ಹಾವೇರಿ: ಇದು ಸಂತರ ನಾಡು. ವೈಚಾರಿಕ ಕ್ರಾಂತಿ ಮಾಡಿದ ಗುರುಗಳಿದ್ದಾರೆ. ಕನಕದಾಸರು, ಸಂತ ಶಿಶುನಾಳ ಷರೀಫರು ಇದ್ದಂತಹ ತಾಲೂಕಿದು. ಯಾವುದೂ ಶಾಶ್ವತವಲ್ಲ, ಈ ಬದುಕು ಕೂಡ ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ, ಸ್ಥಾನಮಾನ ಶಾಶ್ವತವಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ. ಶಿಗ್ಗಾಂವಿ ಕ್ಷೇತ್ರದ ಹೊರಗೆ ಇದ್ದಾಗ ನಾನು ಸಿಎಂ, ಗೃಹ ಸಚಿವ. ಕ್ಷೇತ್ರಕ್ಕೆ ಬಂದಾಗ ನಿಮ್ಮ ಬಸವರಾಜ ಬೊಮ್ಮಾಯಿ ಆಗಿರುವೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ನಿಮ್ಮೂರಿಗೆ ಬಂದಾಗ ರೊಟ್ಟಿ, ನವಣೆ ಅಕ್ಕಿಯ ಅನ್ನ ನೀಡಿದ್ದೀರಿ. ನಾನು ಯಾವುದೇ ಕೆಲಸ ಮಾಡಿದರೂ ಆ ಋಣ ತೀರಿಸಲಾಗಲ್ಲ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ. ಅದರ ಹಿಂದಿರುವ ಪದನಾಮಗಳು ಶಾಶ್ವತವಲ್ಲ. ನಿಮ್ಮ ಪ್ರೀತಿ ವಿಶ್ವಾಸವನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗುವೆ. ಎಲ್ಲ ಸಮುದಾಯಗಳ ಭಾವನೆಗೆ ಸ್ಪಂದಿಸುವುದು ನನ್ನ ಜವಾಬ್ದಾರಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಒಂದು ರಾಜ್ಯ ಪಡೆಯಲು, ವಿಸ್ತರಣೆಗಾಗಿ ಚೆನ್ನಮ್ಮ ಹೋರಾಡಿರಲಿಲ್ಲ. ತನ್ನ ರಾಜ್ಯದ ಜನರ ರಕ್ಷಣೆ, ಸ್ವಾಭಿಮಾನಕ್ಕೆ ಹೋರಾಟ ಮಾಡಿದ್ದಳು. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಎಲ್ಲ ಸಮುದಾಯದವರನ್ನು ಸೇರಿಸಿ ರಾಜ್ಯ ಉಳಿಸುವ ಕೆಲಸ ಮಾಡಿದ್ದರು. ಸಂಗೊಳ್ಳಿ ರಾಯಣ್ಣ ಸೆರೆಯಾದಾಗ ಚೆನ್ನಮ್ಮ ಕುಸಿದುಹೋಗಿದ್ದರು. ಅಲ್ಲಿಯವರೆಗೆ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಮುಂದೆ ಕುಸಿದಿರಲಿಲ್ಲ. ಕಿತ್ತೂರು ಚೆನ್ನಮ್ಮ ಅಂದು ಯುದ್ಧ ಮಾಡಿದ್ದನ್ನು ನೆನಪಿಸಿಕೊಳ್ತೇವೆ. ಸಾಧಕರಿಗೆ ಸಾವು ಅಂತ್ಯವಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಡಾ.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸುತ್ತೇವೆ. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡುತ್ತೇವೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬಗ್ಗೆ ಹೇಳಿದ್ದೇನೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಹಕಾರ ನೀಡಬೇಕು. ಕೂಡಲ ಸಂಗಮ, ಹರಿಹರ ಪೀಠಾಧಿಪತಿಗಳ ಸಮಾಗಮ ಸಂತಸ ತಂದಿದೆ. ಸಮುದಾಯದ ಅಭಿವೃದ್ಧಿಗೆ ಸ್ವಾಮೀಜಿಗಳು ಹೇಳಿದ್ದನ್ನು ಮಾಡುವೆ. ಪರಮಪೂಜ್ಯರು ಹೇಳಿದ ವಿಚಾರಗಳನ್ನು ಶಿರಸಾವಹಿಸಿ ಮಾಡ್ತೇನೆ. ಹರ ಜಾತ್ರೆ, ಕೂಡಲಸಂಗಮ ಸಂಕ್ರಮಣಕ್ಕೆ ನನ್ನನ್ನ ಆಹ್ವಾನಿಸಿದ್ದಾರೆ. ಸಮಯ ನಿಗದಿ ಮಾಡಿಕೊಂಡು ಬರುವ ಕೆಲಸವನ್ನು ಮಾಡುತ್ತೇನೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಶೀಘ್ರ ಪಂಚಮಸಾಲಿ ಸಮಾಜವನ್ನ ಒಬಿಸಿಯಲ್ಲಿ ಸೇರಿಸಬೇಕು: ವಚನಾನಂದ ಸ್ವಾಮೀಜಿ ಹೇಳಿಕೆ
ಶೀಘ್ರ ಪಂಚಮಸಾಲಿ ಸಮಾಜವನ್ನ ಒಬಿಸಿಯಲ್ಲಿ ಸೇರಿಸಬೇಕು. ಮೀಸಲಾತಿ ವಿಚಾರದಲ್ಲಿ ಸರ್ಕಾರ ಆತುರ ಮಾಡಬಾರದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಗುರುಗಳಾದವರು ಗುಬ್ಬಿಯಾಗಿ ಕೆಲಸ ಮಾಡಬೇಕು. ಮಂಗನಂತೆ ಆಗಬಾರದು ಎಂದು ಕತೆ ಉಲ್ಲೇಖಿಸಿ ಮಾತನಾಡಿದ್ದಾರೆ.
ಸಮುದಾಯಗಳಲ್ಲಿ ಬೆಂಕಿ ಹಚ್ಚುವಂತಹ ಕೆಲಸ ಮಾಡಬಾರದು. ಪ್ರೀತಿ ಹಂಚುವ ಕೆಲಸ ಮಾಡಬೇಕು. ಯೋಗಿ ಆದಿತ್ಯನಾಥ ಅವರಂತೆ ಇಲ್ಲಿ ಬೊಮ್ಮಾಯಿ ಇರ್ತಾರೆ. ಬದುಕಬೇಕು ನಾಲ್ಕೇ ದಿನ ಪುನೀತ್ ರಾಜಕುಮಾರನಂತೆ. ಕಳೆದ ಬಾರಿ ಹರ ಜಾತ್ರೆಗೆ ಯುವರತ್ನನಾಗಿ ಬಂದಿದ್ದರು. ಅವರನ್ನ ಬೊಮ್ಮಾಯಿ ಕರ್ನಾಟಕ ರತ್ನನನ್ನಾಗಿ ಮಾಡಿದ್ರು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಮರಾಠರ ಹೆಸರು ಏಕೆ ತೆಗೆದುಕೊಳ್ತಾರೆಂದು ಕೆಲವರಿಗೆ ಬ್ಯಾನಿ ಇದೆ: ಬಸನಗೌಡ ಪಾಟೀಲ ಯತ್ನಾಳ್
ಮರಾಠ ಸಮಾಜಕ್ಕೆ 100 ಕೋಟಿ ರೂ. ಕೊಡಿಸುತ್ತೇನೆ. ಸೋಮವಾರ ಅಧಿವೇಶನದಲ್ಲಿ 100 ಕೋಟಿ ರೂಪಾಯಿ ಕೊಡಿಸ್ತೇನೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಮರಾಠರ ಹೆಸರು ಏಕೆ ತೆಗೆದುಕೊಳ್ತಾರೆಂದು ಕೆಲವರಿಗೆ ಬ್ಯಾನಿ ಇದೆ. ನಮ್ಮ ರಾಜ್ಯದಲ್ಲಿ ಮರಾಠ ಸಮಾಜಕ್ಕೆ ವಿರೋಧವಿಲ್ಲ. ಬಿಜೆಪಿ, ಸಿಎಂ ಹೆಸರು ಕೆಡಿಸಲು ಇಂಥವೆಲ್ಲ ನಡೆದಿವೆ. ಇಂಥವರ ಬಣ್ಣ ಬಯಲು ಮಾಡಬೇಕು ಎಂದು ಯತ್ನಾಳ್ ಹೇಳಿದ್ದಾರೆ.
ಪಂಚಮಸಾಲಿ ಸೇರಿ ಕೆಲ ಸಮಾಜಕ್ಕೆ ಮೀಸಲಾತಿ ಕೊಡಿ. ಮೀಸಲಾತಿ ಕೊಟ್ರೆ ನಾವು ಯಾವ ಮೂರ್ತಿನೂ ಕೇಳಲ್ಲ ಎಂದು ಸಮಾರಂಭದಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ವಿಜಯಪುರ ನಗರದ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿ; ನಿನ್ನೆಯ ಬಳಿಕ ಅಹಿತಕರ ಘಟನೆ ನಡೆದಿಲ್ಲ ಎಂದ ಆರಗ ಜ್ಞಾನೇಂದ್ರ
ಇದನ್ನೂ ಓದಿ: ಮಹಾನ್ ನಾಯಕರ ಹೆಸರಿನಲ್ಲಿ ಬಡಿದಾದುವುದು ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಅನ್ಯಾಯ ಮಾಡಿದಂತೆ; ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್