ಹಾವೇರಿ: ಕೊರೊನಾ ಬಂದಾಗ ಸಂಸದ ಶಿವಕುಮಾರ ಉದಾಸಿ ಆಗಲಿ, ಪಕ್ಕದ ಕ್ಷೇತ್ರದ ಬಸವರಾಜ ಬೊಮ್ಮಾಯಿ ಆಗಲಿ, ಸಜ್ಜನ ಆಗಲಿ ಕೊರೊನಾ ರೋಗಿಗಳ ಕಷ್ಟ ಸುಖಗಳನ್ನ ಕೇಳೋ ಕೆಲಸ ಮಾಡ್ಲಿಲ್ಲ. ಶ್ರೀನಿವಾಸ ಮಾನೆ ಕೊಟ್ಟ ಮಾತಿನಂತೆ ಸೋತರೂ ನಿಮ್ಮ ಜೊತೆ, ಗೆದ್ದರೂ ನಿಮ್ಮ ಜೊತೆ ಅಂತಾ ಹೇಳಿ ಇದ್ದರು. ಅದರಂತೆ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೊರೊನಾ ಸಮಯದಲ್ಲಿ ಶ್ರೀನಿವಾಸ ಮಾನೆ ಕೆಲಸ ಮಾಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡಿರೋ ಸರಕಾರ ಅಂದರೆ ಅದು ನಮ್ಮ ಸರಕಾರ. ನಾನು ಸಿಎಂ ಆಗಿ ಒಂದು ಗಂಟೆಯೊಳಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಕೊಟ್ಟೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೊಮ್ಮಾಯಿ ಅವರೆ ನೀವು ಯಾವುದಾದ್ರೂ ಸಾಲ ಮನ್ನಾ ಮಾಡಿದ್ದೀರೇನ್ರಿ. ಎಲ್ಲ ರೈತರ ಸಾಲಮನ್ನಾ ಮಾಡಿದ್ದು ಮನಮೋಹನ ಸಿಂಗ್ ಸರಕಾರ. ನಿಮ್ಮ ನರೇಂದ್ರ ಮೋದಿ, ನಿಮ್ಮ ಯಡಿಯೂರಪ್ಪ ಒಂದು ರುಪಾಯಿನೂ ಮನ್ನಾ ಮಾಡ್ಲಿಲ್ಲ. ರೈತರ ಸಾಲಮನ್ನಾ ಮಾಡಿ ಅಂದರೆ ಯಡಿಯೂರಪ್ಪ ನಮ್ಮ ಸರಕಾರದಲ್ಲಿ ನೋಟು ಪ್ರಿಂಟ್ ಮಾಡೋ ಮಷೀನ್ ಇಲ್ಲ ಅಂದರು. ನಾನು ಏಳು ಕೆ.ಜಿ ಅಕ್ಕಿಯನ್ನ ಫ್ರೀಯಾಗಿ ಕೊಡ್ತಿದ್ದೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇವರ ಸರಕಾರದಿಂದ ಜನರಿಗೆ ಒಂದೇ ಒಂದು ಮನೆ ಕೊಡಲು ಆಗಲಿಲ್ಲ. ನಾನು ಸಿಎಂ ಆಗಿರೋವಾಗ ಪ್ರತಿ ವರ್ಷ ಮೂರು ಲಕ್ಷ ಮನೆಗಳನ್ನ ಮಂಜೂರು ಮಾಡಿದ್ದೆ. ಈಗ ಸೂರು ಇಲ್ಲದವರಿಗೆ ಒಂದು ಮನೆ ಕೊಡಲು ಆಗಿಲ್ಲ ಇವರ ಯೋಗ್ಯತೆಗೆ. ಈಗಲೂ ನಾನು ಸವಾಲು ಹಾಕ್ತಿದ್ದೇನೆ ಬಸವರಾಜ ಬೊಮ್ಮಾಯಿಗೆ. ಹಾನಗಲ್ ತಾಲೂಕಿಗೆ ಚುನಾವಣೆ ಸಮಯದಲ್ಲಿ ಬೊಮ್ಮಾಯಿ ಮನೆಗಳ ಆದೇಶ ಮಾಡಿದ್ದಾರೆ. ಜನರಿಗೆ ಮೋಸ ಮಾಡಲು ಈ ಆದೇಶ ಮಾಡಿದ್ದಾರೆ. ಚುನಾವಣೆ ಮುಗಿದ್ಮೇಲೆ ನಿಮ್ಮಿಂದ ಒಂದು ರುಪಾಯಿ ದುಡ್ಡು ಕೊಡಲು ಆಗೋದಿಲ್ಲ. ಕೇಂದ್ರದಿಂದ ನಮ್ಮ ಪಾಲಿನ ತೆರಿಗೆ ತರಲು ಆಗದವರು ನೀವು. ನಿಮ್ಮ ಹೇಡಿತನದಿಂದ ಒಂದೇ ಒಂದು ರುಪಾಯಿ ತರಲು ಆಗ್ಲಿಲ್ಲ. ನಾನು ಸಿಎಂ ಆಗಿದ್ದರೆ ಪ್ರಧಾನಿ ಮನೆ ಮುಂದೆ ಕೂತು ತೆರಿಗೆ ಹಣ ತರ್ತಿದ್ದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಯೋಜನೆಗಳ ಫೋಟೊ ಮೂಲಕ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನಾವು ಸ್ವಾಭಿಮಾನದ ಜನ. ನಮ್ಮ ಸ್ವಾಭಿಮಾನವನ್ನು 30ಕ್ಕೆ ತೋರಿಸುತ್ತೇವೆ. ಸಿದ್ದರಾಮಣ್ಣ ಯಾವಾಗಲೂ ಕೇಳುತ್ತಾರೆ ಏನ್ ಮಾಡಿದ್ರಿ ಏನ್ ಮಾಡಿದ್ರಿ ಅಂತ. ನೀರಾವರಿ ಯೋಜನೆ ಕೊಟ್ಟವರು ನಾವು. ಸಿದ್ದರಾಮಯ್ಯ ಓಡಾಡುತ್ತಿರುವ ರಸ್ತೆ ಸಿಎಂ ಉದಾಸಿ ಮಾಡಿಸಿದ್ದು. ಬಹಿರಂಗ ಚರ್ಚೆಗೆ ಬನ್ನಿ ಅಂತಾರೆ. ನಾನು ಆಹ್ವಾನ ಕೊಟ್ಟಿದ್ದೆ ಬನ್ನಿ ನಮ್ಮ ಕೆಲಸ ನೋಡಿ ಆಮೇಲೆ ಚರ್ಚೆ ಮಾಡೋಣ ಅಂತಾ. ಅವರು ನಮ್ಮ ಕೆಲಸ ನೋಡಿದ ಮೇಲೆ ಯಾವುದೇ ಚರ್ಚೆಗೆ ಸಿದ್ದ. ಇದು ಈಗಲೇ ಮುಗಿಯುವುದಿಲ್ಲ. ವಿಧಾನಸಭೆಯಲ್ಲಿ ಮುಂದುವರಿಯುತ್ತದೆ. 2023ಕ್ಕೆ ಮತ್ತೆ ಚುನಾವಣೆ ಬರುತ್ತದೆ. ಸಿದ್ದರಾಮಯ್ಯ ಆರೋಪಕ್ಕೆ ಯೋಜನೆಗಳ ಪೋಟೋ ಮೂಲಕ ಉತ್ತರ ಕೊಡುತ್ತೇನೆ ಎಂದು ಪ್ರಚಾರದ ಮಧ್ಯೆಯೇ ಎಲ್ಲಾ ಪೋಟೋಗಳನ್ನು ಪ್ರದರ್ಶನ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ರಿಮೋಟ್ ಕಂಟ್ರೋಲ್ ಸಿಎಂ ಎಂದು ಹೇಳ್ತಾರೆ. ನಾನು ರಿಮೋಟ್ ಕಂಟ್ರೋಲ್ ಸಿಎಂ ಹೌದು. ಜನರ ರಿಮೋಟ್ ಕಂಟ್ರೋಲ್ ಆಗಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಹಾನಗಲ್ ರೋಡ್‌ಶೋನಲ್ಲಿ ಸಿಎಂ ಬೊಮ್ಮಾಯಿ ಭಾಷಣ ಮಾಡಿದ್ದಾರೆ. ದೆಹಲಿ ಕುಟುಂಬದ ರಿಮೋಟ್ ಕಂಟ್ರೋಲ್ ಸಿಎಂ ಸಿದ್ದರಾಮಯ್ಯ. ನಾನು ನಿಮ್ಮ ರಿಮೋಟ್ ಕಂಟ್ರೋಲ್ ಎಂದು ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಸಬ್ಕಾ ಸತ್ಯನಾಶ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
70 ವರ್ಷ ಕಾಲ ಕಾಂಗ್ರೆಸ್ ಏನು ಮಾಡ್ತಿದೆ ಎಂದು ಕೇಳ್ತೀರಿ. ಏಳು ವರ್ಷದಲ್ಲಿ ನೀವೇನು ಮಾಡಿದ್ದೀರಿ ಹೇಳಿ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಯುವಕರು ಪಾಪ ಮೋದಿ, ಮೋದಿ ಅಂದರು. 2 ಕೋಟಿ ಸರ್ಕಾರಿ ಉದ್ಯೋಗಗಳನ್ನೇ ಮೋದಿ ಕಳೆದಿದ್ದಾರೆ. ನಾವು ಮಾಡಿದ್ದನ್ನ ನೀವು ಮಾರಿಕೊಂಡು ತಿಂದು ಬದುಕ್ತಿದ್ದೀರಿ. ಎಲ್ಲಿದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಕಿಡಿಕಾರಿದ್ದಾರೆ. ಮಾಡಿದ್ದು ಮಾತ್ರ ಸಬ್ ಕಾ ಸತ್ಯ ನಾಶ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನೆ ಕೇಳುತ್ತಾರೆ. ನಾವು ಮಾಡಿದ ಕಾರ್ಯಕ್ರಮಗಳನ್ನ ಪಟ್ಟಿ ಮಾಡಿ ಕೊಡ್ತೇವೆ. ಅರಸು ಕಾಲದಿಂದ ಬಡವರನ್ನ ಭೂಒಡೆಯನಾಗಿಸಿದ್ದೇವೆ. ಲಕ್ಷಾಂತರ ಎಕರೆ ಭೂಮಿಯನ್ನು ನೀರಾವರಿ ಮಾಡಿದ್ದೇವೆ. ನೀರಾವರಿಗೆ ಕಾಂಗ್ರೆಸ್ ಕೊಟ್ಟ ಆದ್ಯತೆ ಯಾರೂ ಕೊಟ್ಟಿಲ್ಲ. ಉದ್ಯೋಗ ಕೊಡಿ ಅಂದರೆ ಪಕೋಡಾ ಮಾರಿ ಅಂತಾರೆ. ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಾಗ ರಾಹುಲ್ ಗಾಂಧಿ ಪಾದಯಾತ್ರೆ ಮೂಲಕ ರೈತನ ಮನೆಗೆ ಭೇಟಿ ಕೊಟ್ಟಿದ್ದಾರೆ. ರೈತರಿಗೆ ಗುಂಡು ಹಾಕಿದ್ದನ್ನ ಹಾವೇರಿ ಜಿಲ್ಲೆಯ ಜನರು ಮರೆತಿಲ್ಲ ಎಂದು ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್‌ನವರ ಆಲೋಚನೆ ಅಪ್ನಾ ಸಾಥ್ ಅಪ್ನಾ ವಿಕಾಸ್: ಸುಧಾಕರ್ ಟೀಕೆ
ಇದು ಪ್ರತಿಷ್ಠೆಯ ಪ್ರಶ್ನೆ ಅಲ್ಲ ಇದು ಅಭಿವೃದ್ಧಿಯ ಪ್ರಶ್ನೆ. ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಕಾಂಗ್ರೆಸ್‌ನವರ ಆಲೋಚನೆ ಅಪ್ನಾ ಸಾಥ್ ಅಪ್ನಾ ವಿಕಾಸ್. ಕಾಂಗ್ರೆಸ್ನವರು ಅವರ ಅಭಿವೃದ್ಧಿ ಮಾತ್ರ ಮಾಡಿಕೊಳ್ಳುತ್ತಾರೆ. ಇಡೀ ರಾಜ್ಯ ನೋಡುತ್ತಿದೆ ಇದು ಬೊಮ್ಮಾಯಿ ಯುಗ. ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಟ್ಟಿದ್ದು ಬೊಮ್ಮಾಯಿ. ವಿಷಬೀಜ ಬಿತ್ತುತ್ತಿರುವುದು ಕಾಂಗ್ರೆಸ್ ಪಕ್ಷ ಎಂದು ಹಾನಗಲ್ ರೋಡ್‌ಶೋನಲ್ಲಿ ಸಚಿವ ಡಾ.ಸುಧಾಕರ್ ಭಾಷಣ ಮಾಡಿದ್ದಾರೆ.
ಎರಡು ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ
ಎರಡು ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು (ಅಕ್ಟೋಬರ್ 27) ತೆರೆ ಎಳೆಯಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ಬೈಎಲೆಕ್ಷನ್ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಹಾನಗಲ್, ಸಿಂದಗಿಯಲ್ಲಿ ಇಂದಿನಿಂದ ಮನೆಮನೆ ಪ್ರಚಾರ ಇರಲಿದೆ. ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳಲು ಸೂಚನೆ ಕೊಡಲಾಗಿದೆ. ಅ. 30ರಂದು ಹಾನಗಲ್, ಸಿಂದಗಿ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನ.2ರಂದು ಹಾನಗಲ್, ಸಿಂದಗಿ ಉಪಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ಉಪಚುನಾವಣೆ: ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಮತದಾರರ ಅಂಕಿ-ಅಂಶ; ಸಂಪೂರ್ಣ ವಿವರ ಇಲ್ಲಿದೆ
ಇದನ್ನೂ ಓದಿ: 2023 ಚುನಾವಣೆಯಲ್ಲಿ ಇರ್ತೀನೋ ಗೊತ್ತಿಲ್ಲ; ಜೀವನದ ಅಂತ್ಯದಲ್ಲಿ ಜೆಡಿಎಸ್ಗೆ ಬೆಂಬಲ ನೀಡಿ: ಹೆಚ್ಡಿ ದೇವೇಗೌಡ