
ಹಾವೇರಿ, ನ.25: ಸಿನಿಮಾಗಳಲ್ಲಿ ಬಳಸುವ ಪ್ರಾಪ್ ಮನಿ ಮಾದರಿಯ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ರಾಷ್ಟ್ರೀಯ ಬ್ಯಾಂಕ್ ಎಟಿಎಂ ಯಂತ್ರದ ಮೂಲಕ ಚಲಾವಣೆಗೊಳಿಸಲು ಯತ್ನಿಸಿದ ಖದೀಮರ ಜಾಲವೊಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಬಯಲಾಗಿದೆ. ಎಟಿಎಂ ಯಂತ್ರಕ್ಕೇ ಟೋಪಿ ಹಾಕಲು ಹೋಗಿ ಸಿಕ್ಕಿಬಿದ್ದ ಇಬ್ಬರು ಆರೋಪಿಗಳನ್ನು ರಾಣೇಬೆನ್ನೂರು ಶಹರ ಠಾಣೆ ಪೊಲೀಸರು ಬಂಧಿಸಿದ್ದು, ಬರೋಬ್ಬರಿ 1,000 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಣೇಬೆನ್ನೂರಿನ ರಾಷ್ಟ್ರೀಯ ಬ್ಯಾಂಕ್ ಎಟಿಎಂ ನಗದು ಜಮೆ ಯಂತ್ರಕ್ಕೆ ಆರೋಪಿಗಳು ಒಂದಲ್ಲ, ಎರಡಲ್ಲ ಬರೋಬ್ಬರಿ 76 ನಕಲಿ ನೋಟುಗಳನ್ನು ಜಮೆ ಮಾಡಲು ಯತ್ನಿಸಿದ್ದರು. ಸಿನಿಮಾ ಚಿತ್ರೀಕರಣದಲ್ಲಿ ಬಳಸುವ ಮಾದರಿಯ ಹಾಗೂ ‘ಚಿಲ್ಡ್ರನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಹೆಸರಿನ ₹500 ಮುಖಬೆಲೆಯ ನೋಟುಗಳನ್ನು ಬಳಸಲಾಗಿತ್ತು. ಎಟಿಎಂ ಯಂತ್ರಕ್ಕೆ ನಕಲಿ ನೋಟುಗಳು ಬೀಳುತ್ತಿದ್ದಂತೆಯೇ ತಾಂತ್ರಿಕ ವ್ಯವಸ್ಥೆಯ ಮೂಲಕ ಎಟಿಎಂ ಬ್ಯಾಂಕ್ ಸಿಬ್ಬಂದಿಗೆ ಅಲರ್ಟ್ ಸಂದೇಶ ರವಾನಿಸಿದೆ. ತಕ್ಷಣ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ನಡೆಸಿ ರಾಣೇಬೆನ್ನೂರು ಶಹರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ರಾಣೇಬೆನ್ನೂರು ಶಹರ ಪೊಲೀಸರು, ರಾಣೇಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದ ಸುರೇಶ್ ಬಿಲ್ಲಾಳ್ ಮತ್ತು ಮಾಲತೇಶ್ ಮೈಲಾರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಆರೋಪಿಗಳ ಬಳಿಯಿದ್ದ ₹500 ಮುಖಬೆಲೆಯ ಬರೋಬ್ಬರಿ 1,000 ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಜಾಲದ ಹಿಂದೆ ಇನ್ನೂ ಯಾರಿದ್ದಾರೆ ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.
ವರದಿ; ಅಣ್ಣಪ್ಪ ಬಾರ್ಕಿ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ