ಕರ್ತವ್ಯಕ್ಕೂ ಸೈ, ಪ್ರಾಣ ರಕ್ಷಣೆಗೂ ಸೈ: ಈತ ಡಿಫರೆಂಟ್ ಕೊರೊನಾ ವಾರಿಯರ್

| Updated By:

Updated on: May 23, 2020 | 9:36 AM

ಹಾವೇರಿ: ಈಗ ಎಲ್ಲೆಲ್ಲೂ ಹೆಮ್ಮಾರಿ ಕೊರೊನಾದ‌ ಭೀತಿ ತಾಂಡವವಾಡುತ್ತಿದೆ. ಹೀಗಾಗಿ ಕೊರೊನಾ‌ ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಜೊತೆಗೆ ಪೊಲೀಸರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ವಾರಿಯರ್ಸ್ ರೀತಿ ಕೆಲಸದಲ್ಲಿ ತೊಡಗಿದ್ದರೂ ಹಾವೇರಿ ಜಿಲ್ಲಾ ಶಸಸ್ತ್ರ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್​ಸ್ಟೆಬಲ್ ಕೊರೊನಾ ಡ್ಯೂಟಿ ಜೊತೆಗೆ ಜನರ ಪ್ರಾಣ ರಕ್ಷಣೆ ಕೆಲಸವನ್ನೂ ಮಾಡುತ್ತಿದ್ದಾರೆ. ಈಗ ಮೆಕ್ಕೆಜೋಳವನ್ನು ರಾಶಿ ಮಾಡುವ ಸಮಯ‌. ಬಹುತೇಕ ರೈತರು ಮೆಕ್ಕೆಜೋಳದ ತೆನೆಗಳನ್ನು ಒಂದೆಡೆ ಸಂಗ್ರಹಿಸಿ ರಾಶಿ ಮಾಡಲು ಗೂಡು ಹಾಕಿರುತ್ತಾರೆ. […]

ಕರ್ತವ್ಯಕ್ಕೂ ಸೈ, ಪ್ರಾಣ ರಕ್ಷಣೆಗೂ ಸೈ: ಈತ ಡಿಫರೆಂಟ್ ಕೊರೊನಾ ವಾರಿಯರ್
Follow us on

ಹಾವೇರಿ: ಈಗ ಎಲ್ಲೆಲ್ಲೂ ಹೆಮ್ಮಾರಿ ಕೊರೊನಾದ‌ ಭೀತಿ ತಾಂಡವವಾಡುತ್ತಿದೆ. ಹೀಗಾಗಿ ಕೊರೊನಾ‌ ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಜೊತೆಗೆ ಪೊಲೀಸರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ವಾರಿಯರ್ಸ್ ರೀತಿ ಕೆಲಸದಲ್ಲಿ ತೊಡಗಿದ್ದರೂ ಹಾವೇರಿ ಜಿಲ್ಲಾ ಶಸಸ್ತ್ರ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್​ಸ್ಟೆಬಲ್ ಕೊರೊನಾ ಡ್ಯೂಟಿ ಜೊತೆಗೆ ಜನರ ಪ್ರಾಣ ರಕ್ಷಣೆ ಕೆಲಸವನ್ನೂ ಮಾಡುತ್ತಿದ್ದಾರೆ.

ಈಗ ಮೆಕ್ಕೆಜೋಳವನ್ನು ರಾಶಿ ಮಾಡುವ ಸಮಯ‌. ಬಹುತೇಕ ರೈತರು ಮೆಕ್ಕೆಜೋಳದ ತೆನೆಗಳನ್ನು ಒಂದೆಡೆ ಸಂಗ್ರಹಿಸಿ ರಾಶಿ ಮಾಡಲು ಗೂಡು ಹಾಕಿರುತ್ತಾರೆ. ಅಂತಹ ಮೆಕ್ಕೆಜೋಳದ ರಾಶಿಗೆ ಇಲಿಗಳು ಮುತ್ತಿಗೆ ಹಾಕಿರುತ್ತವೆ‌. ಮೆಕ್ಕೆಜೋಳದ ರಾಶಿಯ ಬಳಿ ಬಿಡಾರ ಹೂಡಿರುವ ಇಲಿಗಳನ್ನು ಹುಡುಕಿಕೊಂಡು ಬಂದು ಹಾವುಗಳು ಜನರ ಜೀವ ಬಲಿ ಪಡೆಯುತ್ತಿವೆ.

ಹಾವು ಹಿಡಿಯುವ ಕೊರೊನಾ ವಾರಿಯರ್:
ರೈತರ ಮೆಕ್ಕೆಜೋಳದ ರಾಶಿಯಲ್ಲಿ ಹಾವು ಬಂದಿದೆ ಎಂದು ಹೆಡ್ ಕಾನ್​ಸ್ಟೆಬಲ್ ರಮೇಶ ಹರಿಜನಗೆ ಯಾರಾದರೂ ಫೋನ್ ಮಾಡಿದರೆ ಸಾಕು ತಕ್ಷಣ ರಮೇಶ ಅಲ್ಲಿಗೆ ಧಾವಿಸುತ್ತಾನೆ. ಕರ್ತವ್ಯದ ಸ್ಥಳದಲ್ಲಿರುವ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ರೈತರ ಜಮೀನುಗಳಿಗೆ ಹೋಗುತ್ತಾರೆ. ಮೆಕ್ಕೆಜೋಳದ ರಾಶಿಯಲ್ಲಿ ಅಡಗಿ ಕೂತಿದ್ದ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬರುತ್ತಾರೆ. ರಮೇಶ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದಂತೆ ರೈತರು ಬದುಕಿದೆಯಾ ಬಡಜೀವವೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.

60ಕ್ಕೂ ಅಧಿಕ ಹಾವುಗಳ ರಕ್ಷಣೆ:
ಕೊರೊನಾ ಲಾಕ್​ಡೌನ್ ಶುರುವಾದ ದಿನದಿಂದ ಈವರೆಗೆ 60ಕ್ಕೂ ಅಧಿಕ ಹಾವುಗಳನ್ನು ಹಿಡಿದಿದ್ದಾರೆ. ಸದಾ ತನ್ನ ಬೈಕ್​ನಲ್ಲಿ ಸ್ಟಿಕ್, ಡಬ್ಬಿ ಇಟ್ಟುಕೊಂಡಿರೋ ಪೇದೆ ರಮೇಶ, ಯಾರಾದರೂ ಹಾವು ಬಂದಿದೆ ಎಂದು ಕರೆ ಮಾಡಿದರೆ ಅಲ್ಲಿಗೆ ಹೋಗಿ ಹಾವು ಹಿಡಿದು ಡಬ್ಬಿಯಲ್ಲಿ ಹಾಕಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಕರ್ತವ್ಯ ಮುಗಿಸಿಕೊಂಡು ಮನೆಗೆ ಹೋಗುವಾಗ ಹಾವನ್ನು ಕಾಡಿಗೆ ಬಿಟ್ಟು ಮನೆಗೆ ತೆರಳುತ್ತಾರೆ.

ಹಗಲು ರಾತ್ರಿ ಎನ್ನದೆ ಕೊವಿಡ್ ವಾರಿಯರ್ಸ್ ಆಗಿ ಹಾವೇರಿ ನಗರದ ರಾಣೆಬೆನ್ನೂರು ರಸ್ತೆಯಲ್ಲಿರುವ ಚೆಕ್ ಪೋಸ್ಟ್​ನಲ್ಲಿ ಇವರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಹಾವು ಹಿಡಿಯುವ ಕೆಲಸಕ್ಕೆ ಜನರಿಂದ ಯಾವುದೇ ಪ್ರತಿಫಲ ಬಯಸುವುದಿಲ್ಲ. ಹಾವು ಹಿಡಿದು ಕಾಡಿಗೆ ಬಿಡುವುದರಿಂದ ಒಂದೆಡೆ ಹಾವಿನ ಜೀವವು ಉಳಿಯುತ್ತದೆ. ಮತ್ತೊಂದೆಡೆ ಜನರ ಪ್ರಾಣವೂ ರಕ್ಷಣೆ ಆಗುತ್ತದೆ.

ಹೀಗಾಗಿ ಹೆಡ್ ಕಾನ್​ಸ್ಟೆಬಲ್ ರಮೇಶ ಮಾಡುತ್ತಿರುವ ಕರ್ತವ್ಯದ ಜೊತೆಗಿನ ಹಾವು ಹಿಡಿಯುವ ಕೆಲಸಕ್ಕೆ ಇಲಾಖೆಯ ಅಧಿಕಾರಿಗಳು ಸಹ ಸಾಥ್ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಈವರೆಗೆ ನಾಗರಹಾವು, ಕೆರೆ ಹಾವು ಸೇರಿದಂತೆ ಅನೇಕ ಬಗೆಯ ಹಾವುಗಳನ್ನು ಹಿಡಿದು ರಮೇಶ ಕಾಡಿಗೆ ಬಿಡುವುದರ ಜೊತೆಗೆ ಪ್ರಾಣ ರಕ್ಷಕನಾಗಿ ಕೆಲಸ‌ ಮಾಡುತ್ತಿದ್ದಾರೆ.