ಕ್ಲಿನಿಕ್​ ಮೇಲೆ ದಾಳಿ ಮಾಡಿದ್ದಕ್ಕೆ MTB ಆಪ್ತನಿಂದ ಧಮ್ಕಿ.. ಮನನೊಂದು ಹೊಸಕೋಟೆ THO ನಾಪತ್ತೆ

| Updated By: ಸಾಧು ಶ್ರೀನಾಥ್​

Updated on: Dec 17, 2020 | 5:46 PM

ನಕಲಿ ವೈದ್ಯನ ಕ್ಲಿನಿಕ್​ ಮೇಲೆ ದಾಳಿ ಮಾಡಿ 10 ಲಕ್ಷ ರೂ. ಮೌಲ್ಯದ ಔಷಧಿ ಜಪ್ತಿ ಮಾಡಿದ್ದಕ್ಕೆ THO ಮಂಜುನಾಥ್​ಗೆ ಬೆದರಿಕೆ ಹಾಕಿರುವುದರ ಮಾಹಿತಿ ಲಭ್ಯವಾಗಿದೆ. ಇದರಿಂದ, ಮನನೊಂದ ಮಂಜುನಾಥ್​ ಇದೀಗ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಕ್ಲಿನಿಕ್​ ಮೇಲೆ ದಾಳಿ ಮಾಡಿದ್ದಕ್ಕೆ MTB ಆಪ್ತನಿಂದ ಧಮ್ಕಿ.. ಮನನೊಂದು ಹೊಸಕೋಟೆ THO ನಾಪತ್ತೆ
THO ಮಂಜುನಾಥ್​ (ಎಡ); MTB ನಾಗರಾಜ್​ ಆಪ್ತ ಜಯರಾಜ್ (ಬಲ)
Follow us on

ಹೊಸಕೋಟೆ: ನಕಲಿ ವೈದ್ಯನ ಕ್ಲಿನಿಕ್​ ಮೇಲೆ ದಾಳಿ ಮಾಡಿ 10 ಲಕ್ಷ ರೂ. ಮೌಲ್ಯದ ಔಷಧಿ ಜಪ್ತಿ ಮಾಡಿದ್ದಕ್ಕೆ THO ಮಂಜುನಾಥ್​ಗೆ ಬೆದರಿಕೆ ಹಾಕಿರುವುದರ ಮಾಹಿತಿ ಲಭ್ಯವಾಗಿದೆ. ಇದರಿಂದ, ಮನನೊಂದ ಮಂಜುನಾಥ್​ ಇದೀಗ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಅಂಗ ಹಾಗೆ, ಕಳೆದ ಕೆಲವು ದಿನಗಳ ಹಿಂದೆ, THO ಮಂಜುನಾಥ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ನಕಲಿ ವೈದ್ಯನ ಕ್ಲಿನಿಕ್​ ಮೇಲೆ ದಾಳಿ ನಡೆಸಿದ್ದರು. ಇದೇ ವೇಳೆ, 10 ಲಕ್ಷ ರೂ. ಮೌಲ್ಯದ ಔಷಧಿ ಸಹ ಜಪ್ತಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್​ಸಿ MTB ನಾಗರಾಜ್​ ಆಪ್ತನಾದ ಜಯರಾಜ್ ಎಂಬಾತ ಜಪ್ತಿ ಮಾಡಿದ್ದ ಔಷಧವನ್ನು ವಾಪಸ್ ನೀಡುವಂತೆ ಒತ್ತಾಯಿಸಿ ಧಮ್ಕಿ ಹಾಕಿದ್ದನಂತೆ. ಇದರ ಬೆನ್ನಲ್ಲೇ, ಮಂಜುನಾಥ್​ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. THOಗೆ ಧಮ್ಕಿ ಹಾಕುವ ಆಡಿಯೋ ಟಿವಿ9ಗೆ ಲಭ್ಯವಾಗಿದೆ.

ಜಯರಾಜ್ ಪೊಲೀಸ್​ ವಶಕ್ಕೆ
ಇತ್ತ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಜಯರಾಜ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೊಸಕೋಟೆ ಪೊಲೀಸರಿಂದ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಹೊಸಕೋಟೆ THO ಮಂಜುನಾಥ್ ಕಚೇರಿಗೆ 25 ಜನರೊಂದಿಗೆ ನುಗ್ಗಿದ್ದ ಪರಿಷತ್ ಸದಸ್ಯ MTB ನಾಗರಾಜ್ ಆಪ್ತ ಜಯರಾಜ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದನಂತೆ. ಜೊತೆಗೆ, ಜಪ್ತಿ ಮಾಡಿದ್ದ ಔಷಧವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದನಂತೆ.

ಜಪ್ತಿ ಮಾಡಿದ್ದ ಔಷಧ ನೀಡುವುದಕ್ಕೆ ನಿರಾಕರಿಸಿದ ಹಿನ್ನೆಲೆ ಜಯರಾಜ್ & ಗ್ಯಾಂಗ್ ಬಲವಂತವಾಗಿ ಔಷಧ ಹೊತ್ತೊಯ್ದಿದ್ದರು ಎಂದು ಹೇಳಲಾಗಿದೆ. ಇದರಿಂದ ಸಾಕಷ್ಟು ಮನನೊಂದಿದ್ದ ಮಂಜುನಾಥ್ ಕುಟುಂಬಸ್ಥರಿಗೂ ತಿಳಿಸದೆ ಕಳೆದ 2 ದಿನದಿಂದ ನಾಪತ್ತೆಯಾಗಿದ್ದಾರೆ.

ಇತ್ತ, ತಮ್ಮ ನೆಚ್ಚಿನ ಅಧಿಕಾರಿ ನಾಪತ್ತೆಯಾಗಿದ್ದಕ್ಕೆ ಅವರ ಕಚೇರಿ ಸಿಬ್ಬಂದಿ, ಕುಟುಂಬ ಸದಸ್ಯರಲ್ಲಿ ಆತಂಕ ಮೂಡಿದೆ. ಹಾಗಾಗಿ, ಇಂದು ಮಂಜುನಾಥ್​ರ ಕಚೇರಿ ಸಿಬ್ಬಂದಿ ಜಿಲ್ಲಾಡಳಿತ ಭವನದ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಆಶಾ ಕಾರ್ಯಕರ್ತೆಯರು, ಸ್ಟಾಫ್ ನರ್ಸ್​ಗಳಿಂದ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯಿರುವ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಅಧಿಕಾರಿಗಾಗಿ ಕಣ್ಣೀರು ಹಾಕಿದ ಆರೋಗ್ಯ ಇಲಾಖೆ ಸಿಬ್ಬಂದಿ
ಕಾಣೆಯಾಗಿರುವ ಅಧಿಕಾರಿಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಕಣ್ಣೀರು ಸಹ ಹಾಕಿದರು. ಮಂಜುನಾಥ್​ ಕ್ಷೇಮವಾಗಿ ಬರುವಂತೆ ಮಹಿಳಾ ಸಿಬ್ಬಂದಿ ಕಣ್ಣಿರು ಹಾಕಿದರು. ಎಲ್ಲರನ್ನು ಕುಟುಂಬದವರಂತೆ ನಗುನಗುತ್ತಾ ಮಾತಾಡಿಸುತ್ತಿದ್ದ ಅಧಿಕಾರಿ ನಾಪತ್ತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೂಡಲೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು.

ಜೊತೆಗೆ, ಮಂಜುನಾಥ್​ ಮನೆಗೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಭೇಟಿಕೊಟ್ಟು ಕುಟುಂಬಸ್ಥರಿಗೆ ಧೈರ್ಯ ತುಂಬಿಸಿದರು. ಹೊಸಕೋಟೆಯ ಮೇಡಹಳ್ಳಿ ಬಳಿಯಿರುವ THO ಮನೆಗೆ ಭೇಟಿ ನೀಡಿದರು.

ಇದಲ್ಲದೆ, ಎಸ್​.ಪಿ ರವಿ.ಡಿ ಚನ್ನಣ್ಣನವರ್ 15 ರ ಸಂಜೆಯಿಂದ ಆರೋಗ್ಯಾಧಿಕಾರಿ ಮಂಜುನಾಥ್ ಫೋನ್ ಸ್ವಿಚ್ ಆಫ್​ ಆಗಿದೆ. ನಿನ್ನೆ THO ನಾಪತ್ತೆ ಬಗ್ಗೆ ಅವರ ಸಂಬಂಧಿ ನಾಗೇಶ್ ಎಂಬುವವರು ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ಅವರನ್ನ ಪತ್ತೆ ಹಚ್ಚಲು ಹತ್ತು ತಂಡಗಳ ರಚನೆ ಮಾಡಿದ್ದೀವಿ. ಜೊತೆಗೆ, ಕ್ಲಿನಿಕ್​ಗಳ ದಾಳಿ ಸಂಬಂಧ ಇವರಿಗೆ ಬೆದರಿಕೆ ಹಾಕಿದ್ದ ಜಯರಾಜ್ ಎಂಬಾತನ ವಿಚಾರಣೆ ಮಾಡಿದ್ದೀವಿ ಎಂದು ಹೇಳಿದರು. ಈ ನಡುವೆ, ಇಂದು ಬೆಳಗ್ಗೆ ಚನ್ನಪಟ್ಟಣದಲ್ಲಿ THO ಮಂಜುನಾಥ್​ ಫೋನ್ ಆನ್ ಆಗಿದೆ. ಹೀಗಾಗಿ, ಅವರು ಸಿಕ್ಕ ನಂತರ, ಇನ್ನಷ್ಟು ಮಾಹಿತಿಗಳು ಹೊರ ಬರಲಿದೆ ಎಂದು ರವಿ.ಡಿ ಚನ್ನಣ್ಣನವರ್ ಹೇಳಿದರು.

ವೈದ್ಯನ ಕೈಗುಣ ಚೆನ್ನಾಗಿದೆ ಅಂತಾ.. ಕ್ಲಿನಿಕ್​ ಎದುರು ಸಾಲುಗಟ್ಟಿ ನಿಲ್ತಿದ್ದ ರೋಗಿಗಳಿಗೆ ಸಿಕ್ತು ದೊಡ್ಡ ಶಾಕ್​!