ಹಾಸನ: ಮದ್ಯದ ಅಮಲಲ್ಲಿ ಬಸ್​ಗೆ ದಾರಿ ಬಿಡದೆ ಪುಂಡಾಟ; ಧರ್ಮದೇಟು ಕೊಟ್ಟು ನಶೆ ಇಳಿಸಿದ ಸಾರ್ವಜನಿಕರು

ಬೈಕ್​ ಸವಾರನ ಹುಡುಗಾಟ ಬಸ್​ ಪ್ರಯಾಣಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸುಮಾರು ದೂರದ ತನಕವೂ ಬಸ್​ ಮುಂಭಾಗದಲ್ಲೇ ಅಡ್ಡಾದಿಡ್ಡಿಯಾಗಿ ಬೈಕ್​ ಚಲಾಯಿಸಿದ ಯುವಕ ಒಮ್ಮೆಯಂತೂ ಎದುರಿನಿಂದ ಬರುತ್ತಿದ್ದ ಬೈಕ್​ನವರಿಗೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ಹಾಸನ: ಮದ್ಯದ ಅಮಲಲ್ಲಿ ಬಸ್​ಗೆ ದಾರಿ ಬಿಡದೆ ಪುಂಡಾಟ; ಧರ್ಮದೇಟು ಕೊಟ್ಟು ನಶೆ ಇಳಿಸಿದ ಸಾರ್ವಜನಿಕರು
ಮದ್ಯದ ಅಮಲಿನಲ್ಲಿದ್ದ ಯುವಕನಿಗೆ (ನೀಲಿ ಅಂಗಿ) ಥಳಿತ
Edited By:

Updated on: Aug 30, 2021 | 2:18 PM

ಹಾಸನ: ಮದ್ಯದ ಅಮಲಲ್ಲಿ ತೇಲುತ್ತಿದ್ದ ಯುವಕನೋರ್ವ ಬೇಕಾಬಿಟ್ಟಿ ಬೈಕ್​ ಓಡಿಸುತ್ತಾ ಬಸ್​ಗೆ ಜಾಗ ಬಿಡದೆ ಸತಾಯಿಸಿದ್ದಕ್ಕೆ ಸಾರ್ವಜನಿಕರೇ ಬುದ್ಧಿ ಕಲಿಸಿದ್ದಾರೆ.ಹಾಸನ ಜಿಲ್ಲೆ ಆಲೂರು ತಾಲೂಕಿನ ವೈ.ಎನ್‌.ಪುರ ಬಳಿ ಘಟನೆ ನಡೆದಿದ್ದು, ಬೈಕ್​ನಲ್ಲಿ ತೆರಳುತ್ತಿದ್ದ ಯುವಕನೊಬ್ಬ ಬೇಕು ಬೇಕಂತಲೇ ಬಸ್​ಗೆ ಅಡ್ಡಬಂದು ಒಮ್ಮೆ ರಸ್ತೆಯ ಈಚೆಗೂ, ಇನ್ನೊಮ್ಮೆ ರಸ್ತೆಯ ಆಚೆ ಬದಿಗೂ ಬೈಕ್​ ಚಲಾಯಿಸುತ್ತಾ ಅಪಾಯಕಾರಿಯಾಗಿ ವರ್ತಿಸಿದ್ದಾನೆ. ಈತನ ಆಟಾಟೋಪವನ್ನು ಸಹಿಸಿಕೊಂಡ ಬಸ್​ ಚಾಲಕ ಸುಮಾರು ದೂರ ನಿಧಾನಕ್ಕೆ ಬಸ್​ ಚಲಾಯಿಸಿದ್ದಾರೆ. ಕೊನೆಗೆ, ಅದೇ ಹಾದಿಯಲ್ಲಿ ಬಂದ ಇನ್ನಿತರ ಬೈಕ್​ ಸವಾರರು ಆತನನ್ನು ಅಡ್ಡಗಟ್ಟಿ ಹಿಡಿದು ಸರಿಯಾಗಿ ಥಳಿಸಿ ಬುದ್ದಿ ಕಲಿಸಿದ್ದಾರೆ.

ಬೈಕ್​ ಸವಾರನ ಹುಡುಗಾಟ ಬಸ್​ ಪ್ರಯಾಣಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸುಮಾರು ದೂರದ ತನಕವೂ ಬಸ್​ ಮುಂಭಾಗದಲ್ಲೇ ಅಡ್ಡಾದಿಡ್ಡಿಯಾಗಿ ಬೈಕ್​ ಚಲಾಯಿಸಿದ ಯುವಕ ಒಮ್ಮೆಯಂತೂ ಎದುರಿನಿಂದ ಬರುತ್ತಿದ್ದ ಬೈಕ್​ನವರಿಗೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಅದಾದ ಮೇಲೂ ತನ್ನ ಕುಚೇಷ್ಟೆಯನ್ನು ಬಿಡದೆ ಬೈಕ್​ ಅನ್ನು ತೇಲಾಡಿಸುತ್ತಾ ಇಡೀ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಾಗಿದ್ದಾನೆ.

ಕೊನೆಗೆ ಹಿಂಬದಿಯಿಂದ ಬಂದ ಮೂರು ಬೈಕ್​ನಲ್ಲಿ ಬಂದವರು ಆತನನ್ನು ನಿಧಾನಕ್ಕೆ ರಸ್ತೆಯ ಪಕ್ಕಕ್ಕೆ ತಡೆದು ನಿಲ್ಲಿಸಿ ಧರ್ಮದೇಟು ನೀಡಿದ್ದಾರೆ. ಜತೆಗೆ, ಬಸ್​ನಲ್ಲಿದ್ದವರು ಕೂಡಾ ಆತನ ವರ್ತನೆಯಿಂದ ರೋಸಿಹೋಗಿದ್ದರಾದ್ದರಿಂದ ಸಾರ್ವಜನಿಕರಿಗೆ ಬೆಂಬಲ ಸೂಚಿಸಿದ್ದಾರೆ. ಕೊನೆಗೆ ಆತನನ್ನು ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ಟ್ರ್ಯಾಕ್ಟರ್​-ಬೈಕ್​ ಅಪಘಾತ: ಬೈಕ್​ ಸವಾರರಿಬ್ಬರು ಸಾವು
ಮೈಸೂರು: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್‌ನಲ್ಲಿದ್ದ ಇಬ್ಬರು ಸವಾರರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ಸಂಭವಿಸಿದೆ. ಮೈಲಾಂಬೂರು ಗ್ರಾಮದ ರಾಜೇಗೌಡ(55), ಕೆ.ಆರ್.ನಗರ ತಾಲೂಕು ಮಾದಹಳ್ಳಿಯ ರವಿ(35) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಹುಣಸೂರು ಕಡೆಯಿಂದ ಗ್ರಾಮಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.

ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಚಾಲಕನಿಗೆ ಗಾಯ
ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದ್ದು ಚಾಲಕನಿಗೆ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ ಬೆಟ್ಟ ಬಳಿ ನಡೆದಿದೆ. ಕುಶಾಲನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಮಹದೇವ್‌ಗೆ ಗಂಭೀರ ಗಾಯಗಳಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
Bengaluru Wheeling: ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರೂ ಸೇರಿ 6 ಯುವಕರ ಸೆರೆ; 8 ಬೈಕ್ ವಶಕ್ಕೆ 

Accident: ಟ್ರ್ಯಾಕ್ಟರ್-ಬೈಕ್ ನಡುವೆ ಡಿಕ್ಕಿ, ಇಬ್ಬರ ಸಾವು