ಇಂದು ವಿಶ್ವ ಆನೆಗಳ ದಿನಾಚರಣೆ. ವನ್ಯಪ್ರಾಣಿಗಳಲ್ಲೇ ಅತಿ ಬುದ್ದಿವಂತ, ಬಲಿಷ್ಟ ದೊಡ್ಡ ಪ್ರಾಣಿ ಎನಿಸಿಕೊಂಡ ಗಜರಾಜ ಇಂದು ಅಕ್ಷರಶಃ ಸಂಘರ್ಷದ ಕೊನೆಗೆ ಬಂದು ನಿಂತಿದ್ದಾನೆ, ಆನೆಯೊಂದು ನಿತ್ಯ ಹತ್ತಾರು ಕಿಲೋಮೀಟರ್ ನಡೆಯುತ್ತೆ, ನೂರಾರು ಕೆಜಿ ಆಹಾರ ತಿನ್ನುತ್ತೆ, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಇಂದು ಎಲ್ಲೆಲ್ಲಿ ಕಾಡಾನೆ ಹಾವಳಿಯನ್ನ ನಾವು ನೋಡುತ್ತಿದ್ದೇವೊ ಎಲ್ಲೆಡೆ ಸಮಸ್ಯೆ ಆಗಿರೋದೆ ಆಹಾರದ್ದು, ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂದು ದಶಕಗಳು ಕಳೆದಂತೆ ನಾಡಿನ ಆಹಾರಕ್ಕೆ ಹೊಂದಿಕೊಂಡು ಇಲ್ಲಿಯೇ ವಾಸ್ತವ್ಯ ಹೂಡಿದ್ದು ಇಂದು ಆನೆ ಮಾನವ ಸಂಘರ್ಷ ತಾರಕ್ಕೇರಲು ಕಾರಣವಾಗಿದೆ. ಹೆಚ್ಚು ಕಾರ್ಬೋಹೈಡ್ರೇಟ್ ಇರೋ ಆಹಾರಗಳಾದ, ಬಿದಿರು, ಕೆಲ ಮರಗಳ ತೊಗಟೆಯನ್ನ ಇಷ್ಟಪಟ್ಟು ತಿನ್ನುತ್ತಿದ್ದ ಕಾಡಾನೆಗಳು ಇಂದು ಬಿದಿರನ್ನೇ ಮರೆತೇ ಬಿಟ್ಟಿವೆ, ಮನುಷ್ಯರಂತೆ ಕಾಲ ಕಾಲಕ್ಕೆ ಸಿಗೋ ರೆಡಿ ಫುಡ್, ಹಲಸಿನ ಸೀಸನ್ ನಲ್ಲಿ ಹಲಸು, ಬಾಳೆ ಸಮಯದಲ್ಲಿ ಬಾಳೆ ತಿನ್ನುತ್ತಾ ಇತ್ತೀಚೆಗಂತೂ ಕಾಫಿ ಹಣ್ಣುಗಳನ್ನೂ ಮುಕ್ಕುತ್ತಾ ಆಹಾರಕ್ಕಾಗಿ ತಾನು ನಡೆಸುತ್ತಿರೋ ಹೋರಾಟವನ್ನ ಸಾರಿ ಹೇಳುತ್ತಿವೆ.
ಅಭಿವೃದ್ದಿಯ ನಾಗಾಲೋಟಕ್ಕೆ ನಾಶವಾದ ಕಾಡು, ಆನೆಗಳ ಆವಾಸಕ್ಕೆ ಕುತ್ತು
ಹಾಸನ ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ಅಕ್ಷರಶಃ ತಾರಕಕ್ಕೇರಿದೆ. 1991ರಿಂದ ಇಲ್ಲಿಯವರೆಗೆ ಆನೆ ದಾಳಿಯಿಂದ ಬರೊಬ್ಬರಿ 72 ಜನರು ಪ್ರಾಣ ಕಳೆದುಕೊಂಡಿದ್ದಾರೆ, ನೂರಾರು ಜನರು ಅಂಗವಿಕಲತೆಯಿಂದ ಮೂಲೆ ಹಿಡಿದಿದ್ದಾರೆ. 53 ಆನೆಗಳು ಜೀವ ಕಳೆದುಕೊಂಡಿವೆ. ನಿತ್ಯವೂ ಒಂದಲ್ಲಾ ಒಂದು ಗ್ರಾಮಗಳಲ್ಲಿ ಸಂಚರಿಸೋ ಆನೆಗಳ ಹಿಂಡು ನಿತ್ಯವೂ ಆಹಾರಕ್ಕಾಗಿ ಅಲೆದಾಡುತ್ತಾ, ಕಾಫಿ ತೋಟದಿಂದ ಕಾಳಿ ತೋಟಕ್ಕೆ ಸುತ್ತಾಡುತ್ತಾ ಹೊಟ್ಟೆಪಾಡಿಗಾಗಿ ಅಲೆದಾಡುತ್ತಿವೆ.ಈ ವೇಳೆ ಅಚಾನಕ್ಕಾಗಿ ಅಡ್ಡಬರೋ ಅಮಾಯಕರ ಪ್ರಾಣಗಳು ಬಲಿಯಾಗುತ್ತಿವೆ.
ಹೆಚ್ಚಾಗುತ್ತಲೇ ಇದೆ ಗಜ ಸಂತತಿ
ಹಾಸನ ಜಿಲ್ಲೆಯಲ್ಲಿ ಹಾಲಿ ಏನಿಲ್ಲವೆಂದರೂ 70ಕ್ಕೂ ಹೆಚ್ಚು ಆನೆಗಳು ಕಾಫಿ ತೋಟಗಳಲ್ಲೇ ಬೀಡುಬಿಟ್ಟಿವೆ, ಜಿಲ್ಲೆಯಲ್ಲಿ ಈವರೆಗೆ 50ಕ್ಕೂ ಹೆಚ್ಚು ಆನೆಗಳನ್ನ ಸೆರೆಹಿಡಿದು ಸ್ಥಳಾಂತರ ಮಾಡಿದರೂ ಅಲ್ಲರುವ ಆನೆಗಳ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಒಂದು ಆನೆ ಐದು ವರ್ಷಕ್ಕೆ ಒಂದು ಮರಿ ಹಾಕಿದ್ರು, ಅವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆಲ್ಲಾ ಕಾಡಿನ ಪ್ರಮಾಣ ಹೆಚ್ಚಾಗಿತ್ತು, ಆದ್ರೆ ನಾಲ್ಕು ದಶಕಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂರು ಜಲಾಶಯಗಳನ್ನ ನಿರ್ಮಿಸಲಾಗಿದೆ. ಬೃಹತ್ತಾದ ಹೇಮಾವತಿ ಜಲಾಶಯ ಆನೆಗಳ ಪ್ರಮುಖ ಕಾರಿಡಾರ್ ಗೆ ಡ್ಯಾಮೇಜ್ ಮಾಡಿದ್ರೆ, ವಾಟೆಹೊಳೆ, ಯಗಚಿ ಜಲಾಶಯಗಳು ಕೂಡ ಗಜರಾಜನ ಸಂಚಾರಕ್ಕೆ ಬ್ರೇಕ್ ಹಾಕಿಬಿಟ್ಟಿದೆ. ಆನೆಗಳು ನಿತ್ಯ 250 ಕೆಜಿಯಷ್ಟು ಆಹಾರ ಸೇವಿಸೋ ದೊಡ್ಡ ಪ್ರಾಣಿ. ಇದು ಎಂದೂ ನಿಂತಲ್ಲಿಯೇ ನಿಲ್ಲೋದಿಲ್ಲ, ಅಲೆದಾಡುತ್ತಲೆ ಆಹಾರ ಅರಸುತ್ತೆ, ಆದ್ರೆ ಡ್ಯಾಂ, ರಸ್ತೆಗಳ ನಿರ್ಮಾಣದಿಂದ ಆನೆಗಳ ಸಂಚಾರಕ್ಕೆ ದೊಡ್ಡ ಪ್ರಮಾಣದ ತಡೆಯಾಗಿದ್ದರಿಂದ ಆನೆಗಳು ನೆಲೆ ನಿಲ್ಲೋಕೆ ಶುರುಮಾಡಿದವು. ಕಾಡನ್ನು ಮರೆತು ನಾಡಿನಲ್ಲೇ ನೆಲೆ ನಿಲ್ಲೋಕೆ ಶುರುಮಾಡಿದವು, ದೊಡ್ಡ ಸಂಖ್ಯೆಯ ಆನೆಗಳು ಒಂದೇ ಕಡೆ ನೆಲೆ ನಿಂತಿದ್ದ ಒಂದೆಡೆ ಆನೆಗಳ ಪ್ರಾಣಕ್ಕೂ ಕುತ್ತು ತಂದೆ ಇನ್ನೊಂದೆಡೆ ಮನುಷ್ಯರ ಜೀವಕ್ಕೂ ಹಾನಿ ಆಗೋಕೆ ಶುರುಮಾಡಿದವು. ಜಿಲ್ಲೆಯಲ್ಲಿ ಆನೆ ಕಾರಿಡಾರ್ ನಿರ್ಮಿಸಬೇಕೆಂಬ ಜನರ ಕೂಗು ಅರಣ್ಯ ರೋಧನವಾಗಿದೆ. ಜನರು ಸತ್ತಾಗ ಬಂದು ಸಮಸ್ಯೆ ಪರಿಹಾರದ ಮಾತನಾಡೋ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ನಂತರ ಮರೆತು ಸುಮ್ಮನಾಗಿ ಬಿಡ್ತಾರೆ.
ಆನೆ ಹೆಸರಿನಲ್ಲಿ ಖರ್ಚಾಗಿದ್ದು ಕೋಟಿ ಕೋಟಿ ಆದ್ರೆ ಪರಿಹಾರ ಮಾತ್ರ ಏನೂ ಇಲ್ಲಾ
ಹಾಸನ ಜಿಲ್ಲೆಯಲ್ಲಿ ನಿತ್ಯವೂ ಕಾಡಾನೆಗಳಿಂದ ಸಂಕಷ್ಟಕ್ಕೀಡಾಗೋ ಗ್ರಾಮಗಳು ಕನಿಷ್ಟ 70 ಇವೆ. ಜಿಲ್ಲೆಯ ಸಕಲೇಶಪುರ ಆಲೂರು ಹಾಗು ಬೇಲೂರು ಅರಕಲಗೂಡು ಭಾಗದಲ್ಲಿ ಆನೆಗಳ ಸಂಚಾರ ಹೆಚ್ಚಾಗಿದೆ, ಮೊದಲೆಲ್ಲಾ ಕೊಡಗಿನಿಂದ ಬರ್ತಿದ್ದಾ ಆನೆಗಳು ಹಾಸನ ಚಿಕ್ಕಮಗಳೂರು, ಶಿವಮೊಗ್ಗಾ ಮೂಲಕ ದೊಡ್ಡ ಕಾರಿಡಾರ್ ಹೊಂದಿದ್ದವು, ಇನ್ನೊಂದುಕಡೆ ಚಾಮರಾಜನಗರದಿಂದ ಬನ್ನೇರುಘಟ್ಟದ ವರೆಗಿನ ಮತ್ತೊಂದು ಬೃಹತ್ ಆನೆ ಪಥ ಇತ್ತು, ಈಗ ಎಲ್ಲವೂ ಬೇರೆ ಬೇರೆ ಕಾರಣಕ್ಕೆ ಕಟ್ ಆಗಿದೆ, ಹಾಗಾಗಿಯೇ ಆನೆಗಳು ಸೀಮಿತ ಪ್ರದೇಶದಲ್ಲಿ ಓಡಾಡೋಕೆ ಶುರುಮಾಡಿದ್ದು ಆನೆಗಳ ಸಂಚಾರ ಸಮಸ್ಯೆ ಆಗಿ ಕಾಡೋಕೆ ಶುರುವಾಯ್ತು. ಯಾವಾಗ ಮನಷ್ಯ ಆನೆ ಸ್ಥಳವನ್ನು ಆಕ್ರಮಿಸಿಕೊಂಡನೋ ಆಗ ಮನುಷ್ಯನ ನೆಲೆಯಲ್ಲಿ ಆನೆ ಸಂಚಾರವೂ ಹೆಚ್ಚಾಯ್ತು ಅದು ಬೆಳೆ ಹಾನಿ ಜೀವ ಹಾನಿಗೂ ಕಾರಣವಾಯ್ತು. ಜಿಲ್ಲೆಯಲ್ಲಿ 1991ರಿಂದ ಇಲ್ಲಿಯವರೆಗೆ ಬೆಳೆ ಹಾನಿಯೆಂದು 15.99 ಕೋಟಿ ಪರಿಹಾರ ನೀಡಲಾಗಿದೆ. ನಿತ್ಯವೂ ಒಂದಿಲ್ಲ ಒಂದು ಕಡೆ ಆನೆಗಳ ಹಾವಳಿ ಜನರನ್ನ ಕಂಗೆಡಿಸಿಬಿಟ್ಟಿದೆ.
ಸಮಸ್ಯೆ ಪರಿಹಾರ ಮಾಡೋದು ಬಿಟ್ಟು ಅಡ್ಡದಾರಿ ಹಿಡಿದದ್ದೇ ಸಮಸ್ಯೆ ಹೆಚ್ಚಾಗಲು ಕಾರಣ
ಕಾಡಾನೆಗಳು ನಾಡಿಗೆ ಬರ್ತಿವೆ, ಬೆಳೆ ಹಾನಿ ಮಾಡ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸೋಕೆ ಶುರುಮಾಡುತ್ತಲೇ ಸರ್ಕಾರಿ ಅಧಿಕಾರಿಗಳು ಕಂಡುಕೊಂಡ ಮಾರ್ಗ ಆನೆ ಕಂದಕ, ಆ ನಂತರ ಸೋಲಾರ್ ಬೇಲಿ, ಬಳಿಕ ಜೇನು ಪೆಟ್ಟಿಗೆ ಹೀಗೆ ನಾನಾ ಮಾರ್ಗದ ಮೂಲಕ ಆನೆ ಬರದಂತೆ ತಡೆಯೋ ಯತ್ನ ನಡೆಯಿತು. ಆದ್ರೆ ಅತ್ಯಂತ ಬುದ್ದಿವಂತ ಪ್ರಾಣಿ ಆನೆ ಇದ್ಯಾವುದಕ್ಕೂ ಜಗ್ಗಲೇ ಇಲ್ಲಾ. ಒಂದೊಂದು ತಡೆಯನ್ನು ಅತ್ಯಂತ ಬುದ್ದಿವಂತಿಕೆಯಿಂದ ಭೇದಿಸಿ ತನ್ನ ಹೊಟ್ಟೆಪಾಡು ತೀರಿಸಿಕೊಳ್ಳೋಕೆ ಶುರುಮಾಡಿತು. ಕಡೆಗೆ ಅಂತಿಮ ಆಯ್ಕೆ ಎಂಬಂತೆ ಈಗ ಜಿಲ್ಲೆಯಲ್ಲಿ ರೈಲ್ವೆ ಕಂಬಿಗಳ ಮೂಲಕ ಬೃಹತ್ ಬೇಲಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ, ಆರಂಭಿಕ ಹಂತವಾಗಿ ಆಲೂರು ತಾಲ್ಲೂಕಿನ ದೊಡ್ಡ ಬೆಟ್ಟದ ತಪ್ಪಲಿನಲ್ಲಿ 4.68 ಕೋಟಿ ವೆಚ್ಚದಲ್ಲಿ 4.24 ಕಿಲೋಮೀಟರ್ ಉದ್ದದ ರೈಲ್ವೆ ಕಂಬಿಗಳ ಬೇಲಿ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಇದೇ ರೀತಿಯ 40 ಕಿಲೋಮೀಟರ್ ಉದ್ದದ ಬೇಲಿ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಈ ಮೂಲಕ ಆನೆಗಳು ಹೊರ ಜಿಲ್ಲೆಗಳಿಂದ ಹಾಸನಕ್ಕೆ ಎಂಟ್ರಿ ಆಗೋದನ್ನ ತಡೆಯೋಕೆ ಯೋಜನೆ ಮಾಡಲಾಗಿದೆ. ಆದ್ರೆ ಸರ್ಕಾರ ಆನೆ ಕಾರಿಡಾರ್ ನಿರ್ಮಾಣ, ರೈತರ ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ ಕ್ರಮಗಳ ಬಗ್ಗೆ ಆಲೋಚನೆಯನ್ನೇ ಮಾಡಲಿಲ್ಲ, ಇರೋ ಕಾಡಿನ ವಿಸ್ತರಣೆ, ಜೊತೆಗೆ ಕಾಡಿನಲ್ಲಿ ಆಹಾರ ನೀರು ಹೆಚ್ಚಿಸಲು ಬೇಕಾದ ಕ್ರಮಗಳ ಬಗ್ಗೆಯೂ ನಿಗಾ ವಹಿಸಲಿಲ್ಲ, ದಿನ ಕಳೆದಂತೆ ಆನೆಗಳು ಕಾಡನ್ನೇ ಮರೆತೇ ಬಿಟ್ಟವು, ಕಾಫಿತೋಟಗಳೇ ಆನೆಗಳ ನೆಲೆಗಳಾಗಿ ಬದಲಾಗಿಬಿಟ್ಟವು, ಇದು ಆನೆಗಳಿಗೂ ಸಂಕಷ್ಟ ರೈತರಿಗೂ ಕಷ್ಟ ಕಷ್ಟ ಅನ್ನುವ ಪರಿಸ್ಥಿತಿ ತಂದೊಡ್ಡಿವೆ, ಹಾಗಾಗಿ ಇಷ್ಟು ದಿನ ಸರ್ಕಾರ, ಅಧಿಕಾರಿ, ಜನಪ್ರತಿನಿಧಿಗಳ ಎದುರು ಮೊರೆಯಿಟ್ಟು ಸುಸ್ತಾದ ಈ ಭಾಗದ ಜನರು ಈಗ ಬೇಸತ್ತು ಕಾನೂನು ಹೋರಾಟದ ಮೊರೆ ಹೋಗೋಕೆ ತಯಾರಿ ಶುರುಮಾಡಿದ್ದಾರೆ. ಜನರನ್ನು ರಕ್ಷಿಸಿ ಆನೆಗಳನ್ನ ಉಳಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ನಡೆಯಲು ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ. ಜನರಿಗೆ ಕಾಡಾನೆಗಳ ಮೇಲೆ ದ್ವೇಷ ಬಾರದಂತೆ ಆನೆಗಳ ಹಾನಿಯಿಂದ ಆಗೋ ಹಾನಿಗೆ ತಕ್ಷಣ ಪರಿಹಾರ ಕೊಡೋದು. ಆನೆಗಳು ಬೆಳೆ ಹಾನಿ ಮಾಡದಂತೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ನೀಡೋದು,ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರವಾದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಹೀಗೆ ಸಾಕಷ್ಟು ಕ್ರಮಗಳ ಮೂಲಕ ಆನೆ ಮಾನವ ಸಂಘರ್ಷ ತಡೆಗೆ ಜನರ ಹಾಗು ಆನೆಗಳ ಜೀವ ರಕ್ಷಣೆಗೆ ಆಧ್ಯತೆ ನೀಡಲಾಗಿದೆ
-ಬಸವರಾಜ್-ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಸನ
2014ರಲ್ಲಿ ಅರಣ್ಯ ಇಲಾಖೆಯೇ ಹೈಕೋರ್ಟ್ ಗೆ ಹಾಸನ ಜಿಲ್ಲೆಯಲ್ಲಿನ ಆನೆಗಳನ್ನ ಸೆರೆಹಿಡಿದು ಸ್ಥಳಾಂತರ ಮಾಡೋದಾಗಿ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ ಅದನ್ನ ಅವರು ಅನುಷ್ಠಾನ ಮಾಡಿಲ್ಲ ಹಾಗಾಗಿ ಇಷ್ಟುದಿನ ಜನಪ್ರತಿನಿಧಿಗಳು, ಅಧಿಕಾರಿಗಳ ಎದುರು ಮನವಿ ಮಾಡಿ ಸಾಕಾಗಿದೆ. ಈಗ ಕೋರ್ಟ್ ಮೂಲಕ ಅರಣ್ಯ ಇಲಾಖೆ ನೀಡಿದ್ದ ಪ್ರಮಾಣ ಪತ್ರದ ಪ್ರಕಾರ ಕ್ರಮಕ್ಕೆ ನಿರ್ದೇಶನ ನೀಡಲು ಕಾನೂನು ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ. 30 ಇದ್ದ ಆನೆಗಳ ಸಂಖ್ಯೆ ಈಗ 80 ಆಗಿದೆ ಇದು ಹೀಗೆ ಮುಂದುವರೆದರೆ ನಾವು ಕೃಷಿ ಮಾಡೋದು ಹೇಗೆ? ಇದರಿಂದ ಆನೆಗಳ ಪ್ರಾಣಕ್ಕೂಕುತ್ತು ಜನರ ಜೀವಕ್ಕೂ ಸಂಕಷ್ಟ. ಹಾಗಾಗಿ ಆನೆಗಳನ್ನೂ ಉಳಿಸಿ ನಮ್ಮನ್ನೂ ರಕ್ಷಿಸಿ ಎನ್ನೋದು ನಮ್ಮ ಮನವಿ
-ವಿಶ್ವನಾಥ್ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಬೆಳೆಗಾರರ ಒಕ್ಕೂಟ
ವರದಿ -ಮಂಜುನಾಥ್-ಕೆ.ಬಿ ಹಾಸನ
ಇದನ್ನೂ ಓದಿ: World Elephant Day 2021: ವಾವ್! ತಮ್ಮ ದಿನವನ್ನು ಆಚರಿಸಲು 1300 ಕಿ.ಮೀ ನಡೆದು ತವರಿಗೆ ಬಂದ ಆನೆಗಳು
(World Elephant Day2021 man elephant conflict in hassan district of Karnataka)
Published On - 5:27 pm, Thu, 12 August 21