ಹಾವೇರಿ, ಮಾರ್ಚ್ 8: ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದ, ರಾಜಕೀಯವಾಗಿಯೂ ಬಹಳ ಚರ್ಚೆಗೆ ಗ್ರಾಸವಾಗಿದ್ದ ಹಾವೇರಿಯ ಹಾನಗಲ್ ಸಾಮೂಹಿಕ ಅತ್ಯಾಚಾರ (Hanagal Gangrape Case) ಪ್ರಕರಣದಕ್ಕೆ ಸಂಬಂಧಿಸಿ ಕೊನೆಗೂ ಪೊಲೀಸರು ಚಾರ್ಜ್ಶೀಟ್ (Charge Sheet) ಸಲ್ಲಿಸಿದ್ದಾರೆ. ಗ್ಯಾಂಗ್ರೇಪ್ ಘಟನೆ ನಡೆದು 58 ದಿನಗಳ ಬಳಿಕ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಹಾನಗಲ್ ಜೆಎಂಎಫ್ ಕೋರ್ಟ್ಗೆ (Hanagal JMF Court) 873 ಪುಟಗಳ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಜನವರಿ 8ರಂದು ಹಾನಗಲ್ ಬಳಿ ಶಿರಸಿ ಮೂಲದ ಮುಸ್ಲಿಂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.
ಪ್ರಕರಣ ಸಂಬಂಧ 19 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಲಾಗಿದ್ದ 7 ಪ್ರಮುಖ ಆರೋಪಿಗಳು ಸೇರಿ ಒಟ್ಟು 19 ಮಂದಿಯ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ವಿಚಾರಣೆ ವೇಳೆ 7 ಪ್ರಮುಖ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದರು.
ಘಟನೆ ಸಂಬಂಧ ತನಿಖೆಯನ್ನು 20 ದಿನಗಳ ಹಿಂದೆಯೇ ಹಾನಗಲ್ ಪೊಲೀಸರು ಪೂರ್ಣಗೊಳಿಸಿದ್ದರು. ಆದರೆ ಎಫ್ಎಸ್ಎಲ್ ವರದಿ ಹಾಗೂ ಡಿಎನ್ಎ ವರದಿಗಳಿಗಾಗಿ ಪೊಲೀಸರು ಕಾದುಕುಳಿತಿದ್ದರು. ಇದೀಗ ಅವುಗಳು ದೊರೆಯುತ್ತಿದ್ದಂತೆಯೇ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಅತ್ಯಾಚಾರ ಎಸಗಿದ್ದಾರೆ ಎನ್ನಲಾದ 7 ಪ್ರಮುಖ ಆರೋಪಿಗಳ ಹೆಸರುಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಫ್ತಾಬ್ ಚಂದನಕಟ್ಟಿ, ಮದರ್ಸಾಬ್ ಮಂಡಕ್ಕಿ, ಸಮೀವುಲ್ಲಾ ಲಾಲಾನವರ, ಶೋಯೆಬ್ ನಿಯಾಜ್ ಅಹ್ಮದ್ ಮುಲ್ಲಾ, ಮೊಹಮ್ಮದ್ ಸಾದೀಕ್, ತೌಷಿಪ್, ರಿಯಾಜ್ ಸಾವಿಕೇರಿ ಪ್ರಮುಖ ಆರೋಪಿಗಳಾಗಿದ್ದಾರೆ.
ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯದಾದ್ಯಂತ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿತ್ತು.
ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್: ನಮ್ಮ ಬಾಯಿ ಮುಚ್ಚಿಸಲು 50 ಲಕ್ಷ ರೂ. ಆಮಿಷ: ಸಂತ್ರಸ್ತೆ ಪತಿ ಗಂಭೀರ ಆರೋಪ
ಪ್ರಕರಣವನ್ನು ಮುಚ್ಚಿ ಹಾಕಲು ನಮಗೆ 50 ಲಕ್ಷ ರೂಪಾಯಿವರೆಗೆ ಆಮಿಷವೊಡ್ಡಲಾಗಿತ್ತು ಎಂದು ಸಂತ್ರಸ್ತೆಯ ಪತಿ ನಂತರದಲ್ಲಿ ಹೇಳಿದ್ದರು. ಮೂರ್ನಾಲ್ಕು ಬಾರಿ ನನಗೆ ಗೊತ್ತಿಲ್ಲದ ಹಾಗೆ ಪತ್ನಿಗೆ ಆಮಿಷ ಒಡ್ಡಿದ್ದರು. ಆದರೆ ಅವಳು ಅವರ ಆಮಿಷಕ್ಕೆ ಬಗ್ಗದೆ ನನಗೆ ಮಾಹಿತಿ ನೀಡಿದ್ದರು. ಅವರ ಆಮಿಷಕ್ಕೆ ನಾವು ಒಪ್ಪಿಲ್ಲ. ನಮಗೆ ನ್ಯಾಯ ಬೇಕು ಹಣವಲ್ಲ ಎಂದು ಸಂತ್ರಸ್ತೆಯ ಪತಿ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ