ಹಾನಗಲ್ ಗ್ಯಾಂಗ್​ ರೇಪ್ ಆರೋಪಿಗಳಿಗೆ ಹಾವೇರಿ ಸಬ್ ಜೈಲಿನಲ್ಲಿ ರಾಜಾತಿಥ್ಯ: ಬಿಡುಗಡೆಯಾದ ಖೈದಿಯಿಂದ ಗಂಭೀರ ಆರೋಪ

ಹಾವೇರಿಯ ಸಬ್ ಜೈಲಿನಲ್ಲಿ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ವಿಶೇಷ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜೈಲಿನಿಂದ ಬಿಡುಗಡೆಯಾದ ಒಬ್ಬ ಆರೋಪಿ, ಗ್ಯಾಂಗ್ ರೇಪ್ ಆರೋಪಿಗಳು ಇತರ ಖೈದಿಗಳನ್ನು ಹಿಂಸಿಸುತ್ತಿದ್ದಾರೆ ಮತ್ತು ಜೈಲಿನ ಸಿಬ್ಬಂದಿಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಬಿರಿಯಾನಿ ಸೇರಿದಂತೆ ವಿಶೇಷ ಆಹಾರ ಮತ್ತು ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಾನಗಲ್ ಗ್ಯಾಂಗ್​ ರೇಪ್ ಆರೋಪಿಗಳಿಗೆ ಹಾವೇರಿ ಸಬ್ ಜೈಲಿನಲ್ಲಿ ರಾಜಾತಿಥ್ಯ: ಬಿಡುಗಡೆಯಾದ ಖೈದಿಯಿಂದ ಗಂಭೀರ ಆರೋಪ
ಹಾವೇರಿ ಸಬ್ ಜೈಲು

Updated on: May 28, 2025 | 12:08 PM

ಹಾವೇರಿ, ಮೇ 28: ಕರ್ನಾಟಕವನ್ನೇ ಬೆಚ್ಚಿಬೀಳಿಸಿದ್ದ ಹಾನಗಲ್ ಗ್ಯಾಂಗ್ ರೇಪ್ (Hanagl Case) ಪ್ರಕರಣದ ಆರೋಪಿಗಳಿಗೆ ಹಾವೇರಿ ಸಬ್ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಸಬ್ ಜೈಲಿನಲ್ಲಿ (Haveri Sub Jail) ಗ್ಯಾಂಗ್ ರೇಪ್ ಆರೋಪಿಗಳದ್ದೇ ದರ್ಬಾರ್ ಆಗಿದೆ. ಅನ್ಯ ಖೈದಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿರುವ ಆರೋಪಿಯೊಬ್ಬರಿಂದ ಮಾಹಿತಿ ದೊರೆತಿದೆ. ಸಾಮೂಹಿಕ ಅತ್ಯಾಚಾರದ 7 ಜನ ಆರೋಪಿಗಳಿಗೆ ಜೈಲು ಎಂಬುದು ಸ್ವರ್ಗದಂತಿದೆ. ಜೈಲಿನೊಳಗೆ ಯಾರೇ ಬಂದರೂ ಯಾವ ಕೇಸ್ ಎಂಬುದನ್ನು ಅವರಿಗೆ ತಿಳಿಸಬೇಕು, ಇಲ್ಲದಿದ್ದರೆ ಹಲ್ಲೆ ಮಾಡುತ್ತಾರೆ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ಆರೋಪಿಯೊಬ್ಬರು ತಿಳಿಸಿದ್ದಾರೆ.

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ವಾರದಲ್ಲಿ ಮೂರು ಸಲ ಬಿರಿಯಾನಿ ಸೇರಿದಂತೆ ಬೇಕಿದ್ದೆಲ್ಲವೂ ಜೈಲಲ್ಲಿ ಸಿಗುತ್ತದೆ. ಅವರು ಹೇಳಿದ ಕೆಲಸವನ್ನು ಜೈಲಿನಲ್ಲಿರುವ ಇತರ ಆರೋಪಿಗಳು ಮಾಡಬೇಕಿದೆ. ಗ್ಯಾಂಗ್ ರೇಪ್ ಆರೋಪಿಗಳಿಗೆ ಗುಟ್ಕಾ ಸೇರಿದಂತೆ ಎಲ್ಲವನ್ನೂ ಪೂರೈಸಲಾಗುತ್ತಿದೆ. ಅವರು ಜೈಲು ಸಿಬ್ಬಂದಿಗಳಿಗೆ ಏಕವಚನದಲ್ಲೇ ಬೈಯುತ್ತಾರೆ. ಆದರೆ ಸಿಬ್ಬಂದಿ ಏನೂ ಮಾಡುವುದಿಲ್ಲ. ಉರ್ದುವಿನಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕೆಲವು ಖೈದಿಗಳ ಎದೆಗೂಡಿನ ಮೂಳೆಗಳಿಗೆ ನೋವಾಗುವ ಹಾಗೆ ಗುದ್ದುತ್ತಾರೆ. ಜೈಲರ್ ಸೇರಿದಂತೆ ಯಾರೂ ಏನೂ ಮಾಡುವುದಿಲ್ಲ, ಸುಮ್ಮನಿರುತ್ತಾರೆ ಎಂದು ಬಿಡುಗಡೆಯಾಗಿ ಬಂದಿರುವ ಆರೋಪಿ ದೂರಿದ್ದಾರೆ.

ಹಾನಗಲ್ ಪ್ರಕರಣದ ಹಿನ್ನೆಲೆ

2024ರ ಜನವರಿಯಲ್ಲಿ ಹಾನಗಲ್​ನಲ್ಲಿ ನೈತಿಕ ಪೊಲೀಸ್​ಗಿರಿ ಪ್ರಕರಣ ವರದಿಯಾಗಿತ್ತು. ಆರಂಭದಲ್ಲಿ ನೈತಿಕ ಪೊಲೀಸ್​ಗಿರಿ ಎಂದು ವರದಿಯಾಗಿದ್ದರೂ ನಂತರ ಸಾಮೂಹಿಕ ಅತ್ಯಾಚಾರ ನಡೆದಿರುವ ವಿಚಾರ ಬಹಿರಂಗವಾಗಿತ್ತು. ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ನೀಡಿ ಆರೋಪ ಮಾಡಿದ್ದರು. ಅದಾದ ನಂತರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಸಂತ್ರಸ್ತೆಗೆ ಹಣ ಕೊಟ್ಟು ಪ್ರಕರಣವನ್ನು ಹಿಂಪಡೆಯುವಂತೆ ಹೇಳಿದ್ದ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು.

ಇದನ್ನೂ ಓದಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಆರ್​ಟಿಪಿಸಿಆರ್ ಲ್ಯಾಬ್ ಪುನರಾರಂಭ
ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಜೂನ್ 2ರವರೆಗೆ ಮಳೆಯ ಅಬ್ಬರ
ಬೆಳಗಾವಿ: ಹಳ್ಳದಲ್ಲಿ ಎತ್ತಿನ ಗಾಡಿ ಮಗುಚಿ ಬಿದ್ದು ಇಬ್ಬರು ಮಕ್ಕಳು ಸಾವು
ಭಾರಿ ಮಳೆಯಿಂದ ಕರ್ನಾಟಕದ ಈ ಎರಡು ಕಡೆ ಅರಣ್ಯ ಸಫಾರಿ ರದ್ದು

ಇದನ್ನೂ ಓದಿ: ಹಾನಗಲ್​ ಅತ್ಯಾಚಾರ ಸಂತ್ರಸ್ತೆಗೆ ಹಣ ನೀಡಿ ಕೇಸ್​ ಹಿಂಪಡೆಯುವಂತೆ ಹೇಳಿದ್ದರು: ಬೊಮ್ಮಾಯಿ

ನಂತರ ಪ್ರಕರಣ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದಲ್ಲದೆ, ರಾಜಕೀಯವಾಗಿಯೂ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಂತ್ರಸ್ತೆಗೆ ಹಣ ಕೊಟ್ಟು ಪ್ರಕರಣವನ್ನು ಹಿಂಪಡೆಯುವಂತೆ ಕೇಳಿಕೊಳ್ಳಲಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು.

ಘಟನೆ ಸಂಬಂಧ ಅಫ್ತಾಬ್, ಮಾದರಸಾಬ್, ಅಬ್ದುಲ್ ಖಾದರ್​ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಅವರಿಗೆ ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸದ್ಯ ಆರೋಪಿಗಳು ಹಾವೇರಿ ಸಬ್ ಜೈಲಿನಲ್ಲಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9, ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ