ಹಾವೇರಿ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ಹಾವೇರಿ ತಾಲೂಕಿನ ಪುರಾತನ ಪ್ರಸಿದ್ಧ ಕೋಳೂರು ಕೊಡಗೂಸು ಖ್ಯಾತಿಯ ಬಸವೇಶ್ವರ ದೇವಸ್ಥಾನಕ್ಕೆ ಹಾನಿಯಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ದೇವಸ್ಥಾನ ಹಿಂಭಾಗದ ಬೃಹತ್ ಗೋಡೆ ಸಂಪೂರ್ಣವಾಗಿ ಕುಸಿತವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಗೋಡೆ ಕುಸಿದ ಪರಿಣಾಮ ದೇವಸ್ಥಾನ ಒಳಭಾಗದಲ್ಲಿರುವ ದೇವರ ಮೂರ್ತಿಗಳು ಸಂಪೂರ್ಣವಾಗಿ ಮಣ್ಣಿನಲ್ಲಿ ಮುಚ್ಚಿಹೋಗಿವೆ. ಕುಸಿತಗೊಂಡಿರುವ ದೇವಸ್ಥಾನ ದುರಸ್ತಿಗೆ ಸಾಕಷ್ಟು ಖರ್ಚಾಗಲ್ಲಿದ್ದು, ಹಾವೇರಿ ಜಿಲ್ಲಾಡಳಿತವು ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮದ ಮುಂಡರು ಆಗ್ರಹಿಸಿದ್ದಾರೆ.
ಬಸವೇಶ್ವರ ದೇವಸ್ಥಾನವು 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಇದು ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ. ವರದಾ ನದಿ ತಟದಲ್ಲಿರುವ ಬಸವೇಶ್ವರ ದೇವಸ್ಥಾನವು ಹಲವಾರು ಐತಿಹಾಸಿಕ ಪುರಾವೆಗಳನ್ನು ಹೊಂದಿದ್ದು, ಇಲ್ಲಿರುವ ಬೃಹದಾಕಾರದ ನಂದಿ ವಿಗ್ರಹವು ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ. ಪುರಾಣದಲ್ಲಿರುವ ಕಥೆಗಳ ಪ್ರಕಾರ ಮೂಲ ದೇವಸ್ಥಾನವು ಪ್ರಸ್ತುತ ದೇವಸ್ಥಾನದ ತಳಭಾಗದಲ್ಲಿದ್ದು, ಮೇಲ್ಭಾಗದಲ್ಲಿರುವ ನಂದಿ ವಿಗ್ರಹದ ಜಲಾಭಿಷೇಕವು ತಳಭಾಗದಲ್ಲಿರುವ ಶೀವನಿಗೆ ಸಮರ್ಪಣೆಯಾಗುತ್ತದೆ.
ಶಿವನಿಗೆ ಸಮರ್ಪಣೆಯಾದ ಜಲವು ವರದಾನದಿ ಸೇರುತ್ತೆ ಎನ್ನುವುದಕ್ಕೆ ಹಲವಾರು ಕುರುಹುಗಳಿವೆ. ಜೊತೆಗೆ ಈ ದೇವಸ್ಥಾನದಲ್ಲಿ ಪ್ರತಿ ಯುಗಾದಿಯಂದು ಸೂರ್ಯನ ಮೊದಲ ಕಿರಣಗಳು ಈ ದೇವಸ್ಥಾನದಲ್ಲಿರುವ ಶಿವಲಿಂಗ ಮೂರ್ತಿ ಮೇಲೆ ಬೀಳುವುದು ಈ ದೇವಸ್ಥಾನದ ಮತ್ತೊಂದು ವಿಶೇಷವಾಗಿದೆ.
ಪೌರಾಣಿಕ ಹಿನ್ನೆಲೆ
ಕೆಲವು ಶಿಲಾ ಶಾಸನಗಳ ಪ್ರಕಾರ 7 ರಿಂದ 8ನೇ ಶತಮಾನದ ಚಾಲುಕ್ಯರ ಕಾಲದಲ್ಲಿ ಬಾದಾಮಿ ಚಾಲುಕ್ಯರು ಬನವಾಸಿಯನ್ನು ಕೇಂದ್ರವನ್ನಾಗಿಟ್ಟುಕೊಂಡಿದ್ದರು. ಈ ವೇಳೆ ನಿರ್ಮಾಣಗೊಂಡಿರುವ ಕೊಡಗೂಸು ದೇವಸ್ಥಾನ ದಕ್ಷಿಣಾಭಿಮುಖವಾಗಿದೆ. ಇಲ್ಲಿರುವ ಶಿವ ಪಾರ್ವತಿ, ವೀರಭದ್ರ ಮೂರ್ತಿಗಳು ದಕ್ಷಿಣಾಭಿಮುಖವಾಗಿವೆ. ಸೂರ್ಯರಷ್ಮಿ ಸ್ಪರ್ಷ ಅನುಭವಿಸುವ ಶಿವಲಿಂಗ ಪೂರ್ವಾಭಿಮುಖವಾಗಿ ಅತ್ಯಾಕರ್ಷಕವಾಗಿದೆ.
ಈ ಶಿವಲಿಂಗು ಮುಂದೆ ಪ್ರತಿಷ್ಠಾಪನೆಗೊಳ್ಳಬೇಕಿದ್ದ ನಂದಿ ಉತ್ತರಾಭಿಮುಖವಾಗಿದೆ. ಸಂಜೆ ವೇಳೆ ಕಿರಣಗಳು ಪಶ್ಚಿಮಾಭಿಮುಖವಾಗಿರುವ ಸೂರ್ಯನಾರಾಯಣ ಮೂರ್ತಿಗೆ ಸ್ಪರ್ಷಿಸುವ ಅಪರೂಪದ ಕೊಡಗೂಸು ದೇವಸ್ಥಾನ. ಪಚ್ಚೆ ಹಸಿರಿನಿಂದ ಸಿದ್ದಗೊಂಡಿರುವ ಈ ಮೂರ್ತಿಗಳು 10 ರಿಂದ 16ನೇ ಶತಮಾನದ ಕಾಲಘಟ್ಟಕ್ಕೆ ಸಾಕ್ಷಿಯಾಗಿವೆ. ನವ ವಸಂತ ಯುಗಾದಿಯ ದಿನದಂದು ಬೆಳಗಿನ ಜಾವ 5.30 ರಿಂದ 5.45 ರ ಅವಧಿ ಕೊಡಗೂಸು ದೇವಸ್ಥಾನದಲ್ಲಿರುವ ಈಶ್ವರಲಿಂಗು ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:06 pm, Sat, 22 October 22