
ಹಾಸನ, ಅಕ್ಟೋಬರ್ 26: ಸ್ಯಾಂಡಲ್ ವುಡ್ನಲ್ಲಿ ಬ್ಲಾಕ್ ಬಸ್ಟರ್ ಆಗಿರುವ ‘ಪ್ರೇಮದ ಊರಲಿ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಕೋಟಿ ಕೋಟಿ ಸಿನಿಪ್ರಿಯರ ಮನ ಗೆದ್ದಿದೆ. ಬೆಳ್ಳಿ ಪರದೆಯಲ್ಲಿ ಚಿತ್ರ ನೋಡಿ ಸಂಭ್ರಮಿಸಿದ ಜನರು, ಸಿನಿಮಾ ಚಿತ್ರೀಕರಣವಾದ ಸೀಗೆಗುಡ್ಡಕ್ಕೆ ಇದೀಗ ಲಗ್ಗೆಯಿಡುತ್ತಿದ್ದು, ಹಾಸನ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಿರಿದಾದ ರಸ್ತೆ, ಪಾರ್ಕಿಂಗ್ ಸಮಸ್ಯೆ ಸರಿಮಾಡಲು ಅರಣ್ಯ ಇಲಾಖೆಗೆ ಕಂದಾಯ ಇಲಾಖೆ ಪತ್ರ ಬರೆದಿದೆ. ಮೀಸಲು ಅರಣ್ಯದೊಳಗೆ ಜನರು ಪ್ರವೇಶ ಮಾಡುವಂತಿಲ್ಲ. ಚಿರತೆ, ಕರಡಿ ಇರುವ ತಾಣದಲ್ಲಿ ಅನಾಹುತ ಸಂಭವಿಸುವುದಕ್ಕೂ ಮುನ್ನ ಜನರಿಗೆ ನಿರ್ಬಂಧ ಹೇರಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಜನರ ನೆಚ್ಚಿನ ತಾಣ ಇದೀಗ ನಿಷೇಧಿತ ಪ್ರದೇಶವಾಗಲಿದೆಯಾ ಎಂಬ ಆತಂಕ ಎದುರಾಗಿದೆ.
‘ಪ್ರೇಮದ ಊರಲ್ಲಿ’ ಸಿನಿಮಾ ಚಿತ್ರೀಕರಣಗೊಂಡಿರುವ ಸುಂದರ ತಾಣ ಸೀಗೆಗುಡ್ಡ ನೋಡಲು ಜನರು ಮುಗಿಬೀಳುತ್ತಿದ್ದಾರೆ. ಕಳದ ಮೂರುವಾರಗಳಿಂದ ಸಾಗರೋಪಾದಿಯಲ್ಲಿ ಬರುತ್ತಿರುವ ಜನರನ್ನ ನಿಯಂತ್ರಣ ಮಾಡುವುದೇ ಇದೀಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾರ್ಕಿಂಗ್ಗೆ ಜಾಗ ಇಲ್ಲ, ರಸ್ತೆ ಸರಿಯಿಲ್ಲ, ಕುಡಿಯುವ ನೀರು, ಶೌಚಾಲಯವಿಲ್ಲ ಎಂದು ಜನರಿಂದ ದೂರು ಬಂದ ಹಿನ್ನೆಲೆ ಜಿಲ್ಲಾಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಸೀಗೆಗುಡ್ಡದಲ್ಲಿ ಜನವೋ ಜನ…ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ ಸಿನಿಮಾ
ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿರುವ ಕಾರಣ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ ಅರಣ್ಯ ಸಂರಕ್ಷಣಾ ಕಾಯಿದೆ ಪ್ರಕಾರ ಮೀಸಲು ಅರಣ್ಯದಲ್ಲಿ ರಸ್ತೆ, ಪಾರ್ಕಿಂಗ್, ಇತರೆ ಮೂಲ ಸೌಲಭ್ಯ ನೀಡಲು ಸರ್ಕಾರದ ಅನುಮತಿ ಬೇಕು, ಸೀಗೆಗುಡ್ಡ ಮೀಸಲು ಅರಣ್ಯವಾಗಿದ್ದು, ಚಿರತೆ, ಕರಡಿಗಳಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಬಂದರೆ ಕಾಡು ಪ್ರಾಣಿಗಳಿಗೆ ಸಮಸ್ಯೆಯುಂಟಾಗಿ ಕಾಡು ಪ್ರಾಣಿಗಳು, ಮಾನವ ಸಂಘರ್ಷ ಎದುರಾಗುವ ಸಾಧ್ಯತೆಯಿದೆ. ಹಾಗಾಗಿ ಈ ಪ್ರದೇಶಕ್ಕೆ ಜನರ ಪ್ರವೇಶ ನಿರ್ಬಂಧ ಹೇರಬೇಕು ಎಂದು ಪತ್ರದ ಮೂಲಕ ತಿಳಿಸಲಾಗಿದ್ದು, ಇಡೀ ಪ್ರದೇಶಕ್ಕೆ ಜನರ ಪ್ರವೇಶ ನಿರ್ಬಂಧಿಸಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಹಾಸನದಿಂದ 15 ಕಿ.ಮೀ ದೂರದಲ್ಲಿರುವ ಸೀಗೆ ಗ್ರಾಮದ ಸಮೀಪವಿರುವ ಸೀಗೆಗುಡ್ಡ ಪ್ರಕೃತಿ ಸೌಂದರ್ಯದ ತಾಣ. ಇಂತಹ ಸುಂದರ ತಾಣದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಚಿತ್ರೀಕರಣವಾಗಿದೆ. ಇದೇ ಬೆಟ್ಟದಲ್ಲಿ ಪುರಾಣ ಪ್ರಸಿದ್ಧ ಮಳೆ ಮಲ್ಲೇಶ್ವರ ದೇಗುಲ ಕೂಡ ಇದ್ದು, ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುತ್ತಾರೆ. ಕಡಿಮೆ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುವ ವೇಳೆ ಏನು ಸಮಸ್ಯೆ ಇರಲಿಲ್ಲ. ಆದರೆ ಯಾವಾಗ ‘ಪ್ರೇಮದ ಊರಲಿ’ ಸಿನಿಮಾ ಹಿಟ್ ಆಯಿತೋ, ಇಲ್ಲಿಗೆ ಬರುವ ಜನರ ಸಂಖ್ಯೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ನಿತ್ಯವೂ ಸಾವಿರಾರು ವಾಹನಗಳು ಸಂಚಾರದಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಸದ್ಯ ಅರಣ್ಯ ಇಲಾಖೆ ಈ ಪ್ರದೇಶವನ್ನ ನಿರ್ಬಂಧ ಮಾಡುವ ಇಂಗಿತ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾಸನ ತಾಲೂಕು ತಹಶೀಲ್ದಾರ್ ಗೀತಾ, ‘ಈ ಅರಣ್ಯ ಇಲಾಖೆ ಅಧಿಕಾರಿಗಳ ವರದಿ ಬಗ್ಗೆ ಡಿಸಿ ಅವರ ಗಮನಕ್ಕೆ ತರಲಾಗಿದ್ದು, ಮೇಲಾಧಿಕಾರಿಗಳು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
ಒಟ್ಟಿನಲ್ಲಿ ಸಿನಿಮಾ ಹಿಟ್ ಆದ ಬೆನ್ನಲ್ಲೇ ಸೀಗೆಗುಡ್ಡಕ್ಕೆ ಹೊಸ ರಂಗು ಬಂದಿದೆ. ಜನರ ದಂಡು ಸುಂದರ ತಾಣ ಕಣ್ತುಂಬಿಕೊಳ್ಳಲು ಬರುತ್ತಿದೆ. ಆದರೆ ಇದೀಗ ಮೀಸಲು ಅರಣ್ಯ ಎನ್ನುವ ಕಾರಣಕ್ಕೆ ಸೀಗೆಗುಡ್ಡಕ್ಕೆ ನಿರ್ಬಂಧ ಹೇರಲಾಗುತ್ತದೆ ಎನ್ನವು ಭೀತಿ ಎದುರಾಗಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಏನು ತೀರ್ಮಾನ ಮಾಡಲಿದೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.