ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ; ವೆಂಟಿಲೇಟರ್ ಲೆಕ್ಕ ಕೊಡಿ
ಗ್ರಾಮೀಣ ಭಾಗಕ್ಕೂ ಆಕ್ಸಿಜನ್ ಪೂರೈಕೆಗೆ ಆಮ್ಲಜನಕ ಸಾಂದ್ರಕ ಸೇರಿದಂತೆ ಸಾಧ್ಯವಿರುವ ಯೋಜನೆ ರೂಪಿಸಿ. ಆಮ್ಲಜನಕ ಸಾಂದ್ರಕ ಬಳಕೆ ಬಗ್ಗೆ ಆರೋಗ್ಯ ಕೇಂದ್ರ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ದೆಹಲಿ: ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊವಿಡ್ ಟೆಸ್ಟಿಂಗ್ ಪಾಸಿಟಿವಿಟಿ ದರ ಹೆಚ್ಚಿರುವ ಕಡೆ ಸ್ಥಳೀಯ ಕಂಟೇನ್‌ಮೆಂಟ್ ಕಾರ್ಯತಂತ್ರ ಅಗತ್ಯವಾಗಿದೆ. ಕೊವಿಡ್ ಪ್ರಕರಣಗಳನ್ನು ಪಾರದರ್ಶಕವಾಗಿ ಬಹಿರಂಗ ಮಾಡಿ ಮತ್ತು ಗ್ರಾಮೀಣ ಭಾಗಕ್ಕೂ ಆಕ್ಸಿಜನ್ ಪೂರೈಕೆಗೆ ಆಮ್ಲಜನಕ ಸಾಂದ್ರಕ ಸೇರಿದಂತೆ ಸಾಧ್ಯವಿರುವ ಯೋಜನೆ ರೂಪಿಸಿ. ಆಮ್ಲಜನಕ ಸಾಂದ್ರಕ ಬಳಕೆ ಬಗ್ಗೆ ಆರೋಗ್ಯ ಕೇಂದ್ರ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಬಹಳ ಪ್ರಮುಖವಾಗಿ, ಪಿಎಮ್ ಕೇರ್ಸ್ ನಿಧಿಯಿಂದ ಕಳೆದ ವರ್ಷ ರಾಜ್ಯಗಳಿಗೆ ನೀಡಿದ ವೆಂಟಿಲೇಟರ್ಗಳನ್ನು ಕೆಲವು ಕಡೆ ಬಳಸದೇ ಹಾಗೇ ಇಡಲಾಗಿದೆ ಎಂಬ ಸುದ್ದಿ ಬರುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ವೆಂಟಿಲೇಟರ್ ಲೆಕ್ಕ ಪಡೆಯಲು ನಿರ್ಧಾರ ಮಾಡಿದ್ದಾರೆ. ಹಾಗೂ, ವೆಂಟಿಲೇಟರ್ ಬಳಕೆ ಕುರಿತು ಸಮರ್ಪಕ ಟ್ರೇನಿಂಗ್ ಅವಶ್ಯಕತೆ ಇದ್ದರೆ, ಅದಕ್ಕೂ ಏರ್ಪಾಡು ಮಾಡಿ ಎಂದು ಹೇಳಿದ್ದಾರೆ.
ಪ್ರಧಾನಿಗಳಿಗೆ ಅಧಿಕಾರಿಗಳಿಂದ ಪ್ರಸ್ತುತ ಸ್ಥಿತಿ ಬಗ್ಗೆ ವಿವರಣೆ ಕೇಳಿದ್ದು, ಮಾರ್ಚ್ ಆರಂಭದಲ್ಲಿ ವಾರಕ್ಕೆ ಸುಮಾರು 50 ಲಕ್ಷ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ವಾರಕ್ಕೆ ಸುಮಾರು 1.3 ಕೋಟಿ ಪರೀಕ್ಷೆಗಳ ಏರಿಕೆಯಾಗಿದೆ. ದೇಶದಲ್ಲಿ ಪರೀಕ್ಷೆ ವೇಗವಾಗಿ ಏರಿಕೆಯಾಗಿದೆ. ಹೆಚ್ಚು ಕೇಸ್ ಇರುವ ಪ್ರದೇಶದಲ್ಲಿ ಹೆಚ್ಚು ಪರೀಕ್ಷೆ ನಡೆಯಬೇಕು. ಗ್ರಾಮೀಣ ಭಾಗದಲ್ಲಿ ಮೆಡಿಕಲ್ ಆಕ್ಸಿಜನ್ ಸಮರ್ಪಕವಾಗಿ ಹಂಚಿಕೆ ಆಗಲಿ ಮತ್ತು ಮನೆ ಮನೆಗೆ ತೆರಳಿ ಟೆಸ್ಟಿಂಗ್ ಮಾಡಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ದೇಶದಲ್ಲಿ 516 ಜಿಲ್ಲೆಗಳಲ್ಲಿ ಶೇಕಡಾ 10%ರಷ್ಟು ಪಾಸಿಟಿವಿಟಿ ರೇಟ್ ಇದೆ. ಕರ್ನಾಟಕ 30 ಜಿಲ್ಲೆಗಳಲ್ಲಿ 10%ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇದೆ. ಕರ್ನಾಟಕದ ತುಮಕೂರು,ದಕ್ಷಿಣ ಕನ್ನಡದಲ್ಲಿ ಹೆಚ್ಚು ಕೇಸ್ ದಾಖಲಾಗಿದೆ ಹೀಗಾಗಿ ಈ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಬೇಕಾಗಿದೆ ಮತ್ತು ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಹೆಚ್ಚು ಒದಗಿಸಬೇಕು. ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ಇಳಿಯಲು ಅಗತ್ಯವಿರುವ ಎಲ್ಲಾ ಸಾಧನಗಳೊಂದಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಅಧಿಕಾರ ನೀಡಿ ಮತ್ತು ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೌಲಭ್ಯವನ್ನು ಹೆಚ್ಚಿಸಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧಿಕಾರಿಗಳು ಕೋವಿಡ್ ಪರೀಕ್ಷೆ, ಆಮ್ಲಜನಕ ಲಭ್ಯತೆ, ಆರೋಗ್ಯ ಮೂಲಸೌಕರ್ಯ, ವ್ಯಾಕ್ಸಿನೇಷನ್ ಮಾರ್ಗಸೂಚಿಯ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪರಿಸ್ಥಿತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಧಾನಿ ಮೋದಿಗೆ ನೀಡಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ ಟಿಪಿಆರ್ ಹೆಚ್ಚಿರುವ ರಾಜ್ಯಗಳಿಗೆ ಸ್ಥಳೀಯ ಕಂಟೈನ್‌ಮೆಂಟ್ ಕಾರ್ಯತಂತ್ರದ ಅವಶ್ಯಕತೆ ಇದೆ. ಆರ್‌ಟಿಪಿಸಿಆರ್ ಮತ್ತು ಕ್ಷಿಪ್ರ ಪರೀಕ್ಷೆಗಳೆರಡನ್ನೂ ಮಾಡುವುದರೊಂದಿಗೆ, ಕೊವಿಡ್ ಸಕಾರಾತ್ಮಕ ದರವನ್ನು ಹೊಂದಿರುವ ಪ್ರದೇಶಗಳಲ್ಲಿ ಪರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಇನ್ನು ಕೊವಿಡ್ ವಿರುದ್ಧ ಭಾರತದ ಹೋರಾಟಕ್ಕೆ ವಿಜ್ಞಾನಿಗಳು ಮತ್ತು ವಿಷಯ ತಜ್ಞರು ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ಮುಂದುವರಿಯಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಮೇ 26 ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 7 ವರ್ಷ; ಅಂದು ರೈತರಿಂದ ಕರಾಳ ದಿನ ಆಚರಣೆಗೆ ದೆಹಲಿ ರೈತ ನಾಯಕರ ನಿರ್ಧಾರ
Anupam Kher: ಮೋದಿ ಸರ್ಕಾರವನ್ನು ಟೀಕಿಸಿದ ಬಳಿಕ ಮಾರ್ಮಿಕವಾಗಿ ಟ್ವೀಟ್ ಮಾಡಿ ಉಲ್ಟಾ ಹೊಡೆದ ಅನುಪಮ್ ಖೇರ್
Published On - 3:48 pm, Sat, 15 May 21