ಎಚ್‌ಎಲ್‌ಎಲ್ ಲೈಫ್‌ಕೇರ್ ನೇಮಕಾತಿ: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೇರ ಸಂದರ್ಶನ
HLL ಲೈಫ್‌ಕೇರ್ ಲಿಮಿಟೆಡ್ ಕರ್ನಾಟಕದಲ್ಲಿ ಫಾರ್ಮಾಸಿಸ್ಟ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನ NIMHANS, ಅಮೃತ್ ಫಾರ್ಮಸಿಗಳು ಮತ್ತು ಜನ ಸಂಜೀವಿನಿ ಮಳಿಗೆಗಳಲ್ಲಿ ನಿಗದಿತ ಅವಧಿಯ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. D.Pharm/B.Pharm ಅರ್ಹತೆಯುಳ್ಳ ಫ್ರೆಶರ್‌ಗಳು ಮತ್ತು ಅನುಭವಿ ಅಭ್ಯರ್ಥಿಗಳು ಅಕ್ಟೋಬರ್ 2 ರಂದು ಬೆಂಗಳೂರಿನ NIMHANS ಆವರಣದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಇದು ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡುವ ಉತ್ತಮ ಅವಕಾಶ.

ಕೇಂದ್ರ ಸರ್ಕಾರದ ಉದ್ಯಮವಾದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ (HLL Lifecare Limited) ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನದ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನ ನಿಮ್ಹಾನ್ಸ್ (NIMHANS) ಆಸ್ಪತ್ರೆ, ಬಳ್ಳಾರಿಯ NMDC ದೋಣಿಮಲೈ ಟೌನ್‌ಶಿಪ್‌ನಲ್ಲಿರುವ ಅಮೃತ್ (AMRIT) ಫಾರ್ಮಸಿಗಳು ಹಾಗೂ ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ‘ಜನ ಸಂಜೀವಿನಿ’ ಜನರಿಕ್ ಔಷಧ ಮಳಿಗೆಗಳಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್ ಹುದ್ದೆಗಳನ್ನು ನಿಗದಿತ ಅವಧಿಯ ಗುತ್ತಿಗೆ (Fixed Term Contract) ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಫಾರ್ಮಸಿ ರಂಗದಲ್ಲಿ ಅನುಭವ ಹೊಂದಿರುವ ಮತ್ತು ಫ್ರೆಷರ್ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಇದು ಉತ್ತಮ ಅವಕಾಶವಾಗಿದೆ.
ಹುದ್ದೆಗಳು ಮತ್ತು ಅನುಭವದ ವಿವರ:
ಅಭ್ಯರ್ಥಿಗಳ ಅನುಭವಕ್ಕೆ ಅನುಗುಣವಾಗಿ ವಿವಿಧ ಶ್ರೇಣಿಯ ಹುದ್ದೆಗಳನ್ನು ವಿಂಗಡಿಸಲಾಗಿದೆ. D.Pharm ಅಥವಾ B.Pharm ಪೂರ್ಣಗೊಳಿಸಿದ ಫ್ರೆಷರ್ಸ್‌ಗಳು ಅಸಿಸ್ಟೆಂಟ್ ಫಾರ್ಮಾಸಿಸ್ಟ್ (Assistant Pharmacist) ಹುದ್ದೆಗೆ ಅರ್ಜಿ ಸಲ್ಲಿಸಬಹುದು. ರಿಟೇಲ್ ಫಾರ್ಮಸಿ ವಿಭಾಗದಲ್ಲಿ 2 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಫಾರ್ಮಾಸಿಸ್ಟ್ ಗ್ರೇಡ್ IV (Pharmacist Grade IV) ಹುದ್ದೆಗೆ ಮತ್ತು 4 ವರ್ಷಗಳ ಅನುಭವ ಹೊಂದಿರುವವರು ಫಾರ್ಮಾಸಿಸ್ಟ್ ಗ್ರೇಡ್ III (Pharmacist Grade III) ಹುದ್ದೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಇದಲ್ಲದೆ, ರಿಟೇಲ್ ಫಾರ್ಮಸಿಯಲ್ಲಿ ಕನಿಷ್ಠ 6 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಫಾರ್ಮಾಸಿಸ್ಟ್ ಗ್ರೇಡ್ II (Pharmacist Grade II) ಹಾಗೂ 8 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ಅಭ್ಯರ್ಥಿಗಳು ಫಾರ್ಮಾಸಿಸ್ಟ್ ಗ್ರೇಡ್ I (Pharmacist Grade I) ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
ವಯೋಮಿತಿ ಮತ್ತು ನೋಂದಣಿ ಷರತ್ತುಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 37 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, 01.10.2026 ಕ್ಕೆ ಅನ್ವಯವಾಗುವಂತೆ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳು ಕರ್ನಾಟಕ ಫಾರ್ಮಸಿ ಕೌನ್ಸಿಲ್ (Karnataka Pharmacy Council) ನೀಡುವ ಚಾಲ್ತಿಯಲ್ಲಿರುವ ನೋಂದಣಿ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ನೋಂದಣಿ ಪ್ರಮಾಣಪತ್ರವಿಲ್ಲದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ನೇರ ಸಂದರ್ಶನದ ದಿನಾಂಕ ಮತ್ತು ಸ್ಥಳದ ಮಾಹಿತಿ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 02.10.2026 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯೊಳಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಆವರಣದಲ್ಲಿರುವ ಅಮೃತ್ ಫಾರ್ಮಸಿಗೆ (AMRIT Pharmacy, Near OPD Premises, NIMHANS Hospital, Bengaluru – 560029) ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಅಧಿಕೃತ ವೆಬ್‌ಸೈಟ್ ಮತ್ತು ಸಂಪರ್ಕ ವಿವರಗಳು:
ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ತಿಳಿಯಲು ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
- ಅಧಿಕೃತ ವೆಬ್‌ಸೈಟ್: www.lifecarehll.com/careers
- ಸಂಪರ್ಕ ಸಂಖ್ಯೆ: 9188401559
- ಇಮೇಲ್ ವಿಳಾಸ: rbdrecruitment@lifecarehll.com
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




