ಬೆಂಗಳೂರು: ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾದ ಕಾರಣ ರಾಜ್ಯದ ಹಲವರ ಬದುಕು ಅತ್ಯಂತ ಹೀನಾಯ ಪರಿಸ್ಥಿತಿಗೆ ಬಂದು ತಲುಪಿದೆ. ಹೀಗಾಗಿ ರಾಜ್ಯ ಸರ್ಕಾರ ಬಡ ಮತ್ತು ಕೆಳವರ್ಗದ ಜನರ ನೆರವಿಗಾಗಿ ಇಂದು (ಮೇ 19) 1,250 ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಹೆಕ್ಟೇರ್ಗೆ 10 ಸಾವಿರ ರೂಪಾಯಿ ಘೋಷಣೆ ಮಾಡಿದ್ದಾರೆ. ಎಕರೆಗೆ ಮೂರೂವರೆ ಸಾವಿರ ರೂಪಾಯಿ ಮಾತ್ರ ಸಿಗುತ್ತದೆ. ಎಕರೆಯಲ್ಲಿ ಬೆಳೆ ಬೆಳೆಯಲು 3 ಸಾವಿರ ರೂ. ಆಗುತ್ತಾ? ಇವರಿಗೆ 20 ಸಾವಿರ ರೈತರ ಪಟ್ಟಿ ಕೊಟ್ಟವರು ಯಾರು? ಇದು ಕೇವಲ ಕಣ್ಣೊರೆಸುವ ತಂತ್ರವಷ್ಟೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಆಟೋ ಚಾಲಕರ ಪಟ್ಟಿ 7 ಲಕ್ಷ ಇತ್ತು. ಈ ಬಾರಿ 2 ಲಕ್ಷಕ್ಕೆ ಇಳಿಕೆಯಾಗಿದ್ದು ಹೇಗೆಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಬಿಜೆಪಿ ಸರ್ಕಾರ ಬರುವುದಕ್ಕೂ ಮುನ್ನ 7 ಕೆಜಿ ಅಕ್ಕಿ, ಬಿಜೆಪಿ ಸರ್ಕಾರ ಬಂದ ಬಳಿಕ 5 ಕೆಜಿಗೆ ಇಳಿಕೆ ಮಾಡಿದರು. ಇವರು ಕಾರ್ಮಿಕರಿಗೆ ಸರ್ಕಾರದಿಂದ ಹಣ ನೀಡುವುದಿಲ್ಲ. ಕಾರ್ಮಿಕರು ಇಟ್ಟಿರುವ ಎಫ್ಡಿ ಹಣದಿಂದ ನೀಡುತ್ತಾರಷ್ಟೆ. ಇದು ಅವೈಜ್ಞಾನಿಕ ಪರಿಹಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲರಿಗೂ ಪರಿಹಾರ ನೀಡಬೇಕಿತ್ತು. ಕೇವಲ ಹೂವು ಬೆಳೆಗಾರರಿಗೆ ಮಾತ್ರ ನಷ್ಟವಾಗಿಲ್ಲ. ಮಾವು, ದ್ರಾಕ್ಷಿ ಸೇರಿದಂತೆ ಹಲವು ಬೆಳೆಗಾರರಿಗೆ ನಷ್ಟವಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹಾರ ಘೋಷಿಸಬೇಕಿತ್ತು. ಸಂಕಷ್ಟಕ್ಕೆ ಸ್ಪಂದಿಸುವ ನಿಜವಾದ ಪ್ಯಾಕೇಜ್ ಕೊಡಬೇಕಿತ್ತು. ಯಾವ ಕುಟುಂಬ ನಿರ್ವಹಣೆಗೆ ಸಾಲದ ಪ್ಯಾಕೇಜ್ ಆಗಿದೆ. ರಾಜ್ಯ ಸರ್ಕಾರದ ಪ್ಯಾಕೇಜ್ ಬೋಗಸ್ ಆಗಿದೆ. ಜನರ ದುಡ್ಡನ್ನು ಜನರಿಗೆ ನೀಡುವುದಕ್ಕೆ ನಿಮಗೇನು ಕಷ್ಟ. ರಾಜ್ಯದ ಬಡವರಿಗೆ ಹಣ ನೀಡಲು ಆರ್ಥಿಕ ಸಂಕಷ್ಟವಾ? ಸರ್ಕಾರವೇನು ಬೆವರು ಸುರಿಸಿ ಪರಿಹಾರ ನೀಡುತ್ತಿದೆಯಾ? ಜನರ ದುಡ್ಡನ್ನು ಜನರಿಗೆ ನೀಡುತ್ತಿದ್ದಾರಷ್ಟೇ ಎಂದು ಹೇಳಿದರು.
ರಾಜ್ಯ ಸರ್ಕಾರದ ಪ್ಯಾಕೇಜ್ ಮೇಲೆ ನನಗೆ ನಂಬಿಕೆ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಲಾಕ್ಡೌನ್ ರಲೀಫ್ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ಪ್ಯಾಕೇಜ್ ಮೇಲೆ ನನಗೆ ನಂಬಿಕೆ ಇಲ್ಲ. ಫಲಾನುಭವಿಗಳಿಗೆ ಹಣ ಕೊಡುತ್ತಾರೆಂಬ ನಂಬಿಕೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಂಚಾಯಿತಿ ಸಿಬ್ಬಂದಿ, ಶಿಕ್ಷಕರಿಗೆ ಫಲಾನುಭವಿಗಳಿಗೆ ಹಣ ಹಂಚುವ ಜವಾಬ್ದಾರಿಯನ್ನು ನೀಡಿ. ಆಗ ಮಾತ್ರ ಫಲಾನುಭವಿಗಳಿಗೆ ಹಣ ತಲುಪುತ್ತದೆ. ಪಡಿತರ ವಿತರಣೆಯ ಬಗ್ಗೆ ಎಲ್ಲವೂ ಗೊಂದಲವಾಗಿದೆ. ಕಳೆದ ಬಾರಿಯೂ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ ಯಾರ ಕೈ ಸೇರಿಲ್ಲ. ಆರ್ಥಿಕ ಪ್ಯಾಕೇಜ್ನಲ್ಲಿ ಕಟ್ಟಡ ಕಾರ್ಮಿಕರಿಗೆ ಏನೂ ಕೊಟ್ಟಿಲ್ಲ. ಬೆಳೆ ಹಾನಿ ಬಗ್ಗೆ ಸರ್ವೆ ಮಾಡಿ ಸಹಾಯ ಮಾಡಬೇಕಾಗಿದೆ. ಇದು ಬಡವರ ಬಗ್ಗೆ ಚಿಂತನೆ ಮಾಡುವ ಸರ್ಕಾರವಲ್ಲ ಎಂದು ಹೇಳಿದ್ದಾರೆ.
ನಾವು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲು ಕೇಳಿದ್ದೆವು. ಅದಕ್ಕಾಗಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರಷ್ಟೆ. ಪ್ಯಾಕೇಜ್ ಘೋಷಣೆಗೂ ಮುನ್ನ ಚರ್ಚೆ ಮಾಡಿದ್ದಾರಾ? ಬ್ಯಾಂಕ್ ಅಧಿಕಾರಿಗಳ ಜೊತೆ ಇವರು ಚರ್ಚೆ ಮಾಡಿದ್ದಾರಾ? ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಊಟ ನೀಡುತ್ತಿದ್ದಾರೆ. ಇದಕ್ಕೂ ಆಧಾರ್ ಕಾರ್ಡ್ ತರಬೇಕು ಎಂದು ಕೇಳುತ್ತಿದ್ದಾರೆ. ಯಾರಾದ್ರೂ ಊಟಕ್ಕಾಗಿ ಆಧಾರ್ ತರುವುದಕ್ಕೆ ಆಗುತ್ತಾ? ಅಸಂಘಟಿತ ಕಾರ್ಮಿಕರು, , ರೈತರಿಗೆ ಯಾವುದೇ ರೀತಿಯ ಆರ್ಥಿಕ ಸಹಾಯ ನೀಡಿಲ್ಲ. ಮುಂದೆ ಬಂದು ಸೇವೆ ಮಾಡುವವರಿಗೆ ರಕ್ಷಣೆಯೇ ಕೊಡುತ್ತಿಲ್ಲ ಎಂದು ಮಾತನಾಡಿದ ಡಿಕೆಶಿ ಹೆಲ್ತ್ ಇನ್ಶುರೆನ್ಸ್ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ
ಆನ್ಲೈನ್ ಆಕ್ಸಿಜನ್ ಕಾನ್ಸಂಟ್ರೇಟರ್ ಹೆಸರಲ್ಲಿ ವಂಚನೆ; ಕೊನೆಗೂ ಉಳಿಯಲಿಲ್ಲ ನೆಲಮಂಗಲದ ಸೋಂಕಿತನ ಜೀವ
Karnataka Lockdown Package: ಲಾಕ್ಡೌನ್ ಪ್ಯಾಕೇಜ್ ಘೋಷಣೆ ಬಗ್ಗೆ ಸುಳಿವು ನೀಡಿದ ಕಂದಾಯ ಸಚಿವ ಆರ್.ಅಶೋಕ್
(Hd kumaraswamy and dk shivakumar reaction to lockdown Karnataka government Relief Fund)
Published On - 12:41 pm, Wed, 19 May 21