ಹಾವೇರಿ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಪ್ರೀತಿ ಪ್ರೇಮ ಪ್ರಣಯ ಎಂದು ಸುತ್ತಾಡಿದ್ದ ಜೋಡಿಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿ ಲಾಕ್ಡೌನ್ ಸಮಯದಲ್ಲಿ ಸರಳ ಮದುವೆಯಾದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಯುವಕ ಹಾಗೂ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಯುವತಿ ಫೇಸ್ಬುಕ್, ವಾಟ್ಸಪ್ ಮೂಲಕ ಪರಸ್ಪರ ಪರಿಚಯವಾಗಿದ್ದರು. ಪರಿಚಯ ಸ್ನೇಹ, ಪ್ರೀತಿಗೆ ತಿರುಗಿತ್ತು. ಇಬ್ಬರ ನಡುವೆ ಪ್ರೀತಿ, ಪ್ರೇಮ, ಪ್ರಣಯ ಎಂದೆಲ್ಲ ನಡೆದು ಇಬ್ಬರೂ ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.
ಪ್ರೀತಿಸಿದವನ ಮನೆ ಹುಡುಕಿಕೊಂಡು ಬಂದಳು ಪ್ರೇಯಸಿ:
ಅದ್ಯಾಕೋ ಏನೋ ಇತ್ತೀಚೆಗೆ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ದೂರ ಮಾಡಿದ್ದ. ಕಳೆದ ಐದಾರು ತಿಂಗಳಿನಿಂದ ಮೊಬೈಲ್ ಸ್ವಿಚ್ಡ್ ಆಪ್ ಮಾಡಿಕೊಂಡು ಆಕೆಯ ಕೈಗೆ ಸಿಗದಂತಾದ. ತಾನು ಪ್ರೀತಿಸುತ್ತಿದ್ದ ಯುವಕನ ಮನೆ ಹುಡುಕಿಕೊಂಡು ಬಂದ ಯುವತಿ ನಡೆದ ಸಂಗತಿಯನ್ನು ಯುವಕನ ಮನೆಯವರಿಗೆ ತಿಳಿಸಿದ್ದಾಳೆ.
ಯುವಕನೊಂದಿಗೆ ಮದುವೆ ಮಾಡಿಸುವಂತೆ ಒತ್ತಾಯಿಸಿದ್ದಾಳೆ. ಆಗ ಯುವಕನ ಮನೆಯವರು ಯುವತಿಗೆ ತಮ್ಮ ಮನೆಯವರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಯುವತಿ ತನ್ನ ಮನೆಯವರನ್ನು ಕರೆದುಕೊಂಡು ಬಂದು ತಾನು ಪ್ರೀತಿಸುತ್ತಿದ್ದ ಯುವಕನ ಜೊತೆ ಮದುವೆ ಮಾಡುವಂತೆ ಕೇಳಿದ್ದಾಳೆ. ಆಗ ಯುವಕನ ಮನೆಯವರು ಒಪ್ಪದಿದ್ದಾಗ ಪ್ರಕರಣ ಬಂಕಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಮದುವೆಯಾಗುವ ಭರವಸೆ ನೀಡಿದ್ದ ಯುವಕ ತನ್ನನ್ನು ಮದುವೆ ಮಾಡಿಕೊಳ್ಳದಿದ್ದರೆ ಪ್ರಕರಣ ದಾಖಲಿಸುವುದಾಗಿ ಪಟ್ಟು ಹಿಡಿದಿದ್ದಳು. ನಂತರ ಸುಮ್ಮನೆ ಕೇಸು ಅಂತ ಅಲೆಯೋದು ಬೇಡ ಎಂದು ಕುಟುಂಬದವರ ಸಮ್ಮುಖದಲ್ಲಿ ಪೊಲೀಸ್ ಠಾಣೆ ಬಳಿ ಯುವಕ ಯುವತಿಯನ್ನು ಮದುವೆಯಾಗಿದ್ದಾನೆ. ಲಾಕ್ಡೌನ್ ಇರುವುದರಿಂದ ಕುಟುಂಬಸ್ಥರು ಪೊಲೀಸ್ ಠಾಣೆ ಬಳಿಯೇ ಸರಳವಾಗಿ ಇಬ್ಬರಿಗೂ ಪರಸ್ಪರ ಹಾರ ಬದಲಾಯಿಸಿ, ಮದುವೆ ಮಾಡಿಸಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಆರಂಭವಾದ ಪ್ರೇಮ ಪ್ರಕರಣ ಸುಖಾಂತ್ಯ ಕಾಣುವಂತೆ ಮಾಡಿದ್ದಾರೆ.
Published On - 12:54 pm, Sun, 31 May 20