ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹಾರಿ ಹೋಯ್ತು ಮೂವರ ಪ್ರಾಣ

ದೀಪಾವಳಿ ಹಬ್ಬದ ಹಿನ್ನಲೆ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ ಸಾಲು ಸಾಲು ಅನಾಹುತಗಳು ಸಂಭವಿಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಯುವಕ ಸೇರಿ ಒಟ್ಟು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಹೋರಿ ಮನೆಗೆ ನುಗ್ಗಿದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ನಡೆದಿದೆ.

ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹಾರಿ ಹೋಯ್ತು ಮೂವರ ಪ್ರಾಣ
ಹೋರಿ ಬೆದರಿಸುವ ಸ್ಪರ್ಧೆ (ಸಾಂದರ್ಭಿಕ ಚಿತ್ರ)

Updated on: Oct 23, 2025 | 5:53 PM

ಹಾವೇರಿ, ಅಕ್ಟೋಬರ್​ 23: ದೀಪಾವಳಿ ಹಬ್ಬದ ಹಿನ್ನಲೆ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸಂಭವಿಸಿದ ದುರಂತದಿಂದಾಗಿ ಹಾವೇರಿ (Haveri) ಜಿಲ್ಲೆಯ ವಿವಿಧೆಡೆ ಒಟ್ಟು ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಚಂದ್ರಶೇಖರ ಕೋಡಿಹಳ್ಳಿ (75), ಘನಿಸಾಬ್ (75) ಮತ್ತು ಭರತ್(22) ಮೃತ ದುರ್ದೈವಿಗಳಾಗಿದ್ದಾರೆ. ಮೃತಪಟ್ಟಿರುವ ಮೂವರ ಪೈಕಿ ಇಬ್ಬರು ನಿನ್ನೆ ಪ್ರಾಣ ಕಳೆದುಕೊಂಡಿದ್ದರೆ, ಇಂದು ನಡೆದಿರುವ ಅನಾಹುತದಲ್ಲಿ ಮತ್ತೊಬ್ಬ ಯುವಕನ ಪ್ರಾಣಪಕ್ಷಿ ಹಾರಿಹೋಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬ ನೋಡಲು ಹೋಗಿದ್ದಾಗ ಹೋರಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಭರತ್​ ಎಂಬ ಯುವಕ ಮೃತಪಟ್ಟಿದ್ದಾನೆ. ನಿನ್ನೆ ದಾನೇಶ್ವರಿ ನಗರದ ನಿವಾಸಿ, ಹೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ್​ ಅವರು ಮನೆಗೆ ಹೊರಟಿದ್ದ ವೇಳೆ ಹಿಂದಿನಿಂದ ಬಂದು ಹೋರಿ ಹಾಯ್ದಿತ್ತು. ಬರೋಡಾ ಬ್ಯಾಂಕ್ ಎದುರುಗಡೆ ಘಟನೆ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಸ್ಪರ್ಧೆ ವೇಳೆ ಹೋರಿ ಮನೆಗೆ ನುಗ್ಗಿದ ಪರಿಣಾಮ ದೇವಿಹೊಸೂರು ಗ್ರಾಮದ‌ಲ್ಲಿ ಮನೆ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ ಎಂಬವರು ಗಂಭೀರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತಂದೆ ಪಿಂಚಣಿ ಹಣಕ್ಕಾಗಿ ತಂಗಿಗೆ ಅಣ್ಣಂದಿರ ಕಾಟ: ಗೃಹ ಬಂಧನದಲ್ಲಿರಿಸಿ ಹಿಂಸೆ?

ಮನೆಗೆ ನುಗ್ಗಿದ ಹೋರಿ: ಹಲವರಿಗೆ ಗಾಯ

ಹೋರಿ ಬೆದರಿಸುವ ಹಬ್ಬದ ವೇಳೆ ಕೊಬ್ಬರಿ ಹೋರಿ ಮನೆಗೆ ನುಗ್ಗಿದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ನಡೆದಿದೆ. ಅಖಾಡದಲ್ಲಿ ಬಿಡ್ತಿದ್ದಂತೆ ಹೋರಿ ಏಕಾಏಕಿ ಸಮೀಪದ ಮನೆಗೆ ನುಗ್ಗಿದೆ. ಇದನ್ನು ಗಮನಿಸಿ ಮನೆಯಲ್ಲಿದ್ದವರು ತಕ್ಷಣವೇ ಹೊರಬಂದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.