ಹಾವೇರಿ: ಪೊಲೀಸ್ ಠಾಣೆ, ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ, ಎಸಿಪಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಯಾವುದೇ ಖಾಸಗಿ ಕಾರ್ಯಕ್ರಮ ಆಚರಣೆ ಮಾಡುವಂತಿಲ್ಲ ಎಂದು ಇತ್ತೀಚಿಗಷ್ಟೇ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ (Praveen Sood) ಹೊರಡಿಸಿದ್ದ ಆದೇಶ ಉಲ್ಲಂಘಿಸಿದ್ದ ಪಿಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆಯ ಪಿಎಸ್ಐ ಸಂತೋಷ ಪಾಟೀಲ ಅವರೇ ಅಮಾನತಾದವರು. ಅವರು ಆಗಸ್ಟ್ 10,2021ರಂದು ಬಂಕಾಪುರ ಠಾಣೆಯಲ್ಲೇ ಸ್ಥಳೀಯರು, ಯುವಕರ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬ ಆಚರಣೆ ಫೋಟೋ, ವಿಡಿಯೋ ವೈರಲ್ ಆಗಿತ್ತು. ಪಿಎಸ್ಐ ಸಂತೋಷ ಪಾಟೀಲ ಸಸ್ಪೆಂಡ್ ಬಗ್ಗೆ ಎಸ್ಪಿ ಹನುಮಂತರಾಯ ಅಧಿಕೃತ ಮಾಹಿತಿ ನೀಡಿದ್ದಾರೆ.
ಪೊಲೀಸ್ ಠಾಣೆ, ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ, ಎಸಿಪಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಯಾವುದೇ ಖಾಸಗಿ ಕಾರ್ಯಕ್ರಮ ಆಚರಣೆ ಮಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸ್ವಾಗತ, ಬೀಳ್ಕೊಡುಗೆ ವಿಚಾರವಾಗಿ ಪ್ರತಿಕ್ರಿಯಸಿದ ಅವರು, ಸ್ವಾಗತ, ಬೀಳ್ಕೊಡುಗೆ ಕಾರ್ಯಕ್ರಮಕ್ಕೂ ನಿರ್ಬಂಧ ಹೇರಿ ಆದೇಶ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಶಿಸ್ತು ಪಾಲನೆಗೆ ಖಡಕ್ ಆದೇಶ ಹೊರಡಿಸಲಾಗಿದೆ. ರೌಡಿಶೀಟರ್‌ಗಳು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು, ಸಮಾಜಘಾತುಕ ವ್ಯಕ್ತಿಗಳ ಜತೆ ಸಂಪರ್ಕ ಇಟ್ಟುಕೊಳ್ಳಬಾರದು. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಜತೆ ಭಾಗಿಯಾಗಬಾರದು. ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸೂಕ್ತವಲ್ಲ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಖಡಕ್ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಮುನ್ನ ತಿಳಿದುಕೊಳ್ಳಬೇಕು. ಕಾರ್ಯಕ್ರಮ ಆಯೋಜಿಸಿರುವ ಸಂಸ್ಥೆ, ವ್ಯಕ್ತಿ ಹಿನ್ನೆಲೆ ತಿಳಿಯಬೇಕು ಎಂದು ಪ್ರವೀಣ್ ಸೂದ್ ಆದೇಶಿಸಿದ್ದಾರೆ. ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಮಾತ್ರ ಇರಬೇಕು. ಸಭೆ, ಸಮಾರಂಭಕ್ಕೆ ನೇರವಾಗಿ ಹಣ ಸಂಗ್ರಹ ಮಾಡುವಂತಿಲ್ಲ. ಹಿರಿಯ ಅಧಿಕಾರಿ ಅನುಮತಿ ಇಲ್ಲದೆ ಹಣ ಸಂಗ್ರಹಿಸಬಾರದು. ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ. ಎಲ್ಲಾ ಅಂಶಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಘಟಕಾಧಿಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:
(Birthday celebrations at the police station Bankapur PSI suspended)
Published On - 2:49 pm, Thu, 12 August 21