ಮೈಸೂರು: ಕೊರೊನಾ ಮಾನವ ಕುಲವನ್ನೇ ಅಲುಗಾಡಿಸಿದೆ. ಮನುಷ್ಯರನ್ನ ಬಲಿ ಪಡೆಯುತ್ತಾ ಅಟ್ಟಹಾಸ ಮೆರೆಯುತ್ತಿದೆ. ಈ ನಡುವೆ ಕೊರೊನಾ ಬಗ್ಗೆ ಮತ್ತೆ ನಾನಾ ಪ್ರಶ್ನೆಗಳು ಎದ್ದಿವೆ. ಕೊರೊನಾ ಮಹಾಮಾರಿ ಎರಡನೇ ಅಲೆ ಜನರನ್ನು ಮಾತ್ರವಲ್ಲ ಪ್ರಾಣಿಗಳನ್ನೂ ಕಾಡುತ್ತಾ? ಪ್ರಾಣಿಗಳ ಪ್ರಾಣಕ್ಕೂ ಸಂಚಕಾರ ತರುತ್ತಾ? ಅನ್ನೋ ಪ್ರಶ್ನೆಗಳು ಎದ್ದಿವೆ. ಹೀಗಾಗಿ ರಾಜ್ಯದ ಮೃಗಾಲಯದ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ರಾಜ್ಯದ 5 ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆಗಳಿವೆ. ಯಾವಾಗ ಹೈದರಾಬಾದ್ ಮೃಗಾಲಯದ ಸಿಂಹಗಳಿಗೆ ಕೊರೊನಾ ಮಹಾಮಾರಿ ವಕ್ಕರಿಸಿತೋ ರಾಜ್ಯದ ಮೃಗಾಲಯದ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಪ್ರತಿದಿನ ಹುಲಿ, ಸಿಂಹ ಹಾಗೂ ಚಿರತೆಗಳ ಮೇಲೆ ನಿಗಾ ಇಡ್ತಿದ್ದಾರೆ. ಪ್ರತಿದಿನ ವೈದ್ಯರು ಪ್ರಾಣಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಸದ್ಯ ರಾಜ್ಯದ ಮೃಗಾಲಯದಲ್ಲಿರುವ ಯಾವ ಪ್ರಾಣಿಗಳಲ್ಲೂ ಮಹಾಮಾರಿಯ ರೋಗ ಲಕ್ಷಣಗಳು ಕಂಡುಬಂದಿಲ್ಲ. ಇನ್ನು ಅಚ್ಚರಿ ಅಂದ್ರೆ ಪ್ರಾಣಿಗಳಿಗೆ ಕೊರೊನಾ ಸೋಂಕು ವಕ್ಕರಿಸಿದ್ರೆ ಪ್ರಾಣಿಗಳು ಸಹ ಕೆಮ್ಮಲು ಶುರು ಮಾಡುತ್ತವೆ. ಮನುಷ್ಯರಂತೆ ಪ್ರಾಣಿಗಳಿಗೂ ಬೇಗ ಸುಸ್ತಾಗುತ್ತೆ. ಅಷ್ಟೇ ಅಲ್ಲ ಊಟವನ್ನೂ ಮಾಡುವುದಿಲ್ಲ. ಈ ಎಲ್ಲಾ ಮಾಹಿತಿಗಳನ್ನ ಹೈದರಾಬಾದ್ ಮೃಗಾಲಯದ ಅಧಿಕಾರಿಗಳಿಂದ ತರಿಸಿಕೊಳ್ಳಲಾಗಿದೆ. ಇದರ ಆಧಾರದಲ್ಲಿ ಪ್ರಾಣಿಗಳನ್ನ ನಿರಂತರವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಹೈದರಾಬಾದ್‌ನಲ್ಲಿ ಪ್ರಾಣಿಗಳಿಗೆ ಸೋಂಕು ಹೇಗೆ ತಗುಲಿತು ಅನ್ನೋ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಪ್ರಾಣಿಗಳನ್ನ ನೋಡಿಕೊಳ್ಳುವವರಿಂದಲೇ ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪ್ರಾಣಿಗಳನ್ನ ನೋಡಿಕೊಳ್ಳುವವರಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್ ಆಗಿ ಸೂಚಿಸಲಾಗಿದೆ. ಒಟ್ಟಾರೆ ಮಹಾಮಾರಿಯ ಎರಡನೇ ಅಲೆ ಮನುಷ್ಯರ ಜೊತೆ ಪ್ರಾಣಿಗಳಿಗೂ ವ್ಯಾಪಾಕವಾಗಿ ಹರಡಿದ್ರೆ ಮುಂದಿನ ಪರಿಸ್ಥಿತಿ ಊಹಿಸಲೂ ಸಾಧ್ಯವಾಗೋದಿಲ್ಲ.
ಇದನ್ನೂ ಓದಿ: ಹೈದರಾಬಾದ್ ಮೃಗಾಲಯದಲ್ಲಿರುವ 8 ಸಿಂಹಗಳಿಗೆ ಕೊರೊನಾ ಸೋಂಕು; ದೇಶದಲ್ಲೇ ಮೊದಲ ಪ್ರಕರಣ ಇದು
Published On - 7:02 am, Wed, 12 May 21