ನಾವು 21ನೇ ಶತಮಾನದಲ್ಲಿದ್ದೇವೆ, ಎಲ್ಲವೂ ಡಿಜಿಟಲ್ ಯುಗ, ಆಧುನಿಕತೆಯ ಜಗತ್ತು, ಬೆರಳ ತುದಿಯಲ್ಲೇ ಪ್ರಪಂಚ ಇದೆ, ಇಡೀ ವಿಶ್ವವೇ ಒಂದು ಹಳ್ಳೀ ಎನ್ನೋ ಕಾನ್ಸೆಪ್ಟ್ ಬಂದು ಬಹಳ ದಿನಗಳೇ ಆಗಿವೆ, ಆದ್ರೆ ಮೂಢರ ಅಂಧನಂಬಿಕೆಗೆ, ಅದರ ಹೆಸರಿನಲ್ಲಿ ನಡೆಯೋ ಅನಾಚಾರ, ಅನಾಗರಿಕ ವರ್ತನೆಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ. ಇದಕ್ಕೆ ತಾಜಾ ಉದಾಹರಣೆ ಹಾಸನ ಜಿಲ್ಲೆಯಲ್ಲಿ ನಡೆದಿರುವ ಅಮಾನವೀಯ ಹತ್ಯೆ. ಅನಾರೋಗ್ಯ ಪೀಡಿತ ಮಹಿಳೆಯೊಬ್ಬರಿಗೆ ದೇವರ ಪೂಜೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿದ ಪೂಜಾರಿಯೊಬ್ಬ ಮನಬಂದಂತೆ ಥಳಿಸಿದ್ದು, ಆಕೆಯ ತಲೆಗೆ ಗಂಭೀರ ಗಾಯವಾಗಿ ಮಹಿಳೆ ಮೃತಪಟ್ಟಿದ್ದು ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.
ಅನಾರೋಗ್ಯ ಪೀಡಿತೆಗೆ ಪೂಜೆ ನೆಪದಲ್ಲಿ ಹಲ್ಲೆ:
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಗೌಡರಹಳ್ಳಿಯ ಪಾರ್ವತಿ( 47) ಪೂಜೆ ನೆಪದಲ್ಲಿ ಪೆಟ್ಟು ತಿಂದು ಕೊಲೆಯಾಗಿರೋ ಮಹಿಳೆ, 22 ವರ್ಷಗಳ ಹಿಂದೆ ಗೌಡರಹಳ್ಳಿಯ ಕುಮಾರ್ ನನ್ನ ಮಧುವೆಯಾಗಿದ್ದ ಪಾರ್ವತಿ ಕೆಲ ವರ್ಷಗಳ ಹಿಂದೆ ಗಂಡ ತೀರಿಹೋಗಿದ್ದರಿಂದ ತಾಲ್ಲೂಕಿನ ಬೆಕ್ಕ ಗ್ರಾಮದ ತನ್ನ ಸಹೋದರಿ ಮನೆಯಲ್ಲಿ ನೆಲೆಸಿದ್ದರು. ಮಗಳಿಗೆ ಮದುವೆಯಾಗಿ ಆಕೆ ಬೆಂಗಳೂರಿನಲ್ಲಿದ್ದುದರಿಂದ ತಾಯಿಯೂ ಕೂಡ ಅಲ್ಲೇ ಮಗಳ ಮನೆಯಲ್ಲಿದ್ದರು. ಈ ವೇಳೆ ಕೆಲ ತಿಂಗಳ ಹಿಂದೆ ಪಾರ್ವತಿಗೆ ತಲೆನೋವು ಕಾಣಿಸಿಕೊಂಡಿದೆ, ಎಲ್ಲಿ ಚಿಕಿತ್ಸೆ ಕೊಡಿಸಿದ್ರು ಏನೂ ಪ್ರಯೋಜನ ಆಗಿಲ್ಲ, ಬೆಂಗಳೂರಿನ ಇಎಸ್ ಐ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದಾಗಲು ಆಕೆಗೆ ತಲೆನೋವು ಕಡಿಮೆ ಆಗಿರಲಿಲ್ಲವಂತೆ.
ಯಾರೋ ಸಂಬಂಧಿಕರು ಬೆಕ್ಕಾ ಗ್ರಾಮದಲ್ಲಿಯೇ ಇರೋಪೂಜಾರಿಯ ಬಳಿ ಹೋಗಿ ಪೂಜೆ ಮಾಡಿಸಿ ಎಲ್ಲಾ ಸರಿಯಾಗುತ್ತೆ ಎನ್ನೋ ಸಲಹೆ ಕೊಟ್ಟಿದ್ದಾರೆ, ಅದನ್ನೇ ನಂಬಿದ ಪಾರ್ವತಿ ಮತ್ತವರ ಕುಟುಂಬ ಅಲ್ಲಿಗೆ ಬಂದು ಪೂಜಾರಿ ಮಧು ಎಂಬಾತನ ಬಳಿ ಹೋಗಿದ್ದಾರೆ, ಮೂರ್ನಾಲ್ಕುಬಾರಿ ದೇವಾಲಯಕ್ಕೆ ಬರ ಹೇಳಿಕೊಂಡಿದ್ದ. ಡಿಸೆಂಬರ್ 7ರಂದು ಉತ್ಸವ ಇದೆ ಎಂದು ಬರಹೇಳಿ ಅಲ್ಲಿ ನಿನಗೆ ಶಂಕೆ ಇದೆ, ಅದರ ಪರಿಹಾರ ಆಗಬೇಕು ಎಂದು ಬೆತ್ತದ ಕೋಲಿನಿಂದ ಮನ ಬಂದಂತೆ ಹಲ್ಲೆಮಾಡಿದ್ದಾನೆ. ತಲೆಗೆ ಗಂಭೀರ ಪೆಟ್ಟುಬಿದ್ದು ಅಸ್ವಸ್ಥಗೊಂಡ ಮಹಿಳೆಯನ್ನ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಬಳಿಕ ಹಾಸನದ ಹಿಮ್ಸ್ ಗೆ ಕರೆತಂದರೂ ಚಿಕಿತ್ಸೆ ಫಲಿಸದೆ ಆಕೆ ಡಿಸೆಂಬರ್ ಕೊನೆಯುಸಿರೆಳೆದಿದ್ದು ಇದೀಗ ಪೂಜೆ ನೆಪದಲ್ಲಿ ಮನ ಬಂದಂತೆ ಹಲ್ಲೆ ಮಾಡಿದ್ದ ಪೂಜಾರಿ ವಿರುದ್ದ ಕೊಲೆ ಕೇಸ್ ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ..
ಕೇಸ್ ದಾಖಲಾಗುತ್ತಲೆ ಪೂಜಾರಿ ಎಸ್ಕೇಪ್…
ಬೆಕ್ಕ ಗ್ರಾಮದಲ್ಲಿ ಪಿರಿಯಾಪಟ್ಟಣದಮ್ಮ ಎನ್ನೋ ದೇವರನ್ನ ಪೂಜೆ ಮಾಡಿಕೊಂಡು ಹೀಗೆ ಕಂಡ ಕಂಡವರಿಗೆ ಅನಾರೋಗ್ಯ ಗುಣ ಪಡಿಸ್ತೀನಿ, ನಿಮ್ಮ ಕಷ್ಟ ದೂರ ಮಾಡ್ತೀನಿ ಎಂದು ಪೂಜೆ ಮಾಡುತ್ತಿದ್ದ. ಈ ಪೂಜಾರಿ ಮಧು ಪಾರ್ವತಿಗೂ ಅದನ್ನೇ ಹೇಳಿದ್ದಾನೆ. ಮೊದಲು ಡಿಸೆಂಬರ್ 2ರಂದುಬೆಂಗಳೂರಿನಿಂದ ಬೆಕ್ಕಾ ಗ್ರಾಮದ ತನ್ನ ಅಕ್ಕನ ಮನೆಗೆ ಬಂದಿದ್ದ ಪಾರ್ವತಿಯನ್ನ ತಾನೇ ಬಂದು ಮಾತನಾಡಿಸಿದ್ದ ಪೂಜಾರಿ ಡಿಸೆಂಬರ್ 3ರಂದು ದೇಗುಲಕ್ಕೆ ಬರ ಹೇಳಿದ್ದನಂತೆ, ಅಂದು ದೇಗುಲಕ್ಕೆ ಹೋದವರಿಗೆ ಪೂಜೆ ಮಾಡಿ ಕಳುಹಿಸಿದ ಮಧು ಮತ್ತೆ ಡಿಸೆಂಬರ್ 7 ಕ್ಕೆ ಉತ್ಸವ ಇದೆ ಆಗ ಬನ್ನಿ ಇವರಿಗೆ ಶಂಕೆ ಇದೆ ಬಿಡಿಸಬೇಕು ಎಂದು ಹೇಳಿದ್ದಾನೆ.
ಅದರಂತೆ ಮತ್ತೆ ಡಿಸೆಂಬರ್ 7ಕ್ಕೆ ದೇಗುಲಕ್ಕೆ ಹೋದಾಗ ಪೂಜೆ ಮಾಡಿ ಬೆತ್ತದಿಂದ ತಲೆ, ಮೈ ಕೈಗೆ ಬೆತ್ತದೇಟು ಕೊಟ್ಟಿದ್ದಾನೆ, ಮೊದಲೇ ಅನಾರೋಗ್ಯದಿಂದ ಬಳಲಿದ್ದ ಮಹಿಳೆ ತೀವ್ರ ಅಸ್ವಸ್ಥಳಾಗಿ ಕುಸಿದುಬಿದ್ದಿದ್ದಾಳೆ. ಕಡೆಗೆ ಆಕೆಯನ್ನ ಆಸ್ಪತ್ರೆಗೆ ಸೇರಿಸಿದ ಕುಟುಂಬ ಸದಸ್ಯರು ಚಿಕಿತ್ಸೆ ಕೊಡಿಸೋ ಯತ್ನಮಾಡಿದ್ದರು. ಅದು ಫಲ ನೀಡದೆ ಆಕೆ ಮೃತಪಟ್ಟಿದ್ದಾರೆ. ಆದ್ರೆ ಈ ಬಗ್ಗೆ ಅರಿವೇ ಇಲ್ಲದ ಕುಟುಂಬದ ಸದಸ್ಯರು ಆಕೆಯ ಅಂತ್ಯಕ್ರಿಯೆ ಮಾಡಲು ತಯಾರಿಯಲ್ಲಿದ್ದ ಮಾಹಿತಿ ತಿಳಿದ ಶ್ರವಣಬೆಳಗೊಳ ಪೊಲೀಸರು ವಿಚಾರಣೆ ಮಾಡಿದಾಗ ನಡೆದಿರೋ ಘಟನೆ ಬೆಳಕಿಗೆ ಬಂದಿದ್ದು ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗುತ್ತಲೇ ಆರೋಪಿ ಪೂಜಾರಿ ಮಧು ಎಸ್ಕೇಪ್ ಆಗಿದ್ದಾನೆ.
ದೇವರ ಮೊರೆ:
ತಲೆನೋವು ಎಂದು ಕಂಡ ಕಂಡ ಆಸ್ಪತ್ರೆ ಸುತ್ತಾಡಿದ್ದ ಪಾರ್ವತಿ ಎಲ್ಲಿಯೂ ಗುಣ ಆಗದಿದ್ದಾಗ ಪರಿಚಿತರು ಹೇಳಿದಂತೆ ದೇವರಿಗೆ ಮೊರೆ ಹೋಗಿದ್ರು, ಇಲ್ಲಿಯಾದ್ರು ತನ್ನ ಸಮಸ್ಯೆಗೆ ಮುಕ್ತಿ ಸಿಗುತ್ತೆ ಎಂದು ನಂಬಿದ್ರು, ಆದ್ರೆ ಪೂಜೆ ನೆಪದಲ್ಲಿ ಹಲ್ಲೆಮಾಡಿದ ಪೂಜಾರಿ ಆಕೆಗೆ ಜೀವನದಿಂದಲೇ ಮುಕ್ತಿಕೊಡಿಸಿಬಿಟ್ಟಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನಿನ್ನೆ ಕೊಲೆ ಕೇಸ್ ದಾಖಲಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ, ಮೇಲ್ನೋಟಕ್ಕೆ ತಲೆಗೆ ಗಂಭೀರ ಗಾಯವಾಗಿ ಸಾವಾಗಿರಬಹುದು ಎಂದು ಶಂಕೆ ಬಂದ ಹಿನ್ನೆಲೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಾರ್ವತಿ ಪುತ್ರಿಯಿಂದಲೇ ದೂರು ಸ್ವೀಕರಿಸಿ ತನಿಖೆ ಕೂಡ ನಡೆಯುತ್ತಿದ್ದು ಅನಾರೋಗ್ಯ ಎಂದು ಆಸ್ಪತ್ರೆ ಸುತ್ತಾಡಿ ಗುಣ ಆಗಲಿಲ್ಲ ಎಂದು ದೇವರ ಮೊರೆಹೋದ ಮಹಿಳೆ ಪೂಜಾರಿ ಮಾಡಿದ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡಿರೋದು ನಿಜಕ್ಕೂ ದುರಂತ.
Woman Dies After Being Beaten Up By Priest In Hassan | ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ
Published On - 8:10 am, Sat, 11 December 21