ಹಾವೇರಿ, ನವೆಂಬರ್ 07: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ (Union Bank Of India) ಕುರಂಬಗೊಂಡ ಶಾಖೆ ಸಿಬ್ಬಂದಿ ಸಾವಿರಾರು ರೈತರು ಇಟ್ಟಿದ್ದ ಎಫ್ಡಿ ಹಣ ನೀಡದೆ ವಂಚಿಸಿರುವ ಆರೋಪ ಕೇಳಿಬಂದಿತ್ತು. ಸದ್ಯ ಈ ಕುರಿತಾಗಿ ಕುರುಬಗೊಂಡ ಗ್ರಾಮದಲ್ಲಿ ಶಾಖೆಯ ಮ್ಯಾನೇಜರ್ ರವಿರಾಜ್ ಹೇಳಿಕೆ ನೀಡಿದ್ದು, ಎಷ್ಟು ಜನರಿಗೆ ಎಷ್ಟು ಹಣ ವಂಚನೆ ಆಗಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನಾನು 1 ವಾರದ ಹಿಂದೆಯಷ್ಟೇ ಈ ಶಾಖೆ ಮ್ಯಾನೇಜರ್ ಆಗಿ ಬಂದಿದ್ದೇನೆ. ಈ ಮೊದಲಿನ ಮ್ಯಾನೇಜರ್ ಅವಾಂತರದಿಂದ ರೈತರಿಗೆ ಸಮಸ್ಯೆ ಆಗಿದೆ. ವಂಚನೆ ಸಂಬಂಧ ಬ್ಯಾಂಕ್ನ ಉನ್ನತ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸ್ ದಾಖಲಿಸಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ 80 ಲಕ್ಷದಿಂದ 1 ಕೋಟಿ ರೂ. ಹಗರಣ ಆಗಿರಬಹುದು. ಆದರೆ ತನಿಖೆ ಮುಗಿದ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ. ಬ್ಯಾಂಕ್ ಗ್ರಾಹಕರು ನೀಡಿದ ದೂರಿನ ಅನ್ವಯ ತನಿಖೆ ಮಾಡುತ್ತೇವೆ. ಬ್ಯಾಂಕ್ ವ್ಯವಹಾರದ ಆಡಿಟ್ ಮಾಡಿ ನಾಳೆ ಎಲ್ಲಾ ಮಾಹಿತಿ ನೀಡುತ್ತೇನೆ. ಹಿಂದಿನ ಮ್ಯಾನೇಜರ್ ಜೊತೆ ಉನ್ನತ ಅಧಿಕಾರಿಗಳು ಮಾತನಾಡಿದ್ದಾರೆ. ಈ ಹಿಂದಿನ ಮ್ಯಾನೇಜರ್ ಸದ್ಯ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಗೆದಷ್ಟು ಯೂನಿಯನ್ ಬ್ಯಾಂಕ್ ಹಗರಣ ಬಯಲಾಗುತ್ತಿದೆ. ನ್ಯಾಯ ಒದಗಿಸುವಂತೆ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಲು ಮುಂದಾಗಿದ್ದಾರೆ. ನಮ್ಮ ಒಡವೆ ನಮಗೆ ಕೊಡಿ ಎಂದು ಬ್ಯಾಂಕ್ ಮುಂದೆ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಮೋಸ ಹೋದ ಒಬ್ಬೊಬ್ಬರ ಕಥೆ ಕಣ್ಣೀರು ತರಿಸುತ್ತದೆ. ಕೂಲಿ ಕೆಲಸ ಮಾಡಿ ಕೂಡಿಟ್ಟ ಹಣವನ್ನೇ ಬ್ಯಾಂಕ್ ಸಿಬ್ಬಂದಿ ದೋಚಿದ್ದಾನೆ.
ಇದನ್ನೂ ಓದಿ: ಹಾವೇರಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕುರಂಬಗೊಂಡ ಶಾಖೆ ಸಿಬ್ಬಂದಿಯಿಂದ ವಂಚನೆ
ಅಡವಿಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಮಾಯವಾಗಿದ್ದು, ನೀವು ಲಿಖಿತವಾಗಿ ದೂರ ಕೊಡಿ ನಾವು ನೋಡುತ್ತೇವೆ ಎಂದು ಸಿಬ್ಬಂದಿ ಸಬೂಬು ಕೊಟ್ಟು ಮನೆಗೆ ಕಳುಹಿಸುತ್ತಿದ್ದಾರೆ. ಬ್ಯಾಂಕ್ ಒಳಗಡೆ ಹೆಚ್ಚಿಗೆ ಜನರನ್ನು ಬಿಡದೆ, ಗೇಟ್ ಹಾಕಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳಿಂದ ನ್ಯಾಯ ಸಿಗುವುದು ಡೌಟ್ ಎಂದು ತಿಳಿದು ಪೊಲೀಸ್ ಠಾಣೆ ಮೆಟ್ಟಿಲ ಹತ್ತಲು ಗ್ರಾಮಸ್ಥರು ಇದೀಗ ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.