ಹಾಸನ: ಕಾಡಾನೆಯೊಂದು ಅಡುಗೆ ಮನೆಯ ಕಿಟಕಿ ಮುರಿದು ತನ್ನ ಸೊಂಡಿಲನ್ನು ಒಳಗೆ ಹಾಕಿ ಸಿಕ್ಕ ಸಿಕ್ಕ ಆಹಾರ, ಸಾಮಗ್ರಿಯನ್ನು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಹಾಸನ ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಾಡಾನೆ (Wild elephant) ಹಾವಳಿ ಮಿತಿ ಮೀರಿದ್ದು, ನಿತ್ಯವೂ ಗ್ರಾಮದೊಳಗೆ ಒಂಟಿ ಸಲಗಗಳು ಆಗಮಿಸುತ್ತಿವೆ. ಕಾಡಾನೆ ಈ ರೀತಿ ಮನೆಗೆ ನುಗ್ಗುತ್ತಿರುವುದು ಜನರನ್ನು ಭಯಭೀತಗೊಳಿಸುತ್ತಿದೆ. ಈ ವೀಡಿಯೋ ಕೂಡ ಹಾಸನ ಜಿಲ್ಲೆ ಆಲೂರಿನ ಸಕಲೇಶಪುರ ಭಾಗದಲ್ಲಿ ನಡೆದ ಘಟನೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರು ಸದ್ಯ ಈ ವಿಡಿಯೋವನ್ನು ತಮ್ಮ ವಾಟ್ಸಾಪ್ ಸ್ಟೇಟಸ್ಗೆ ಹಾಕಿಕಿಂಡು ಜಿಲ್ಲೆಯಲ್ಲಿ ಗಜ ಗಲಾಟೆ ಯಾವ ಹಂತಕ್ಕೆ ತಲುಪಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಒಂಟಿ ಸಲಗವೊಂದು ಅಡುಗೆ ಮನೆಯ ಕಿಟಕಿಯನ್ನೇ ಧ್ವಂಸ ಮಾಡಿ ಹೀಗೆ ಲೂಟಿ ಮಾಡುತ್ತಿದ್ದು, ಕಾಡಾನೆಗಳು ನಾಡನ್ನೇ ಆವಾಸ ಸ್ಥಾನ ಮಾಡಿಕೊಂಡಿರುವುದಕ್ಕೆ ಸಾಕ್ಷಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ವಿಡಿಯೋ ಪರಿಶೀಲನೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇದು ನಮ್ಮ ರಾಜ್ಯದ ವಿಡಿಯೋ ಅಲ್ಲ. ಒರಿಸ್ಸಾ ಅಥವಾ ಪಶ್ಚಿಮ ಬಂಗಾಳ ರಾಜ್ಯದ ಕಡೆಯ ವಿಡಿಯೋ ಇರಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ಭತ್ತದ ಕಣಜ ಮುರಿದು ಭತ್ತ ತಿಂದಿದ್ದ ಸಲಗ, ನಂತರ ಮನೆಮುಂದೆ ಆರ್ಭಟ ನಡೆಸಿತ್ತು. ಹಾಗಾಗಿಯೇ ಇದೂ ನಮ್ಮ ಜಿಲ್ಲೆಯ ವಿಡಿಯೋ ಇರಬಹುದು. ಅಲ್ಲದೇ ವಿಡಿಯೋದಲ್ಲಿ ಕನ್ನಡ ಮಾತನಾಡುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ 60 ಕ್ಕೂ ಹೆಚ್ಚು ಆನೆಗಳು ನಾಡಿನಲ್ಲೇ ನೆಲೆಯೂರಿದ್ದು, ಮುಂದೊಂದು ದಿನ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ. ಪರಿಸ್ಥಿತಿ ಕೈ ಮೀರುವ ಮೊದಲೇ ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎನ್ನುವುದು ಮಾತ್ರ ಸತ್ಯ.
ವರದಿ: ಮಂಜುನಾಥ. ಕೆಬಿ
ಇದನ್ನೂ ಓದಿ:
ಮೈಸೂರು ಸಮೀಪದ ಕಂತೆ ಮಾದಪ್ಪ ಬೆಟ್ಟದಲ್ಲಿ ಮತ್ತೆ ಕಾಣಿಸಿಕೊಂಡವು ಕಾಡಾನೆಗಳು, ಆತಂಕದಲ್ಲಿ ಜನ
ಹಾಸನ: ಮಿತಿ ಮೀರಿದ ಕಾಡಾನೆ ಹಾವಳಿ; ಬಯಲಿನಲ್ಲಿ ದನಕರುಗಳು ಅಡ್ಡಾಡುವಂತೆ ಪ್ರತ್ಯಕ್ಷವಾದ 35 ಆನೆಗಳು
Published On - 11:05 am, Wed, 15 December 21