ಚಿಕ್ಕಮಗಳೂರು: ತೌಕ್ತೆ ಚಂಡಮಾರುತದ ಪರಿಣಾಮದಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಜಿಲ್ಲೆಯ ಕೊಟ್ಟಿಗೆಹಾರ, ಜಾವಳಿ, ಬಾಳೂರು, ಚಾರ್ಮಾಡಿ ಘಾಟ್ನಲ್ಲಿ ಭಾರಿ ಮಳೆಯಾಗುತ್ತಿದೆ. ಭಾರಿ ಮಳೆ ಹಿನ್ನೆಲೆ ಬಿದರಹಳ್ಳಿಯಲ್ಲಿ ರಸ್ತೆ ಮೇಲೆ ವಿದ್ಯುತ್ ಕಂಬಗಳು ಬಿದ್ದಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಇನ್ನೂ ಉತ್ತರ ಕನ್ನಡ ಜಿಲ್ಲೆಯಲ್ಲೂ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದೆ. ಉತ್ತರ ಕನ್ನಡದಲ್ಲಿ ಗಾಳಿ, ಮಳೆ ಮುಂದುವರೆದಿದೆ. ಜೊತೆಗೆ ಅರಬ್ಬೀ ಸಮುದ್ರದಲ್ಲೂ ಕಡಲ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಹೀಗಾಗಿ ಹಲವೆಡೆ ನಿನ್ನೆ ರಾತ್ರಿಯಿಂದ ವಿದ್ಯುತ್ ಸ್ಥಗಿತವಾಗಿದ್ದು, ಜನರು ಪರದಾಡುವಂತಾಗಿದೆ. ಕುಮಟಾ ತಾಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಈ ಕಾರಣ ತಾಲೂಕಿನ ಕಲಭಾಗ, ಗುಂದ, ಶಶಿಹಿತ್ತಲ್ಲ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳನ್ನು ಶಿಫ್ಟ್ ಮಾಡಲಾಗಿದೆ.
ಉಡುಪಿಯಲ್ಲಿ ಕಳೆದ ರಾತ್ರಿಯಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ತೌಕ್ತೆ ಚಂಡಮಾರುತದ ಪರಿಣಾಮದಿಂದ ಜಿಟಿ ಜಿಟಿ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದೆ. ತೌಕ್ತೆ ಗೋವಾ ರಾಜ್ಯದತ್ತ ಮುಖ ಮಾಡಿರುವುದರಿಂದ ಉಡುಪಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಸಮುದ್ರದ ಅಲೆಗಳ ಅಬ್ಬರ ಕೊಂಚ ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲೂ ಜಿಟಿ ಜಿಟಿ ಮಳೆ ಮುಂದುವರೆದಿದೆ. ಜಿಟಿ ಜಿಟಿ ಮಳೆಯಲ್ಲಿ ನವಿಲು ಗರಿ ಬಿಚ್ಚಿ ಕುಣಿದಿದೆ. ನಂಜನಗೂಡು ತಾಲೂಕಿನ ಕೊಣನೂರು ಗ್ರಾಮದಲ್ಲಿ ಸುಮಾರು 2 ನಿಮಿಷ ಗರಿ ಬಿಚ್ಚಿ ಕುಣಿದ ನವಿಲಿನ ನೃತ್ಯ ಎಲ್ಲರ ಮನಸೆಳೆದಿದೆ. ಜೊತೆಗೆ ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡ ಮಾರುತ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ತುಂತುರು ಮಳೆಯಾಗಿದೆ. ಕಳೆದ ರಾತ್ರಿಯಿಂದಲೇ ವರುಣ ಬಿರುಸು ಕಳೆದುಕೊಂಡಿದೆ.
ಹಾವೇರಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಮೋಡ ಕವಿದ ವಾತಾವರಣದೊಂದಿಗೆ ಆಗಾಗ ತುಂತುರು ಮಳೆ ಬೀಳುತ್ತಿದೆ. ತುಂತುರು ಮಳೆಯಿಂದ ಜನರ ಓಡಾಟ ಕಡಿಮೆಯಾಗಿದೆ. ಲಾಕ್ಡೌನ್ ಇದ್ದರೂ ಅಗತ್ಯ ವಸ್ತುಗಳ ಖರೀದಿ ಹೆಸರಲ್ಲಿ ಜನ ಓಡಾಡುತ್ತಿದ್ದರು. ಆದರೆ ಮಳೆರಾಯ ಹೆಚ್ಚಿನ ಜನರ ಓಡಾಟಕ್ಕೆ ಬ್ರೇಕ್ ಹಾಕಿದೆ.
ಇದನ್ನೂ ಓದಿ
ಇಂದೂ ಸೇರಿ ಮೂರು ದಿನಗಳ ಕಾಲ ತೌಕ್ತೆ ಎಫೆಕ್ಟ್ ಇರಲಿದೆ; ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಮಾಹಿತಿ
ರಾಜ್ಯದಲ್ಲಿಯೇ ಅತಿ ಹೆಚ್ಚು ಕೊವಿಡ್ ಆ್ಯಕ್ಟಿವ್ ಕೇಸ್, ಮಹಾರಾಷ್ಟ್ರವನ್ನು ಹಿಂದಿಕ್ಕಿ ಮುಂದೆ ಸಾಗಿದ ಕರ್ನಾಟಕ
(Heavy rain in chikmagalur and People lives are in complete disarray with rain)