ಹಾವೇರಿ: ಹೊತ್ತೊತ್ತಿಗೆ ಸರಿಯಾಗಿ ಊಟ ಮಾಡ್ಲಿಲ್ಲ. ನಿದ್ದೆಗೆಟ್ಟು ರಾತ್ರಿಯೆಲ್ಲಾ ಕಾದ್ರು. ಬೆಳೆ ಕೈಸೇರಿತು.. ಅಷ್ಟೋ ಇಷ್ಟೋ ಕಾಸು ಮಾಡ್ಬೋದು ಅಂತಾ ಖುಷಿಯಲ್ಲೇ ಮಾರುಕಟ್ಟೆಗೆ ಬಂದ್ರು. ಆದ್ರೆ ಅಲ್ಲಿನ ಅಂಧಾದರ್ಬಾರ್ ನೋಡಿ ಸಿಡಿದೆದ್ದಿದ್ರು. ಕ್ಷಣಾರ್ಧದಲ್ಲೇ ಮಾರ್ಕೆಟ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರು.
ಸಿಟ್ಟು ನೆತ್ತಿಗೇರಿತ್ತು.. ಚೀಲದಲ್ಲಿದ್ದ ಬೆಳ್ಳುಳ್ಳಿ ಬೀದಿ ಪಾಲಾಗಿದ್ವು. ವ್ಯಾಪಾರಸ್ಥರ ವಿರುದ್ಧ ರೈತರು ರೊಚ್ಚಿಗೆದ್ದಿದ್ರು. ಪೊಲೀಸರ ಮಾತಿಗೂ ಜಗ್ಗದೆ ಪ್ರತಿಭಟನೆಗೆ ಕುಂತಿದ್ರು. ನೋಡ ನೋಡ್ತಿದ್ದಂತೆ ಅಲ್ಲಿ ದೊಡ್ಡ ಗಲಾಟೆಯೇ ಶುರು ಆಗಿತ್ತು. ಅಷ್ಟಕ್ಕೂ ಇಂಥಾದ್ದೊಂದು ಹೈಡ್ರಾಮಾಕ್ಕೆ ಕಾರಣ ವ್ಯಾಪಾರಿಗಳ ಹಾವು ಏಣಿ ಆಟ.
ಕಷ್ಟಪಟ್ಟು ಕಾದು ಮಾರುಕಟ್ಟೆಗೆ ತಂದ್ರೂ ಸಿಗ್ಲಿಲ್ಲ ಬೆಲೆ:
ಆದ್ರಿಲ್ಲಿ ವ್ಯಾಪಾರಸ್ಥರು ಆಡಿದ್ದೇ ಆಟ ಅನ್ನುವಂತೆ ಆಗಿದ್ಯಂತೆ. ಯಾಕಂದ್ರೆ ಬೆಳ್ಳುಳ್ಳಿ ಬೆಲೆ ದಿಢೀರ್ ಕುಸಿದಿತ್ತು. ಇದ್ರಿಂದ ಸಿಟ್ಟಾದ ರೈತರು ಮಾರ್ಕೆಟ್ನಲ್ಲಿದ್ದ ವ್ಯಾಪಾರಸ್ಥರ ಬೆಳ್ಳುಳ್ಳಿ ಚೀಲಗಳನ್ನ ರಸ್ತೆ, ಮಾರ್ಕೆಟ್ ತುಂಬ ಚೆಲ್ಲಾಡಿ ಆಕ್ರೋಶ ವ್ಯಕ್ತಪಡಿಸಿದ್ರು.
ವ್ಯಾಪಾರಸ್ಥರ ಬೆಳ್ಳುಳ್ಳಿ ಚೀಲ ರಸ್ತೆಗೆ ಎರಚಿ ಪ್ರತಿಭಟನೆ:
ಇನ್ನು ಕಳೆದ ವಾರವಷ್ಟೇ ಕ್ವಿಂಟಾಲ್ ಬೆಳ್ಳುಳ್ಳಿಗೆ 12ಸಾವಿರ ರೂಪಾಯಿವರೆಗೆ ಮಾರಾಟ ಆಗಿತ್ತು. ಆದ್ರೆ ನಿನ್ನೆ ರಾಣೆಬೆನ್ನೂರು ಮಾರುಕಟ್ಟೆಗೆ ಬೇರೆ ಬೇರೆ ಜಿಲ್ಲೆಗಳಿಂದ ಬೆಳ್ಳುಳ್ಳಿ ಬಂದಿತ್ತು. ಹೀಗಾಗಿ ವ್ಯಾಪಾರಸ್ಥರು ದಿಢೀರ್ ಬೆಳ್ಳುಳ್ಳಿ ಬೆಲೆ ಕುಸಿತ ಕಾಣುವಂತೆ ಮಾಡಿದ್ರು. ಇದ್ರಿಂದ ಕೋಪಗೊಂಡ ರೈತರು ಮಾರುಕಟ್ಟೆಯಲ್ಲಿದ್ದ ವ್ಯಾಪಾರಸ್ಥರ ಬೆಳ್ಳುಳ್ಳಿ ಚೀಲಗಳನ್ನ ರಸ್ತೆ ಮತ್ತು ಮಾರ್ಕೆಟ್ ತುಂಬಾ ಸುರಿದು ಆಕ್ರೋಶ ವ್ಯಕ್ತಪಡಿಸಿದ್ರು.
ಸ್ಥಳೀಯ ರೈತರ ಬೆಳ್ಳುಳ್ಳಿಗೆ ಉತ್ತಮ ದರ ನೀಡಿ ಖರೀದಿಸುವಂತೆ ಒತ್ತಾಯಿಸಿದ್ರು. ಕೆಲಕಾಲ ವ್ಯಾಪಾರಸ್ಥರು ಮತ್ತು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸರ ಜೊತೆಗೂ ಮಾತಿನ ಚಕಮಕಿ ನಡೆಸಿದ್ರು. ಪ್ರತಿಭಟನೆ ವೇಳೆ ರೈತ ಮಹಿಳೆಯೊಬ್ರು ಅಸ್ವಸ್ಥಗೊಂಡಿದ್ರು. ಇನ್ನು ವ್ಯಾಪಾರಸ್ಥರು ಬಂದು ಬೆಲೆ ಹೆಚ್ಚು ನೀಡ್ತೀವಿ ಅಂದ್ರೂ ರೈತರು ಮಾರಾಟಕ್ಕೆ ತಂದಿದ್ದ ಬೆಳ್ಳುಳ್ಳಿಯನ್ನ ವಾಪಸ್ ತಗೊಂಡೋದ್ರು.
Published On - 7:33 pm, Mon, 2 March 20