ಪೀಪಿ ಹೋರಿ ಸಾವು: ಅಸಂಖ್ಯ ಅಭಿಮಾನಿಗಳ ನಡುವೆ ಅಂತ್ಯಕ್ರಿಯೆ

| Updated By: ಸಾಧು ಶ್ರೀನಾಥ್​

Updated on: Jun 18, 2020 | 12:37 PM

ಹಾವೇರಿ : ಕೊಬ್ಬರಿ ಹೋರಿ ಹಬ್ಬ ಅಂದರೆ ಹಾವೇರಿ ಜಿಲ್ಲೆ ಜನರಿಗೆ ಸಂಭ್ರಮವೋ ಸಂಭ್ರಮ. ರೈತರಂತೂ ಹೋರಿಗಳನ್ನು ಕಟ್ಟು ಮಸ್ತಾಗಿ ತಿನ್ನಿಸಿ, ಬೆಳೆಸಿ ಭರ್ಜರಿಯಾಗಿ ಅಖಾಡಕ್ಕೆ ರೆಡಿ ಮಾಡಿರ್ತಾರೆ. ಹೀಗೆ ಹೋರಿ ಹಬ್ಬದ ಅಖಾಡದಲ್ಲಿ ಭರ್ಜರಿ ಹೆಸರು ಮಾಡಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಲ್ಲೆದೇವರ ಗ್ರಾಮದ ಹೋರಿ ಅನಾರೋಗ್ಯದಿಂದ ಮೃತ ಪಟ್ಟಿದೆ. ಮೃತ ಹೋರಿಯ ಅಂತ್ಯಕ್ರಿಯೆಯನ್ನ ಸಾವಿರಾರು ಅಭಿಮಾನಿಗಳು ದುಃಖದ ನಡುವೆಯೇ ನೆರವೇರಿಸಿದರು. ಕಲ್ಲೇದೇವರ ಹುಲಿ ಎಂದೇ ಖ್ಯಾತಿಯಾಗಿದ್ದ ಹೋರಿ ಹೌದು, ಗ್ರಾಮದ ಕಲ್ಲಪ್ಪ ನರಸೀಪುರ […]

ಪೀಪಿ ಹೋರಿ ಸಾವು: ಅಸಂಖ್ಯ ಅಭಿಮಾನಿಗಳ ನಡುವೆ ಅಂತ್ಯಕ್ರಿಯೆ
Follow us on

ಹಾವೇರಿ : ಕೊಬ್ಬರಿ ಹೋರಿ ಹಬ್ಬ ಅಂದರೆ ಹಾವೇರಿ ಜಿಲ್ಲೆ ಜನರಿಗೆ ಸಂಭ್ರಮವೋ ಸಂಭ್ರಮ. ರೈತರಂತೂ ಹೋರಿಗಳನ್ನು ಕಟ್ಟು ಮಸ್ತಾಗಿ ತಿನ್ನಿಸಿ, ಬೆಳೆಸಿ ಭರ್ಜರಿಯಾಗಿ ಅಖಾಡಕ್ಕೆ ರೆಡಿ ಮಾಡಿರ್ತಾರೆ. ಹೀಗೆ ಹೋರಿ ಹಬ್ಬದ ಅಖಾಡದಲ್ಲಿ ಭರ್ಜರಿ ಹೆಸರು ಮಾಡಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಲ್ಲೆದೇವರ ಗ್ರಾಮದ ಹೋರಿ ಅನಾರೋಗ್ಯದಿಂದ ಮೃತ ಪಟ್ಟಿದೆ. ಮೃತ ಹೋರಿಯ ಅಂತ್ಯಕ್ರಿಯೆಯನ್ನ ಸಾವಿರಾರು ಅಭಿಮಾನಿಗಳು ದುಃಖದ ನಡುವೆಯೇ ನೆರವೇರಿಸಿದರು.

ಕಲ್ಲೇದೇವರ ಹುಲಿ ಎಂದೇ ಖ್ಯಾತಿಯಾಗಿದ್ದ ಹೋರಿ
ಹೌದು, ಗ್ರಾಮದ ಕಲ್ಲಪ್ಪ ನರಸೀಪುರ ಎಂಬುವರು ಕಳೆದ ಕೆಲವು ವರ್ಷಗಳಿಂದ ಹೋರಿಯನ್ನು ಹೋರಿ ಹಬ್ಬದ ಅಖಾಡಕ್ಕೆ ಅಂತಲೇ ಭರ್ಜರಿಯಾಗಿ ರೆಡಿ ಮಾಡಿದ್ದರು. ಕಲ್ಲೆದೇವರ ಹುಲಿ ಎಂದೇ ಫೇಮಸ್ ಆಗಿದ್ದ ಹೋರಿಗೆ ಗ್ರಾಮದವರು ಮಾತ್ರವಲ್ಲ ಸುತ್ತಮುತ್ತಲಿನ ಗ್ರಾಮಗಳ ಜನರೂ ಅಭಿಮಾನಿಗಳಾಗಿದ್ದರು.

ಭಾಗವಹಿಸಿದಲ್ಲೇಲ್ಲಾ ಪ್ರಶಸ್ತಿಗಳನ್ನ ಬಾಚಿದ್ದ ಹೋರಿ
ಹಾವೇರಿ, ಬ್ಯಾಡಗಿ, ಗಣಜೂರ, ದೇವಗಿರಿ ಸೇರಿದಂತೆ ಎಲ್ಲೇ ಹೋರಿ ಹಬ್ಬ ನಡೆದರೂ ಅಲ್ಲಿ ಕಲ್ಲೆದೇವರ‌ ಹುಲಿಯ ಮಿಂಚಿನ ಓಟ ಇದ್ದೇ ಇರುತ್ತಿತ್ತು. ಭಾಗವಹಿಸಿದ ಬಹುತೇಕ ಸ್ಪರ್ಧೆಗಳಲ್ಲಿ ಈ ಹೋರಿ ಬೈಕ್, ಟ್ರಿಜುರಿ, ಟಿವಿ, ಬಂಗಾರದ ಆಭರಣ ಸೇರಿದಂತೆ ಅನೇಕ ರೀತಿಯ ಪ್ರಶಸ್ತಿಗಳನ್ನು ಗೆದ್ದಿತ್ತು. ಮನೆಯವರಿಗಂತೂ ಈ ಹೋರಿ ಕಂಡರೆ ಎಲ್ಲಿಲ್ಲದ ಪ್ರೀತಿ. ಥೇಟ್ ತಮ್ಮ ಮನೆಯ ಮಗನಂತೆ ಹೊರಿಯನ್ನು ಪ್ರೀತಿಯಿಂದ ಸಾಕಿ ಬೆಳೆಸಿದ್ದರು‌.

ಪೀಪಿ‌ ಹೋರಿ ಎಂದೇ ಫೇಮಸ್‌
ಕೊಬ್ಬರಿ ಹೋರಿ ಅಖಾಡದಲ್ಲಿ ಕಲ್ಲೆದೇವರ ಹುಲಿ ‘ಪೀಪಿ’ ಹೋರಿ ಎಂದೇ ಖ್ಯಾತಿಯಾಗಿತ್ತು. ಕೋಡಿಗೆ ಮುಗಿಲೆತ್ತರಕ್ಕೆ ಬಲೂನ್‌ಗಳನ್ನು ಕಟ್ಟಿ ಭರ್ಜರಿ ಅಲಂಕಾರ ಮಾಡಿ ಅಖಾಡಕ್ಕೆ ಬಿಟ್ಟರೆ, ಸಂಘಟಕರು ಬಂತು ಪೀಪಿ, ಬಂತು ಪೀಪಿ ಎಂದು ಕಲ್ಲೆದೇವರ ಹುಲಿಯನ್ನು ಕರೆಯುತ್ತಿದ್ದರು. ಕಿಕ್ಕಿರಿದು ಸೇರಿದ್ದ ಜನರ ನಡುವೆ ಯಾರ ಕೈಗೂ ಸಿಗದಂತೆ ಓಡುತ್ತಿದ್ದ ಹೋರಿ ಗೆದ್ದು ಬೀಗುತ್ತಿತ್ತು.

ಇಂಥ ಹೋರಿ ಸಾವು ಮಾಲೀಕರಿಗೆ ದುಃಖದ ಕಾರ್ಮೋಡ ಕವಿಯುವಂತೆ ಮಾಡಿತ್ತು. ಹೋರಿ ಸಾವಿನ ಸುದ್ದಿ ತಿಳಿದು ಕೊರೊನಾ ಭೀತಿಯಲ್ಲೂ ಸುತ್ತಮುತ್ತಲಿನ ಗ್ರಾಮಗಳ ಅಭಿಮಾನಿಗಳು ಬಂದು ಹೋರಿಗೆ ಅಂತಿಮ ನಮನ ಸಲ್ಲಿಸಿದರು. ಮನುಷ್ಯರು ಸತ್ತಾಗ ಮಾಡುವ ರೀತಿಯಲ್ಲಿ ಶಾಸ್ತ್ರೋಕ್ತವಾಗಿ ಹೋರಿಯ ಅಂತ್ಯಕ್ರಿಯೆ ಮಾಲೀಕರ ಜಮೀನಿನಲ್ಲಿ ನೆರವೇರಿಸಿದರು. -ಪ್ರಭುಗೌಡ ಎನ್. ಪಾಟೀಲ

Published On - 12:14 pm, Thu, 18 June 20