ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bangalore Rain) ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಸಂಜೆ ಧಾರಾಕಾರವಾಗಿ ಮಳೆ (Karnataka Rain) ಸುರಿದಿದೆ. ಬಾಗಲಕೋಟೆಯ ಜಮಖಂಡಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ಚರಂಡಿಗಳು ತುಂಬಿ ರಸ್ತೆಯ ಮೇಲೆ ಕೊಳಚೆ ನೀರು ಹರಿದು ಹೋಗಿದೆ. ಜಮಖಂಡಿಯ ಕೆಲವೆಡೆ ಗುಡುಗು ಸಹಿತ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಸಂಜೆ ವೇಳೆ ಮಳೆಯಾಗಿದೆ. ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ಸುಮಾರು ಒಂದು ಗಂಟೆಗಳ ಕಾಲ ಸಿಡಿಲು, ಗುಡುಗು ಸಮೇತ ಭಾರೀ ಮಳೆಯಾಗಿದೆ. ಕೆಲವೆಡೆ ಬಿರುಗಾಳಿ ಮಾದರಿಯಲ್ಲಿ ಬೀಸಿದ ಗಾಳಿ ಮಳೆಗೆ ಜನರು ತತ್ತರಿಸಿದರು. ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಮಳೆಯಾಗಿದೆ.
ಇದನ್ನೂ ಓದಿ: Bangalore Rain: ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ನಾಲ್ಕು ದಿನ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ
ಚಿಕ್ಕಮಗಳೂರು ಜಿಲ್ಲೆಯಲ್ಲೂ ಮುಸ್ಸಂಜೆ ವೇಳೆ ಧಾರಾಕಾರ ಮಳೆಯಾಗಿದ್ದು, ನಗರದಾದ್ಯಂತ ವರುಣನ ಆರ್ಭಟ ಜೋರಾಗಿತ್ತು. ಪರಿಣಾಮ ವಾಹನ ಸವಾರರು ಸಂಚಾರದ ವೇಳೆ ಪರದಾಟ ನಡೆಸಬೇಕಾಯಿತು. ಕಳೆದ 30 ನಿಮಿಷಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಳೆಯಾಗುತ್ತಿದೆ.
ಯಾದಗಿರಿ ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದ್ದು, ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಸಂಚಾರಕ್ಕೆ ಪರದಾಟ ನಡೆಸಿದರು. ಜಿಲ್ಲೆಯಲ್ಲಿ ಕಳೆದ ವಾರದಿಂದ ಆಗಾಗ ಮಳೆ ಸುರಿಯುತ್ತಲೇ ಇದ್ದು, ಇಂದು ಕೂಡ ಮುಂದುವರಿದಿದೆ.
ಬೆಂಗಳೂರು ನಗರದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇಂದು ಸಂಜೆ ಕೆಲವೆಡೆ ಭಾರೀ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ರಿಂಗ್ ರೋಡ್ನ ವೀರಭದ್ರೇಶ್ವರ ನಗರದಲ್ಲಿ ಮನೆಯೊಂದು ಕುಸಿದುಬಿದ್ದಿದ್ದು, ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಜಖಂಗೊಂಡಿವೆ. ಶಾಂತಿನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದ್ದು, ಕೆಲವೆಡೆ ತುಂತುರು ಮಳೆಯಾಗುತ್ತಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಉಂಟಾಗಿ ವಾಯುಭಾರ ಕುಸಿತಗೊಂಡಿದ್ದು, ಇದರ ಪರಿಣಾಮ ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತವು ನಾಳೆ ಮತ್ತು ನಾಡಿದ್ದು ತೀವ್ರವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ