ಕೈತಪ್ಪಿದ ಕೃಷಿ ಖಾತೆ: ಮೋದಿ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಿಷ್ಟು

| Updated By: ರಮೇಶ್ ಬಿ. ಜವಳಗೇರಾ

Updated on: Jun 10, 2024 | 10:29 PM

ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ (Modi 3.0 Cabinet) ರಾಜ್ಯದ ಐವರಿಗೆ ಸಚಿವ ಸ್ಥಾನ ಸಿಕ್ಕಿದೆ. ಪ್ರಲ್ಹಾದ್‌ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಖಾತೆ ನೀಡಲಾಗಿದೆ. ಇನ್ನು ಕೃಷಿ ಖಾತೆ ಕುಮಾರಸ್ವಾಮಿಗೆ ಮಿಸ್ ಆಗಿದ್ದು, ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅದು ಈ ಕೆಳಗಿನಂತಿದೆ.

ಕೈತಪ್ಪಿದ ಕೃಷಿ ಖಾತೆ: ಮೋದಿ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಿಷ್ಟು
ಕುಮಾರಸ್ವಾಮಿ-ಮೋದಿ
Follow us on

ಬೆಂಗಳೂರು, (ಜೂನ್ 10): ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ (Modi 3.0 Cabinet) ಎಚ್​ಡಿ ಕುಮಾರಸ್ವಾಮಿ(HD Kumaraswamy )ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದು, ಕೃಷಿ ಖಾತೆ ಮಿಸ್ ಆಗಿದೆ. ಕೃಷಿ ಖಾತೆ ಬಯಸಿದ್ದ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಇನ್ನು ಖಾತೆ ಹಂಚಿಕೆ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಚಿವ ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಮಾಡಿದ್ದು, ಕೃಷಿ ಖಾತೆ ನಿರೀಕ್ಷೆ ಇತ್ತು, ಆದರೆ ಮೋದಿ ತೀರ್ಮಾನ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ನಿರೀಕ್ಷೆ ಮಾಡಿ ಖಾತೆ ನೀಡಿದ್ದಾರೆ. ನಾಳೆ (ಜೂನ್ 11) ಸಂಜೆ 5 ಗಂಟೆಗೆ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಮಾಡಿದ್ದಾರೆ. ವಿಶ್ವಾಸ ಇಟ್ಟು ಖಾತೆ ಹಂಚಿಕೆ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ನಿರೀಕ್ಷೆ ಮಾಡಿ ಖಾತೆ ನೀಡಿದ್ದಾರೆ. ನಾಳೆ ಸಂಜೆ 5 ಗಂಟೆಗೆ ಅಧಿಕಾರ ವಹಿಸಿಕೊಳ್ಳುತ್ತೇನೆ. ಕನ್ನಡಿಗರ ಪರವಾಗಿ ಪ್ರಧಾನಿಯವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಇದನ್ನೂ ಓದಿ: ಕುಮಾರಸ್ವಾಮಿಗೆ ಕೃಷಿ ಖಾತೆ ಮಿಸ್​: ಜೋಶಿ, ಶೋಭಾ, ಸೋಮಣ್ಣಗೆ ಯಾವ ಖಾತೆ? ಇಲ್ಲಿದೆ ವಿವರ

ಪ್ರಹ್ಲಾದ್ ಜೋಷಿಯವರಿಗೆ ಆಹಾರ ಖಾತೆ ಕೊಟ್ಟಿದ್ದಾರೆ. ದೊಡ್ಡ, ಪ್ರಮುಖವಾದ ಇಲಾಖೆ ನೀಡಿದ್ದಾರೆ. ನನ್ನ ವಿಚಾರದಲ್ಲಿ ವಿಶೇಷವಾದ ನಂಬಿಕೆ ಇಟ್ಟು ಖಾತೆ ನೀಡಿದ್ದಾರೆ. ನನ್ನ ಮೇಲೆ ಸವಾಲಿದೆ. ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಕೆಲಸ ಮಾಡಬೇಕಿದೆ. ಕರ್ನಾಟಕಕ್ಕೆ ಅಂತ ಮಾತ್ರ ಹೇಳಲ್ಲ. ದೇಶಾದ್ಯಂತ ಸುತ್ತಾಡಿ ಬದಲಾವಣೆ ತರಲು ಬಯಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನನ್ನ ಜೀವನದಲ್ಲಿ ಅತಿ ದೊಡ್ಡ ಸವಾಲು. ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳು ಇವೆ. ಅವುಗಳನ್ನು ಈಗ ಚರ್ಚೆ ಮಾಡುವುದಿಲ್ಲ. ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ. ಎಲ್ಲವನ್ನು ಗಮನಿಸಿ ಇಲಾಖೆಯನ್ನು ಮೋದಿ ಕೊಟ್ಟಿದ್ದಾರೆ. ಪ್ರಮಾಣಿಕವಾಗಿ ಕ್ಷಣ ವ್ಯರ್ಥಮಾಡದೆ ಕೆಲಸ ಮಾಡುತ್ತೇನೆ. ರೂಟ್ ಮ್ಯಾಪ್ ಸಿದ್ದಮಾಡಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನನ್ನದೆ ಕಲ್ಪನೆಯಲ್ಲಿ ಕೆಲಸ ಮಾಡಲು ಪ್ರಮಾಣಿಕೆ ಪ್ರಯತ್ನ ಮಾಡುತ್ತೇನೆ. ಶೋಭಾ ಅವರಿಗೂ ಉತ್ತಮ ಖಾತೆ ಸಿಕ್ಕಿದೆ. ದೇಶದ ಪ್ರಗತಿಗೆ ನಾವು ಕೆಲಸ ಮಾಡುತ್ತೇವೆ. ಹೊಸ ಇತಿಹಾಸ ಕರ್ನಾಟಕದಲ್ಲಿ ತರುವುದು ಮಾತ್ರವಲ್ಲ, ದೇಶದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇವೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಕೆಲಸ ಮಾಡಬೇಕಿದೆ. ಎಲ್ಲದರ ಬಗ್ಗೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷ ಏಳು ಬೀಳುಗಳನ್ನು ಕಂಡಿದೆ. ದೇವೇಗೌಡರನ್ನು ಇಂದು ಸ್ಮರಿಸುತ್ತೇನೆ. ದೇವೇಗೌಡರ ರಾಜಕೀಯ ಮುಗಿದೇ ಹೋಯ್ತು ಎನ್ನುವಾಗ ಮತ್ತೆ ಪುಟಿದೇದ್ದಿದ್ದಾರೆ. ಕುಮಾರಸ್ವಾಮಿ ಮುಗಿದು ಹೋದ ಎನ್ನುವಾಗಲೇ ಯಾವುದೋ ಶಕ್ತಿ ಕಾಪಾಡಿದೆ. ಈ ಪಕ್ಷವನ್ನು ಯಾವುದೋ ಶಕ್ತಿ ಮೇಲೆತ್ತಿದೆ. ಪಕ್ಷದ ಸಂಘಟನೆ ಮಾಡುವ ಸಮರ್ಥ ನಾಯಕರು ರಾಜ್ಯದಲ್ಲಿ ಇದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.