Anupam Kher: ಮೋದಿ ಸರ್ಕಾರವನ್ನು ಟೀಕಿಸಿದ ಬಳಿಕ ಮಾರ್ಮಿಕವಾಗಿ ಟ್ವೀಟ್ ಮಾಡಿ ಉಲ್ಟಾ ಹೊಡೆದ ಅನುಪಮ್ ಖೇರ್
Narendra Modi: ಮೋದಿ ಸರ್ಕಾರವನ್ನು ಟೀಕಿಸಿದ ನಂತರ ಅನುಪಮ್ ಖೇರ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಬೆಂಬಲಿಗರಿಂದ ವಿರೋಧ ವ್ಯಕ್ತವಾಯಿತು. ಅದನ್ನು ಸರಿಪಡಿಸುವ ಸಲುವಾಗಿಯೇ ಅವರು ಈ ರೀತಿ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ಕೇಳಿಬರುತ್ತಿದೆ.
ಬಾಲಿವುಡ್ ನಟ ಅನುಪಮ್ ಖೇರ್ ಅವರು ಯಾವಾಗಲೂ ನರೇಂದ್ರ ಮೋದಿ ಪರ ವಹಿಸಿಕೊಂಡು ಬರುತ್ತಾರೆ ಎಂಬುದು ಗೊತ್ತಿರುವ ವಿಚಾರ. ಮೋದಿ ಸರ್ಕಾರದ ಎಲ್ಲ ಕೆಲಸಗಳನ್ನು ಬಾಯಿ ತುಂಬ ಹೊಗಳುವ ಅನುಪಮ್ ಖೇರ್ ಅವರು ಟೀಕೆ ಮಾಡಿದ್ದು ತುಂಬ ಕಡಿಮೆ. ಆದರೆ ಇದೇ ಮೊದಲ ಬಾರಿಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾತುಗಳನ್ನು ಆಡಿದ್ದರು. ಪ್ರಸ್ತುತ ಕೊವಿಡ್ ಬಿಕ್ಕಟ್ಟಿನ ಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಎಲ್ಲೋ ಎಡವಿದೆ ಎಂದು ಅವರು ಖಾಸಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.
ಅನುಪಮ್ ಖೇರ್ ಹೇಳಿಕೆಯಿಂದ ಎಲ್ಲರಿಗೂ ಅಚ್ಚರಿ ಆಗಿತ್ತು. ‘ಅನಾರೋಗ್ಯದ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದೆ. ಈ ಪರಿಸ್ಥಿತಿಯನ್ನು ಇನ್ನೊಂದು ಪಕ್ಷದವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಕೂಡ ಸರಿಯಲ್ಲ. ಸದ್ಯ ಆಗುತ್ತಿರುವುದಕ್ಕೆಲ್ಲ ಸರ್ಕಾರವೇ ಕಾರಣ. ಬರೀ ಇಮೇಜ್ ಸೃಷ್ಟಿಸಿಕೊಳ್ಳುವುದಕ್ಕಿಂತ ಜನರ ಪ್ರಾಣ ಕೂಡ ಮುಖ್ಯ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ಅನುಪಮ್ ಖೇರ್ ಹೇಳಿದ್ದರು.
ಅನುಪಮ್ ಖೇರ್ ಅವರ ಈ ಹೇಳಿಕೆ ಕುರಿತಂತೆ ಸಾಕಷ್ಟು ಚರ್ಚೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬಂದಿವೆ. ಅದರ ಬೆನ್ನಲ್ಲೇ ಅನುಪಮ್ ಖೇರ್ ಹೊಸದೊಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮಾರ್ಮಿಕವಾಗಿ ನುಡಿದಿದ್ದಾರೆ. ‘ಕೆಲಸ ಮಾಡುವವರಿಂದ ಮಾತ್ರ ತಪ್ಪುಗಳು ಆಗಲು ಸಾಧ್ಯ. ಏನೂ ಮಾಡದೇ ಇರುವವರು ಬೇರೆಯವರ ತಪ್ಪು ಕಂಡುಹಿಡಿಯುವುದರಲ್ಲೇ ತಮ್ಮ ಜೀವನ ಕಳೆಯುತ್ತಾರೆ’ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
गलती उन्हीं से होती है जो काम करते हैं, निकम्मों की ज़िंदगी तो दूसरों की बुराई खोजने में ही ख़त्म हो जाती है..:)
— Anupam Kher (@AnupamPKher) May 14, 2021
ಮೋದಿ ಸರ್ಕಾರವನ್ನು ಟೀಕಿಸಿದ ಬಳಿಕ ಅನುಪಮ್ ಖೇರ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಬೆಂಬಲಿಗರಿಂದ ವಿರೋಧ ವ್ಯಕ್ತವಾಯಿತು. ಅದನ್ನು ಸರಿಪಡಿಸುವ ಸಲುವಾಗಿಯೇ ಅವರು ಈ ರೀತಿ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ಕೇಳಿಬರುತ್ತಿದೆ. ಆದರೆ ಆ ಬಗ್ಗೆ ಅನುಪಮ್ ಖೇರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಅವರು ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಅವರ ಪತ್ನಿ ಕಿರಣ್ ಖೇರ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಕಿರಣ್ ಆರೋಗ್ಯದ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಆದರೆ ಅದನ್ನೆಲ್ಲ ಅನುಪಮ್ ಖೇರ್ ತಳ್ಳಿ ಹಾಕಿದರು.
ಇದನ್ನೂ ಓದಿ:
ನಿಮ್ಮ ಇಮೇಜ್ಗಿಂತ ಜನರ ಪ್ರಾಣ ಮುಖ್ಯ; ಮೋದಿ ಸರ್ಕಾರವನ್ನು ಟೀಕಿಸಿ ಅಚ್ಚರಿ ಮೂಡಿಸಿದ ಅನುಪಮ್ ಖೇರ್‘
Kirron Kher: ಅನುಪಮ್ ಖೇರ್ ಪತ್ನಿ, ಖ್ಯಾತ ನಟಿ ಕಿರಣ್ ಖೇರ್ ನಿಧನದ ವದಂತಿಗೆ ಬ್ರೇಕ್