ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ಹಾವೇರಿ ರೈತರರು ಅಕ್ಷರಶಃ ಕಂಗೆಟ್ಟಿದ್ದಾರೆ. ಬಿತ್ತಿದ ಬೆಳೆ ಕೈಗೆ ಸಿಗದೇ ಸಾಲಗಾರರ ಕಾಟಕ್ಕೆ ತನ್ನ ಒಡನಾಡಿ ಎತ್ತುಗಳನ್ನು ಅತಿ ಕಡಿಮೆ ದರಕ್ಕೆ ಮಾರಲು ಮುಂದಾಗಿದ್ದಾರೆ. ಉತ್ತರ ಕರ್ನಾಟಕದ ಅತಿ ದೊಡ್ಡ ಮಾರುಕಟ್ಟೆ ಹಾವೇರಿಯಲ್ಲಿ ಜಾನುವಾರು ಸಂತೆ ಜಿನುಗುಡುತ್ತಿದೆ. ಹೌದು ಈ ಬಾರಿ ರಾಜ್ಯದಲ್ಲಿ ಎದುರಾಗಿರು ಬರಗಾಲವನ್ನು ಎದುರಿಸಲು ರಾಜ್ಯದ ರೈತರು ಹೆಣಗಾಡುತ್ತಿದ್ದಾರೆ.
ಸಾಲಸೋಲ ಮಾಡಿದ ಬೆಳೆ ಕೈಗೆ ಸಿಗದೆ ಸಾಲಗಾರರ ಕಾಟಕ್ಕೆ ಬೇಸತ್ತು ಮನೆ, ಜಮೀನು ಮಾರಿ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಇದಕ್ಕೆ ಹಾವೇರಿ ಜಿಲ್ಲೆ ಏನು ಹೊರತಾಗಿಲ್ಲ. ಈ ಬಾರಿ ಹಾವೇರಿ ಜಿಲ್ಲೆಯಾದ್ಯಂತ ಆರಂಭದಲ್ಲಿ ಮುಂಗಾರು ಅಬ್ಬರಿಸಿ ಬೊಬ್ಬಿರಿದು ಬಿತ್ತನೆಯಾದ ನಂತರ ಕೈಕೊಟ್ಟಿದೆ. ಹೀಗಾಗಿ ರೈತರು ಸಾಲ ತೀರಿಸಲಾಗದೆ ಪರದಾಡುತ್ತಿದ್ದಾರೆ. ಕೊನೆಗೆ ಸಾಲಗಾರರ ಕಾಟಕ್ಕೆ ತನ್ನ ಒಡನಾಡಿ ಎತ್ತುಗಳನ್ನು ಮಾರಿ ಕೆಲವರು ಸಾಲ ತೀರಿಸುತ್ತಿದ್ದಾರೆ. ಇನ್ನೂ ಕೆಲವರು ಮಳೆ ಕೈ ಕೊಟ್ಟಿದ್ದರಿಂದ ಜಾನುವಾರುಗಳಿಗೆ ಮೇವು ಇಲ್ಲಾ ಈ ಕಾರಣದಿಂದ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.
ಆರಂಭದಲ್ಲಿ ಮುಂಗಾರು ಚೆನ್ನಾಗಿ ಆಗಿದ್ದರಿಂದ ಹಾವೇರಿ ರೈತರು ಮೆಕ್ಕೆಜೋಳ, ಭತ್ತ, ಸೋಯಾಬಿನ್, ಶೇಂಗಾ , ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರು. ಆದರೆ, ಅಗಸ್ಟ್ ತಿಂಗಳು ಮುಗಿದು ಸೆಪ್ಟಂಬರ್ ಆರಂಭವಾದರು ಸಹ ಮಳೆರಾಯ ಮುನಿಸು ಶಮನವಾಗಿಯೇ ಇಲ್ಲಾ. ಪರಿಣಾಮ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಒಣಗಿ ಹೋಗಿದ್ದಾವೆ.
ಹೀಗಾಗಿ ಮೇವು ಇಲ್ಲದೇ ಎತ್ತು, ಹಸು, ಎಮ್ಮೆಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ತರಲಾಗುತ್ತಿದೆ. ಒಂದು ಕಡೆ ಕೈಯಲ್ಲಿ ದುಡ್ಡಿಲ್ಲದೆ ರೈತರು ಜಾನುವಾರು ಮಾರಲು ಬಂದರೆ, ಇನ್ನೊಂದು ಕಡೆ ಅವುಗಳನ್ನು ಕೊಳ್ಳಬೇಕಾಗಿದ್ದ ರೈತರ ಕಡೆ ಸಹ ಹಣ ಇಲ್ಲ. ಪರಿಣಾಮ ಮಾರುಕಟ್ಟೆಯಲ್ಲಿ ದನಗಳು ಕೊಳ್ಳುವವರೇ ಇಲ್ಲದಂತಾಗಿದೆ. ಆದರಿಂದ ರೈತರು ಒಂದು ಲಕ್ಷ ಬೆಲೆ ಬಾಳುವ ಎತ್ತುಗಳನ್ನು ಐವತ್ತು ಸಾವಿರಕ್ಕೆ ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದಾರೆ.
ಒಟ್ಟಾರೆ ಹಾವೇರಿಯಲ್ಲಿ ಬರ ತಾಂಡವವಾಡುತ್ತಿದೆ. ಬರಪಿಡಿತ ಜಿಲ್ಲೆ ಎಂದು ಘೋಷಣೆಯಾಗಿದೆ ಆದರೆ ಸೂಕ್ತ ಪರಿಹಾರ ಸಿಕ್ಕಿಲ್ಲಾ. ರೈತರು ಬೀದಿಗೆ ಇಳಿದು ಹೋರಾಟ ಮಾಡಿದರು ಸರ್ಕಾರ ಗ್ಯಾರಂಟಿ ಯೋಜನೆ ನಡುವೆ ರೈತರಿಗೆ ಪರಿಹಾರ ನೀಡಲು ಹೆಣಗಾಡುತ್ತಿದೆ. ಒಟ್ಟಾರೆ ದೇಶಕ್ಕೆ ಅನ್ನಕೊಡುವ ರೈತರ ಪಾಡು ದೇವರಿಗೆ ಪ್ರೀತಿ ಅನ್ನುವಂತಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9, ಹಾವೇರಿ