ಹಾವೇರಿ: ಲಂಚ ಕೇಳಿದ ಪುರಸಭೆ ಅಧಿಕಾರಿಗೆ ಎತ್ತು, ಚಕ್ಕಡಿ ನೀಡಿದ ರೈತ

|

Updated on: Mar 11, 2023 | 1:50 PM

ಯಾರು ಎಷ್ಟೇ ಹೇಳಲಿ ಸರಕಾರಿ ಕಚೇರಿಗಳಲ್ಲಿ ಲಂಚಗುಳಿತನ ನಿಲ್ಲುವುದಿಲ್ಲ. ಅಧಿಕಾರಿಗಳ ಈ ದುರಾಸೆಯಿಂದಾಗಿ ಸಾಮಾನ್ಯ ಜನರು ನಿತ್ಯವೂ ಪರದಾಡುತ್ತಲೇ ಇರುತ್ತಾರೆ. ಇದೇ ಕಾರಣಕ್ಕೆ ಹಾವೇರಿಯ ರೈತನೊಬ್ಬ ಲಂಚ ಕೇಳಿದ ಅಧಿಕಾರಿಗೆ ತನ್ನ ಬಳಿ ಇರುವ ಎತ್ತು, ಚಕ್ಕಡಿ ಕೊಡುವ ಮೂಲಕ ಶಾಕ್ ನೀಡಿದ್ದಾರೆ.

ಹಾವೇರಿ: ಲಂಚ ಕೇಳಿದ ಪುರಸಭೆ ಅಧಿಕಾರಿಗೆ ಎತ್ತು, ಚಕ್ಕಡಿ ನೀಡಿದ ರೈತ
ಲಂಚ ಕೇಳಿದ ಅಧಿಕಾರಿಗೆ ತನ್ನ ಬಳಿ ಇರುವ ಎತ್ತು ಕೊಟ್ಟ ರೈತ
Follow us on

ಹಾವೇರಿ: ಹೀಗೆ ಎತ್ತಿನೊಂದಿಗೆ ಚಕ್ಕಡಿ ಹೂಡಿಕೊಂಡು ಪುರಸಭೆ ಕಚೇರಿಗೆ ಬಂದಿರುವ ರೈತನ ಹೆಸರು ಯಲ್ಲಪ್ಪ ರಾಣೋಜಿ. ಜಿಲ್ಲೆಯ ಸವಣೂರು ಪಟ್ಟಣದ ಈ ರೈತ ಎರಡು ವರ್ಷಗಳ ಹಿಂದೆ 35 ಲಕ್ಷ ರೂಪಾಯಿ ನೀಡಿ 3 ಗುಂಟೆ ಜಮೀನು ಖರೀದಿ ಮಾಡಿದ್ದರು. ಖರೀದಿಸಿ ವ್ಯಕ್ತಿಯ ಹೆಸರಿನಿಂದ ಇವರ ಹೆಸರಿಗೆ ಖಾತೆ ಬದಲಾವಣೆ ಮಾಡಲು ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ ನಿತ್ಯವೂ ಕೃಷಿ ಕೆಲಸ ಬಿಟ್ಟು ಕಚೇರಿಗೆ ಅಲೆದಾಡಿದರೂ ಖಾತೆ ಬದಲಾವಣೆ ಆಗಲೇ ಇಲ್ಲ. ಅಲ್ಲದೇ ಈ ಕೆಲಸ ಮಾಡಲು ಕಚೇರಿ ಸಿಬ್ಬಂದಿ ಬರೋಬ್ಬರಿ 25 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರಂತೆ. ಎರಡು ದಿನಗಳ ಹಿಂದೆ ಬಂದು ಮತ್ತೆ ಕೇಳಿದರೆ, ನಿಮ್ಮ ಫೈಲ್ ಕಳೆದು ಹೋಗಿದೆ ಅಂದಿದ್ದಾರೆ. ಇದರಿಂದ ನೊಂದ ಯಲ್ಲಪ್ಪ, ತನ್ನ ಬಳಿ ಹಣವಿಲ್ಲ. ಅದರ ಬದಲಿಗೆ ತನ್ನಲ್ಲಿರುವ ಎತ್ತು, ಚಕ್ಕಡಿ ತೆಗೆದುಕೊಳ್ಳಿ ಎಂದು ಎತ್ತುಗಳ ಸಮೇತ ಪುರಸಭೆಗೆ ಬಂದಿದ್ದಾನೆ. ಆತನ ಹೊಸ ರೀತಿಯ ಪ್ರತಿಭಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಇನ್ನು ಈ ಖಾತೆ ಬದಲಾವಣೆ ಆಗದೇ ಇದ್ದಿದ್ದಕ್ಕೆ ಮನೆಯಲ್ಲಿ ನಿತ್ಯವೂ ಸಹೋದರರೊಂದಿಗೆ ಜಗಳವಾಗುತ್ತಿದೆಯಂತೆ. ಏಕೆಂದರೆ ಈ ಜಾಗವನ್ನು ಮೂವರು ಸಹೋದರರು ಸೇರಿ ಖರೀದಿಸಿದ್ದು. ಖಾತೆ ಬದಲಾವಣೆ ಮಾಡಿಸುವ ಜವಾಬ್ದಾರಿಯನ್ನು ಯಲ್ಲಪ್ಪ ತೆಗೆದುಕೊಂಡಿದ್ದರಿಂದ, ಈತನ ಬಳಿ ಉಳಿದ ಸಹೋದರರು ಜಗಳವಾಡುತ್ತಿದ್ದಾರಂತೆ. ಇದರಿಂದ ರೋಸಿ ಹೋದ ಯಲ್ಲಪ್ಪ, ಲಂಚದ ಹಣದ ಬದಲು ಎತ್ತನ್ನೇ ನೀವಿಟ್ಟುಕೊಂಡು ಬಿಡಿ ಅಂದಾಗ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.

ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಇತ್ತೀಚಿಗಷ್ಟೇ ಪುರಸಭೆ ಮುಖ್ಯಾಧಿಕಾರಿಯಾಗಿ ಬಂದಿರುವ ರೇಣುಕಾ ದೇಸಾಯಿ ಎಲ್ಲವನ್ನು ಪರಿಶೀಲನೆ ಮಾಡಿದ್ದಾರೆ. ಇದೀಗ ಎರಡು ದಿನಗಳಲ್ಲಿ ಯಲ್ಲಪ್ಪನ ಕೆಲಸ ಮಾಡಿಕೊಡೋದಲ್ಲದೇ ಲಂಚದ ಬೇಡಿಕೆ ಇಟ್ಟಿರುವ ಆರೋಪ ಹೊತ್ತ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಕ್ಸಿಕ್ಯೂಟಿವ್ ಆಫೀಸರ್

ಅಷ್ಟೇ ಅಲ್ಲ, ಇದೀಗ ಪಟ್ಟಣದಲ್ಲಿ ಧ್ವನಿವರ್ಧಕಗಳ ಮೂಲಕ ಯಾರೂ ಯಾವುದೇ ಕಾರಣಕ್ಕೆ ಲಂಚ ನೀಡದಂತೆ ಜಾಗೃತಿ ಮೂಡಿಸಲು ಹೊರಟಿದ್ದಾರೆ. ಒಟ್ಟಿನಲ್ಲಿ ರೈತರೆಂದರೆ ಅಮಾಯಕರು, ಏನೂ ತಿಳಿಯದವರು. ಅವರು ತಮ್ಮ ವಿರುದ್ಧ ಏನೂ ಕೂಡ ಮಾಡದವರು ಅಂದುಕೊಂಡಿರುವ ಭ್ರಷ್ಟ ನೌಕರರಿಗೆ ಯಲ್ಲಪ್ಪ ಸರಿಯಾದ ಶಾಕ್ ನೀಡಿದ್ದಾನೆ. ಇನ್ನೂ ಮುಂದಾದರೂ ಇಲ್ಲಿನ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸಬೇಕಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಹಾವೇರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ