AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಕರ್ತವ್ಯನಿರತ ವಿಜಯಪುರದ ವೈದ್ಯೆ; ಡಾ. ಮೀನಾಕ್ಷಿ ಮುತ್ತಪ್ಪ ನವರ ಜೊತೆ ಮುಖ್ಯಮಂತ್ರಿ ಸಮಾಲೋಚನೆ

ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಅಪಾಯವನ್ನು ಲೆಕ್ಕಿಸದೇ ಕಾರ್ಯದ ಒತ್ತಡದ ಮಧ್ಯೆಯೂ ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ ಸೇರಿದಂತೆ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಮ್ಮ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ಸಂದರ್ಭದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.

ಕೊವಿಡ್ ಕರ್ತವ್ಯನಿರತ ವಿಜಯಪುರದ  ವೈದ್ಯೆ; ಡಾ. ಮೀನಾಕ್ಷಿ ಮುತ್ತಪ್ಪ ನವರ ಜೊತೆ ಮುಖ್ಯಮಂತ್ರಿ ಸಮಾಲೋಚನೆ
ವರ್ಚ್ಯೂವಲ್‌ ಸಭೆ
preethi shettigar
|

Updated on: May 16, 2021 | 9:01 AM

Share

ವಿಜಯಪುರ: ಕೋವಿಡ್-19 ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಬೆಂಗಳೂರು ಗೃಹ ಕಚೇರಿ ಕೃಷ್ಣದಿಂದ ನಿನ್ನೆ (ಮೇ 15) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊವಿಡ್ ಚಿಕಿತ್ಸೆಯಲ್ಲಿ ನಿರತ ವೈದ್ಯರ ಜೊತೆಗೆ ವರ್ಚ್ಯೂವಲ್‌ ಸಭೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಪುರದ ವೈದ್ಯೆ ಡಾ.ಮೀನಾಕ್ಷಿ ಮುತ್ತಪ್ಪನವರು ಈ ವರ್ಚ್ಯೂವಲ್ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

ಈ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಡಾ.ಮೀನಾಕ್ಷಿ ಮುತ್ತಪ್ಪನವರಿಗೆ ಎಷ್ಟು ದಿನಗಳಿಂದ ಕೊವಿಡ್ ಕರ್ತವ್ಯ ನಿರ್ವಹಿಸುತ್ತಿದ್ದೀರಿ ಎಂಬ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಡಾ. ಮೀನಾಕ್ಷಿ ಮುತ್ತಪ್ಪ ಕಳೆದ ವರ್ಷ ಕೋವಿಡ್-19 ಪ್ರಾರಂಭದ ದಿನದಿಂದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು, ರಕ್ತವನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಿ ಬಂದಂತಹ ರಿಪೋರ್ಟ್​ ಅನ್ನು ಆಧರಿಸಿ ಕೋರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಡಾ ಮೀನಾಕ್ಷಿ ತಿಳಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನೀವು ಕೋರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಮೀನಾಕ್ಷಿ ಮುತ್ತಪ್ಪ ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ನಾಲ್ಕು ತಿಂಗಳ ಹಿಂದೆ ತೆಗೆದುಕೊಂಡಿದ್ದು, 2 ಡೋಸ್ ಪಡೆದಿರುವದಾಗಿ ತಿಳಿಸಿದರು.

ನೀವು ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೀರಿ, ಮನೆಯಲ್ಲಿ ಹೇಗೆ ಇರುತ್ತೀರಾ ಎಂಬ ಸಿಎಂ‌ ಪ್ರಶ್ನೆಗೆ ಉತ್ತರಿಸಿದ ಡಾ. ಮೀನಾಕ್ಷಿ ಮನೆಯಲ್ಲಿ ಐಸೋಲೇಷನ್​ನಲ್ಲಿದ್ದು ಪ್ರತ್ಯೇಕ ರೂಮಿನಲ್ಲಿ ಒಬ್ಬರೇ ಇರುವುದಾಗಿ ಹೇಳಿದರು. ಆಸ್ಪತ್ರೆಯಿಂದ ಬಂದ ಕೂಡಲೇ ಸ್ಯಾನಿಟೈಸರ್ ಮಾಡಿಕೊಂಡು ಸ್ನಾನ ಮಾಡಿ, ನಂತರ ಒಬ್ಬರೇ ಅಡುಗೆಯನ್ನು ಮಾಡಿಕೊಳ್ಳುವುದಾಗಿ ಹೇಳಿದರು ಹಾಗೂ ಮನೆಯ ಸದಸ್ಯರಿಂದ ಅಂತರವನ್ನು ಕಾಯ್ದುಕೊಂಡು ಒಬ್ಬರೇ ಮುನ್ನೆಚ್ಚರಿಕೆಯಿಂದ ಇರುವುದಾಗಿ ತಿಳಿಸಿದರು.

ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಅಪಾಯವನ್ನು ಲೆಕ್ಕಿಸದೇ ಕಾರ್ಯದ ಒತ್ತಡದ ಮಧ್ಯೆಯೂ ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ ಸೇರಿದಂತೆ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಮ್ಮ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ಸಂದರ್ಭದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.

ಇಂತಹ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬದ್ಧವಿದೆ. ಸೋಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಸೋಂಕಿತರು ಹಾಗೂ ತಮ್ಮ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರು, ಬಳ್ಳಾರಿ, ಗುಲ್ಬರ್ಗ, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ಹನ್ನೊಂದು ಜಿಲ್ಲೆಗಳ ಕೋವಿಡ್ ಕರ್ತವ್ಯ ನಿರತ ವೈದ್ಯರ ಜತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಕೇಳಿದರು.

ಕಳೆದ ವರ್ಷದಿಂದಲೇ ಕೊರೊನಾ ಪೀಡಿತರ ಚಿಕಿತ್ಸೆ ಮಾಡುತ್ತಿದ್ದೇನೆ. ಕೊರೊನಾ ಚಿಕಿತ್ಸೆ ನೀಡಲು ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ.‌ ಮನೆಯವರಿಂದ ದೂರವಿದ್ದು ಕೊರೊನಾ ರೋಗಿಗಳ ಸೇವೆ ಮಾಡುವುದರಲ್ಲಿ ಸಂತೃಪ್ತಿ ಕಂಡಿದ್ದೇನೆ. ಸೂಕ್ತ ಮುಂಜಾಗೃತಾ ಕ್ರಮ ಅವಶ್ಯಕವಾಗಿದೆ. ರೋಗಿಗಳು ಗುಣಮುಖರಾಗಿ ಮಂದಹಾಸ ಬೀರಿದಾಗ ಆಗೋ‌ ಖುಷಿಯೇ ಬೇರೆ. ಮುಖ್ಯಮಂತ್ರಿ ಅವರ ಜೊತೆಗೆ ವರ್ಚ್ಯೂವಲ್ ಕಾರ್ಯಕ್ರಮ ಮೂಲಕ‌ ಮಾತನಾಡಿದ್ದು, ಸಂತಸ ತಂದಿದೆ.‌ ಮತ್ತಷ್ಟು ಹೆಚ್ಚು ಕೆಲಸ ಮಾಡುವ ಉತ್ಸಾಹ ಮೂಡಿದೆ. ಕೊರೊನಾ ವಾರಿಯರ್ಸ್ ಕುರಿತು ಸಿಎಂ ಯಡಿಯೂರಪ್ಪ ಅವರು ವಿಶೇಷ ಕಾಳಜಿ ತೆಗೆದುಕೊಳ್ಳೋದಾಗಿ ಹೇಳಿದ್ದು ಮತ್ತಷ್ಟು ಬಲ ತುಂಬಿದಂತಾಗಿದೆ ಎಂದು ಡಾ. ಮೀನಾಕ್ಷಿ ಮುತ್ತಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:

ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ; ವೆಂಟಿಲೇಟರ್​ ಲೆಕ್ಕ ಕೊಡಿ