ಹಾವೇರಿ, ಡಿ.19: ಬೆಳಗಾವಿಯ ಮಂಟಮೂರಿಯಲ್ಲಿ ಯುವಕ-ಯುವತಿ ಪ್ರೀತಿಸಿ ನಾಪತ್ತೆಯಾದ ಪ್ರೇಮ ಪ್ರಕರಣದಲ್ಲಿ ಹುಡುಗನ ತಾಯಿಯನ್ನ ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣದ ಸಿಐಡಿ ತನಿಖೆ ನಡೆಯುತ್ತಿದೆ. ಈ ಘಟನೆಯ ಬೆನ್ನಲ್ಲೇ ಹಾವೇರಿ ಜಿಲ್ಲೆಯ ರಾಣೇಬೆನ್ನೂರು (Ranebennuru) ತಾಲೂಕಿನ ಮುದೇನೂರು ಗ್ರಾಮದಲ್ಲಿ ಮತ್ತೊಂದು ಇಂತಹುದ್ದೆ ಘಟನೆ ನಡೆದಿದೆ. ಮುದೇನೂರು ಗ್ರಾಮದ ಯುವಕ ಪ್ರಕಾಶ್ ಹಾಗೂ ಚಳಗೇರಿ ಗ್ರಾಮದ ಯವತಿ ಸಂಗೀತಾ ಎಂಬುವವರು ಪ್ರೀತಿಸುತ್ತಿದ್ದರು. ಕಳೆದರೆಡು ದಿನಗಳಿಂದ ಇವರು ನಾಪತ್ತೆಯಾಗಿದ್ದರು. ಇದರಿಂದ ಸಿಟ್ಟಿಗೆದ್ದ ಯುವತಿ ಕಡೆಯವರು ಯವಕನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದು, ಹುಡುಗನ ಮಾವ ಪ್ರಶಾಂತ್ ಎನ್ನುವವರನ್ನ ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಆದ್ರೆ, ಮಂಟಮೂರಿಯಲ್ಲಿ ನಡೆದಂತೆ ಘಟನೆ ಇಲ್ಲಿ ನಡೆದಿಲ್ಲವೆಂದು ಎಸ್ಪಿ ಅಂಶುಕುಮಾರ್ ಹೇಳಿದ್ದಾರೆ.
ಏಕಾಏಕಿ ಯುವಕನ ಮನೆಗೆ ನುಗ್ಗಿ ದಾಂಧಲೆ ಮಾಡಿದ ಬಳಿಕ, ಯುವಕನ ಮಾವನನ್ನ ವಾಹನದಲ್ಲಿ ಎತ್ತುಕೊಂಡು ಹೋಗಿ ಥಳಿಸಿದ್ದು, ಆ ಬಳಿಕ ರಾಣೇಬೆನ್ನೂರಿನಲ್ಲಿ ಅವರನ್ನ ಬಿಟ್ಟು ಹೋಗಿದ್ದಾರೆ. ಯುವತಿಯನನ್ನು ಹುಡುಕಿ ಕೊಡಿ ಎಂದು ಗಲಾಟೆ ಮಾಡಿದ್ದಾರೆ. ಈ ನಡುವೆ ನಾಪತ್ತೆಯಾಗಿದ್ದ ಹುಡುಗ-ಹುಡುಗಿ ಇಬ್ಬರು ರಕ್ಷಣೆಗಾಗಿ ಹಾವೇರಿ ಎಸ್ಪಿ ಮೊರೆ ಹೋಗಿದ್ದಾರೆ. ನಿನ್ನೆ(ಡಿ.18) ಹಾವೇರಿಯಲ್ಲಿ ಮದುವೆಯಾಗಿರುವ ಪ್ರೇಮಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದು, ತಮಗೆ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ:ಬೆಳಗಾವಿ ರೀತಿ ಹಾವೇರಿಯಲ್ಲೂ ಹೀನ ಕೃತ್ಯ: ಪ್ರೀತಿಸಿ ಓಡಿ ಹೋದರೆಂದು ಯುವಕನ ಸೋದರ ಮಾವನ ಅರೆಬೆತ್ತಲೆಗೊಳಿಸಿ ಹಲ್ಲೆ
ಒಟ್ಟಾರೆ ಪ್ರೀತಿಸಿದ ಯುವಕ-ಯುವತಿ ತಮ್ಮ ಇಚ್ಛೆಯಂತೆ ಮದುವೆಯಾಗಿದ್ದಾರೆ. ಆದರೆ, ಇದಕ್ಕೆ ಒಪ್ಪದ ಯುವತಿ ಮನೆಯವರಿಂದ ನಮಗೆ ಜೀವ ಭಯ ಇದೆ, ರಕ್ಷಣೆ ನೀಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಮಂಟಮೂರಿ ಬಳಿಕ ಮುದೇನೂರಿನಲ್ಲಿ ನಡೆದ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ