World Elephant Day 2021: ವಾವ್​! ತಮ್ಮ ದಿನವನ್ನು ಆಚರಿಸಲು 1300 ಕಿ.ಮೀ ನಡೆದು ತವರಿಗೆ ಬಂದ ಆನೆಗಳು

World Elephant Day 2021: ವಾವ್​! ತಮ್ಮ ದಿನವನ್ನು ಆಚರಿಸಲು 1300 ಕಿ.ಮೀ ನಡೆದು ತವರಿಗೆ ಬಂದ ಆನೆಗಳು

TV9 Web
| Updated By: Skanda

Updated on: Aug 12, 2021 | 2:01 PM

2020ರ ಡಿಸೆಂಬರ್​ನಿಂದ ಇಲ್ಲಿಯವರೆಗೂ ಸುಮಾರು 1300 ಕಿ.ಮೀ ನಡೆದ ಆನೆಗಳು ಯುವಾನ್ ನದಿಯ ಸೇತುವೆ ಮೇಲೆ ಹಾದು ಕೊನೆಗೂ ತಮ್ಮ ಮೂಲ ಬಿಡಾರ ತಲುಪಿವೆ.

ಒಂದು ವರ್ಷಕ್ಕಿಂತಲೂ ಹೆಚ್ಚು ಅವಧಿಯಿಂದ ಒಂದೆಡೆ ನೆಲೆ ನಿಲ್ಲದೆ ನಿರಂತರ ಪ್ರಯಾಣದಲ್ಲಿ ತೊಡಗಿದ್ದ ಚೀನಾದ ಗಜಪಡೆ ವಿಶ್ವ ಆನೆಗಳ ದಿನಾಚರಣೆಗೆ ದೊಡ್ಡ ಅಚ್ಚರಿ ನೀಡಿವೆ. 17 ತಿಂಗಳ ಸುದೀರ್ಘ ಪಯಣ ಮುಗಿಸಿ ಕೊನೆಗೂ ತವರು ಸೇರಿದ ಆನೆಗಳು ವಿಶ್ವ ಆನೆಗಳ ದಿನಕ್ಕೆ ಮುನ್ನ ಅಂದರೆ ಆಗಸ್ಟ್ 11ರಂದು 14 ಆನೆಗಳ ಮಹಾಪಯಣಕ್ಕೆ ಅಂತ್ಯ ಹಾಡಿವೆ. 2020ರ ಡಿಸೆಂಬರ್​ನಿಂದ ಇಲ್ಲಿಯವರೆಗೂ ಸುಮಾರು 1300 ಕಿ.ಮೀ ನಡೆದ ಆನೆಗಳು ಯುವಾನ್ ನದಿಯ ಸೇತುವೆ ಮೇಲೆ ಹಾದು ಕೊನೆಗೂ ತಮ್ಮ ಮೂಲ ಬಿಡಾರ ತಲುಪಿವೆ. ವಿಶ್ವ ಆನೆಗಳ ದಿನಾಚರಣೆಗೆ ಸರಿಯಾಗಿ ಮನೆಗೆ ಮರಳಿರುವ ಆನೆಗಳ ಸುದ್ದಿಯೀಗ ಜಗತ್ತಿನ ಎಲ್ಲರ ಗಮನ ಸೆಳೆಯುತ್ತಿದೆ.

ಅತ್ಯಂತ ಕುತೂಹಲಕಾರಿ ಹಾಗೂ ಗಮನ ಸೆಳೆವ ಸಂಗತಿಯೆಂದರೆ ಈ ಅಲೆಮಾರಿ ಗಜಪಡೆಯ ಕಾವಲಿಗೆಂದೇ ಚೀನಾ ಸರ್ಕಾರ 500 ಸಿಬ್ಬಂದಿ ಹಾಗೂ 14 ಡ್ರೋನ್​ ಕ್ಯಾಮೆರಾಗಳನ್ನು ನಿಯೋಜಿಸಿತ್ತು. ಇವುಗಳು ಜಿಯಾಂಗ್ ಪಟ್ಟಣದ ಬಳಿಯ ಹಳ್ಳಿಯೊಂದರ ಅರಣ್ಯ ಪ್ರದೇಶದಲ್ಲಿ ಮಲಗಿ ವಿಶ್ರಾಂತಿ ಪಡೆದಿರುವುದು ಕೂಡಾ ಡ್ರೋನ್​ ಕ್ಯಾಮೆರಾಗಳಲ್ಲಿ ಸೆರೆಯಾಗಿ ಭಾರೀ ವೈರಲ್​ ಆಗಿತ್ತು. ಇವು ಕಾಡಿನಲ್ಲಿ ಮರಿಗಳನ್ನು ನಡುವಲ್ಲಿ ಮಲಗಿಸಿಕೊಂಡು ಕುಂಭಕರ್ಣ ನಿದ್ರೆ ಹೋಗಿದ್ದ ದೃಶ್ಯ ಎಷ್ಟು ಮನೋಹರವಾಗಿತ್ತೋ ಇವುಗಳ ಪ್ರವಾಸ ಕಥನವೂ ಅಷ್ಟೇ ಮಜವಾಗಿದೆ.

ಈ ಆನೆಗಳು ತವರಿಗೆ ಹಿಂತಿರುಗಿದ ದೃಶ್ಯ ನೋಡಲು ಇಲ್ಲಿ ಕ್ಲಿಕ್​ ಮಾಡಿ. ಅದಕ್ಕೂ ಮುನ್ನ ಅವುಗಳ ಅದ್ಭುತ ಪ್ರಯಾಣ ಹೇಗಿತ್ತು ಎನ್ನುವುದನ್ನು ಒಮ್ಮೆ ಓದಿಕೊಳ್ಳಿ:

ಚೀನಾದ ಅಲೆಮಾರಿ ಆನೆಗಳ ವಿಶ್ವ ದಾಖಲೆ ನಡಿಗೆ; ಈ ಗಜಪಡೆಯ ಮಹಾಪ್ರವಾಸ ಎಷ್ಟು ಗಮ್ಮತ್ತಾಗಿದೆ ಗೊತ್ತಾ?