು ಅರ್ಧಶತಮಾನಗಳಷ್ಟು ಹಳೆಯ ಶಾಲೆ, ಸಿದ್ದಗಂಗಾ ಶ್ರೀಗಳ ಆಶೀರ್ವಾದದಿಂದ ಆರಂಭಗೊಂಡ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತು ದೇಶ ವಿದೇಶಗಳಲ್ಲಿ ದೊಡ್ದ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆ ಶಾಲೆಯ ಆವರಣದಲ್ಲಿದ್ದ ಬೃಹತ್ ಮರಗಳು, ಶಾಲೆಯ ಪರಿಸರ ಕಾಳಜಿಗೆ ರಾಜ್ಯಪಟ್ಟದ ಪರಿಸರ ಪ್ರಶಸ್ತಿಯೂ ಬಂದಿದೆ. ಆದ್ರೆ ಇಷ್ಟೆಲ್ಲಾ ವಿಶೇಷತೆಯ ಶಾಲೆ ಈಗ ಆಪತ್ತಿನಲ್ಲಿದೆ. ಪ್ರಶಸ್ತಿ ತಂದುಕೊಟ್ಟ ಬೃಹದಾಕಾರದ ಮರಗಳು ಒಂದೇ ದಿನದಲ್ಲಿ ಧರೆಗುರುಳಿವೆ. ಕೋಟಿ ಕೋಟಿ ಬೆಲೆಬಾಳೋ ಶಾಲೆಯ ಆಟದ ಮೈದಾನಕ್ಕೆ ಕಾಂಪೌಂಡ್ ಬೀಳುತ್ತಿದೆ. ಅಪ್ಪ ಕೊಟ್ಟ ಶಾಲಾ ಜಾಗವನ್ನ ವಾಪಸ್ ಪಡೆಯೋಕೆ ಮುಂದಾಗಿರೋ ಮಗ ಈ ಜಾಗ ನಂದೂ ಎನ್ನುತ್ತಿದ್ದರೆ ಶಾಲಾ ಆಡಳಿತ ಮಂಡಳಿ ಕಾನೂನು ಹೋರಾಟ ಮಾಡುತ್ತಿದ್ದು ಶಾಲೆ ಉಳಿವಿಗಾಗಿ ಮಾಜಿ ಶಾಸಕರ ವಿರುದ್ಧ ಹಳೆ ವಿದ್ಯಾರ್ಥಿಗಳು ಬೀದಿ ಹೋರಾಟ ಶುರುಮಾಡಿದ್ದಾರೆ.

ಹಾಸನ ಜಿಲ್ಲೆಯ ಮಲೆನಾಡು ಭಾಗ ಸಕಲೇಶಫುರದ ದೊಡ್ಡ ಹೋಬಳಿ ಬಾಳ್ಳುಪೇಟೆಯ ಪ್ರತಿಷ್ಠಿತ ಶಾಲೆ ಶ್ರೀ ಸಿದ್ದಣ್ಣಯ್ಯ ಪ್ರೌಡ ಶಾಲೆ, 1973ರಲ್ಲಿ ಸಿದ್ದಗಂಗಾ ಶ್ರೀಗಳ ಪ್ರೇರಣೆಯಲ್ಲಿ ಅವರದೇ ಅಧ್ಯಕ್ಷತೆಯಲ್ಲಿ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ ರಚಿಸಿಕೊಂಡು ನೂರಾರು ಬಡ ವಿದ್ಯಾರ್ಥಿಗಳಿಗೆ ಅಕ್ಷರ ದಾನಕ್ಕೆ ಮುಂದಾಗಿತ್ತು. ಅಂದು ಶಾಲೆ ನಿರ್ಮಾಣಕ್ಕೆ ನೂರಾರು ಜನರು ದಾನಮಾಡಿದ್ರೆ ಗ್ರಾಮದ ಬಿ.ಜಿ, ಗುರಪ್ಪ ಎನ್ನುವವರು ಶಾಲೆಗಾಗಿ ತಮ್ಮ ನಾಲ್ಕು ಎಕರೆ ಭೂಮಿಯನ್ನ ದಾನ ಮಾಡಿದ್ರು, ಇದೆಲ್ಲವೂ ಆಗಿ ಈಗ ಶಾಲೆಗೆ 52ರ ಹರೆಯ ಆಗಿದೆ, ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕಲಿತು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ.

ಆದರೆ ಈಗ 52 ವರ್ಷಗಳ ಬಳಿಕ ಮತ್ತೆ ಅದೇ ದಾನದ ವಿವಾದ ಹೊತ್ತಿಕೊಂಡು ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಬಿದ್ದಿದೆ. ಅಂದು ಶಾಲೆಗೆ ಜಾಗ ದಾನಮಾಡಿದ್ದ ಬಿ.ಜಿ ಗುರಪ್ಪರ ಮಗ ಮಾಜಿ ಶಾಸಕ ಬಿ.ಆರ್.ಗುರುದೇವ್ ಈಗ ಅಪ್ಪ ದಾನ ಮಾಡಿದ ಜಾಗ ತಮಗೆ ಬೇಕೆಂದು ಕಾಂಪೌಂಡ್ ಹಾಕೋಕೆ ಮುಂದಾಗಿರೋದು ಶಾಲೆ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಮತ್ತು ಮಾಜಿ ಶಾಸಕರ ನಡುವೆ ಸಂಘರ್ಷಕ್ಕೆಡೆಮಾಡಿದೆ. ಶಾಲಾ ಮೈದಾನಕ್ಕೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ 75 ರ ಬೈಪಾಸ್ ರಸ್ತೆ ನಿರ್ಮಾಣ ವಾಗುತ್ತಿರೋದು ಈ ಮೈದಾನಕ್ಕೆ ಚಿನ್ನದ ಬೆಲೆ ತಂದುಕೊಟ್ಟಿದೆ. ಹಾಗಾಗಿಯೇ ಇಲ್ಲಿನ ಜಾಗವನ್ನ ತಮ್ಮ ತಂದೆ ದಾನ ಕೊಟ್ಟಿದ್ದನ್ನೂ ಮರೆತು ಮಾಜಿ ಶಾಸಕರು ಕಬಳಿಸೋಕೆ ಮುಂದಾಗಿದ್ದಾರೆ. ಇದ್ರಿಂದ ಶಾಲೆಗೆ ಆಟದ ಮೈದಾನ ಇಲ್ಲದಂತಾಗುತ್ತೆ.

ಜಮೀನಿಗೆ ಕಾಂಪೌಂಡ್ ಹಾಕಲು ಮುಂದಾದ ಮಾಜಿ ಶಾಸಕ

ದಾನ ಮಾಡಿದ್ದ ಶಾಲೆ ಜಾಗ ಹಿಂಪಡೆಯಲು ಮುಂದಾದ ಮಾಜಿ ಶಾಸಕ
ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಿದ, ಇನ್ನೂ ಭವಿಷ್ಯದಲ್ಲಿ ಬಡ ಮಕ್ಕಳಿಗೆ ಬೆಳಕಾಗೋ ಶಾಲೆ ಅಳಿವಿನಂಚಿಗೆ ಹೋಗಲಿದೆ ಎನ್ನೋದು ಹಳೆಯ ವಿದ್ಯಾರ್ಥಿಗಳ ಆತಂಕ. ಶಾಲೆಯ ಮೈದಾನ ಉಳಿಯಲೇ ಬೇಕು, ಇಲ್ಲವೇ ಇಡೀ ಶಾಲೆಯನ್ನೇ ಮುಚ್ಚಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ನೂರಾರು ಜನರು ಶಾಲೆ ಉಳಿಸೋ ವರೆಗೆ ಹೋರಾಟ ನಿಲ್ಲಿಸಲ್ಲ ಎನ್ನುತ್ತಿದ್ದಾರೆ.

ಈ ಭಾಗದಲ್ಲಿ ಶಾಲೆ ಇಲ್ಲದ್ದನ್ನ ಮನಗಂಡ ತ್ರಿವಿದ ದಾಸೋಹಿ ಸಿದ್ದಗಂಗಾ ಶ್ರೀಗಳಾದ ನಡೆದಾಡೋ ದೇವರು ಶ್ರೀ ಶಿವಕುಮಾರಸ್ವಾಮಿಜಿಯವರು ಈ ಕಡೆಗೆ ಪ್ರವಾಸ ಬಂದಾಗ ಇಲ್ಲೊಂದು ಶಾಲೆ ತೆರೆಯಲು ಪ್ರೇರಣೆ ನೀಡಿದ್ದರಂತೆ. ಅದರಂತೆ ಬಿಜಿ ಗುರಪ್ಪನವರು ಜಾಗ ದಾನ ಮಾಡಿದ್ರೆ ಅವರ ಸಹೋದರ ಸಿದ್ದಣ್ಣಯ್ಯನವರು ಅಂದಿನ ಕಾಲದಲ್ಲೇ 50ಸಾವಿರ ಹಣ ದಾನ ಮಾಡಿ ಶಾಲೆಯನ್ನ ನಿರ್ಮಾಣ ಮಾಡಲಾಗಿದೆ. ಆದ್ರೆ ಕಾನೂನಿನ ತೊಡಕಿನ ಕಾರಣ ಈ ಜಾಗ ವಿನಾಯಕ ಎಜುಕೇಷನ್ ಟ್ರಸ್ಟ್ ಹೆಸರಿಗೆ ನೊಂದಣಿ ಆಗಲೇ ಇಲ್ಲ. ಆದ್ರೆ 2016ರಲ್ಲಿ ಈ ಶಾಲಾ ಮೈದಾನದ ಮೇಲೆಯೇ ಹಾದುಹೋಗುವಂತೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಪ್ಲಾನ್ ಆದಾಗ ಆತಂಕಗೊಂಡ ಗ್ರಾಮಸ್ಥರು ದೊಡ್ದಹೋರಾಟ ಮಾಡಿ ರಸ್ತೆಯ ಮಾರ್ಗವನ್ನೇ ಬದಲಿಸಿದ್ರು, ಶಾಲೆಯ ಮೈದಾನಕ್ಕೆ ಸಮೀಪವೇ ಈಗ ಹೈವೇ ಹೋಗುತ್ತಿದೆ ಹಾಗಾಗಿ ಈ ಮೈದಾನಕ್ಕೆ ಭಾರೀ ಬೇಡಿಕೆ ಹೆಚ್ಚಿದೆ. ಸ್ವಲ್ಪ ಪ್ರಮಾಣದ ಭೂಮಿ ಹೋಗಿ ಅದರ ಪರಿಹಾರವಾಗಿ ದೊಡ್ಡ ಮೊತ್ತದ ಹಣ ಬಂದಾಗಲೇ ಈ ದಾನದ ವಿವಾದ ಶುರುವಾಗಿತ್ತು.

ಭೂಮಿಯ ಮಾಲೀಕರು ನಾವು ಅದರ ಪರಿಹಾರದ ಹಣ ನಮಗೆ ಸಿಗಬೇಕು ಎನ್ನೋದು ಭೂಮಿಯ ದಾನಿಯಾಗಿದ್ದ ಗುರಪ್ಪ ಕುಟುಂಬ ಸದಸ್ಯರ ವಾದ, ಆದ್ರೆ ಇದು ದಾನವಾಗಿ ನಮಗೆ ಬಂದಿದೆ ಪರಿಹಾರವೂ ನಮಗೆ ಸಿಗಬೇಕು ಎನ್ನೋದು ಶಾಲಾ ಆಡಳಿತ ಮಂಡಳಿಯ ಪ್ರತಿವಾದ ಈ ವಿವಾದ ಕೋರ್ಟ್ ಮೆಟ್ಟಿಲೇರಿ ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ. ಹೀಗಿರುವಾಗ ಎರಡು ದಿನಗಳ ಹಿಂದೆ ಏಕಾಏಕಿ ಬಿ.ಆರ್. ಗುರುದೇವ್ ಇಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇಡೀ ಮೈದಾನಕ್ಕೆ ಬೇಲಿ ಹಾಕುತ್ತಿದ್ದಾರೆ. ಇದ್ರಿಂದ ಇಡೀ ಶಾಲೆಗೆ ಸ್ವಲ್ಪವೂ ಜಾಗವೇ ಇಲ್ಲದಂತಾಗುತ್ತೆ, ಪರಿಸರ ಪ್ರಶಸ್ತಿ ಪಡೆದ ಶಾಲೆಯ ಆವರಣದ ಮರಗಳನ್ನೆಲ್ಲಾ ಯಾವುದೇ ಅನುಮತಿ ಪಡೆಯದೆ ಕಡಿಯಲಾಗಿದೆ, ನಮಗೆ ನೊಟೀಸ್ ನೀಡದೆಯೇ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಡಳಿತ ಮಂಡಳಿಯವರು ದೂರಿದ್ದಾರೆ. ಈ ಬಗ್ಗೆ ಪ್ರಕರಣ ಕೋರ್ಟ್ ನಲ್ಲಿರುವಾಗ ಹೀಗೆಲ್ಲಾ ನಡೆಯುತ್ತಿರೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಾಜಿ ಶಾಸಕರ ನಡೆ ವಿರುದ್ದ ಕಿಡಿ ಕಾರುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ ಪ್ರಮಾಣ ವಚನ ಸ್ವೀಕಾರ