ಬೆಂಗಳೂರು: 2 ದಿನ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಗಾವಿ, ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ. ನಿನ್ನೆ ಬೆಂಗಳೂರು, ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಅಮಿತ್ ಶಾ, ಇಂದು ಸಹ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಗ್ಗೆ 10.15ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮಕ್ಕೆ ತೆರಳಲಿದ್ದಾರೆ. ಅಲ್ಲಿ ನಿರಾಣಿ ಶುಗರ್ಸ್ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಖಾನೆ ಪುನಾರಂಭಕ್ಕೂ ಅಮಿತ್ ಶಾ ಚಾಲನೆ..
ಸಚಿವ ಮುರುಗೇಶ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಎಥೆನಾಲ್ ಉತ್ಪಾದನೆ ಹೆಚ್ಚಿಸುತ್ತಿದೆ. ಈ ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಡಿಗಲ್ಲು ಹಾಕಲಿದ್ದಾರೆ. ಜೊತೆಗೆ ಕೆರಕಲಮಟ್ಟಿಯಲ್ಲಿ ಕಳೆದೊಂದು ದಶಕದಿಂದ ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆಯನ್ನ ನಿರಾಣಿ ಸಂಸ್ಥೆ ಖರೀದಿಸಿದ್ದು, ಕಾರ್ಖಾನೆ ಪುನಾರಂಭಕ್ಕೂ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಹಲವು ಭಾಗವಹಿಸಲಿದ್ದಾರೆ. 12 ಗಂಟೆಗೆ ಕಾರ್ಯಕ್ರಮ ಮುಗಿಸಿ ಇಲ್ಲಿಂದ ಬೆಳಗಾವಿಗೆ ತೆರಳಲಿದ್ದಾರೆ.
ಮಧ್ಯಾಹ್ನ ಒಂದು ಗಂಟೆಗೆ ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿ, ಭೋಜನ ಮಾಡಿ ವಿಶ್ರಾಂತಿ ಪಡೆಯಲಿದ್ದಾರೆ. ಮಧ್ಯಾಹ್ನ 3.30ರ ಸುಮಾರಿಗೆ ದಿವಂಗತ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಜನಸವೇಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5.30ರ ಸುಮಾರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯ ಶತಮಾನೋತ್ಸವ ಭವನದಲ್ಲಿ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಸಂಜೆ 7.30ರ ಸುಮಾರಿಗೆ ದೆಹಲಿ ವಾಪಸ್ ಆಗಲಿದ್ದಾರೆ.
ಎರಡು ದಿನ ಕರ್ನಾಟಕ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಇಂದು ಬೆಳಗಾವಿಯಲ್ಲಿ ನಡೆಯಲಿರೋ ಬಿಜೆಪಿ ನಾಯಕರ ಸಭೆಯಲ್ಲಿ ಲೋಕಸಭಾ ಬೈ ಎಲೆಕ್ಷನ್ ಕುರಿತು ಚರ್ಚಿಸೋ ಸಾಧ್ಯತೆಗಳಿದ್ದು, ಅಭ್ಯರ್ಥಿ ಯಾರಾಗಬಹುದು ಅನ್ನೋ ಸುಳಿವು ಸಿಗೋ ಸಾಧ್ಯತೆ ಇದೆ.
Published On - 7:26 am, Sun, 17 January 21