
ಬೆಂಗಳೂರು, (ಆಗಸ್ಟ್ 01): ಕಳೆದ ಲೋಕಸಭಾ ಚುನಾವಣೆ (Loksabha Election) ವೇಳೆ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಹಾಸನದ(Hassan) ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಪೈಕಿ ಒಂದು ಕೇಸಿನ ತೀರ್ಪು ಇಂದು (ಆಗಸ್ಟ್ 01) ಪ್ರಕಟವಾಗಿದೆ. ಕೆ.ಆರ್ ನಗರದ ಮಹಿಳೆ ನೀಡಿದ್ದ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಇನ್ನು ಈ ಪ್ರಕರಣದಲ್ಲಿ ಎಷ್ಟು ಪ್ರಮಾಣದ ಶಿಕ್ಷೆಯಾಗಲಿದೆ ಎನ್ನುವುದನ್ನು ನಾಳೆ (ಆಗಸ್ಟ್ 02) ಕೋರ್ಟ್ ತಿಳಿಯಲಿದೆ. ಈ ಪ್ರಕರಣ ಮಾತ್ರವಲ್ಲದೇ ಇನ್ನೂ ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳಿವೆ. ಹೊಳೆನರಸೀಪುರ, ಹಾಸನ ಅತ್ಯಾಚಾರ ಪ್ರಕರಣ ಹಾಗೂ ಐಟಿ ಆ್ಯಕ್ಟ್ ಕೇಸ್ ಬಾಕಿ ಇವೆ.
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವೆಸಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿ ಇವೆ. ಇವುಗಳ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.
2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಕಳೆದ 14 ತಿಂಗಳಿನಿಂದ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ನಾಲ್ಕು ಪ್ರಕರಣಗಳಲ್ಲಿ ಕೆ.ಆರ್, ನಗರ ಕೇಸಿನಲ್ಲಿ ಪ್ರಜ್ವಲ್ ದೋಷಿಯಾಗಿದ್ದು, ಇನ್ನುಳಿದಂತೆ ಹೊಳೆನರಸೀಪುರ, ಹಾಸನ ಅತ್ಯಾಚಾರ ಪ್ರಕರಣದ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ವಿಚಾರಣೆ ಹಂತದಲ್ಲಿದೆ. ಇನ್ನು ವಿಡಿಯೋ ಕಾಲ್ ಮೂಲಕ ಕಿರುಕುಳ ನೀಡಿದ್ದ ಐಟಿ ಆ್ಯಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿವೆ.
2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಸುಪ್ರೀಂಕೋರ್ಟ್, ಹೈಕೋರ್ಟ್, ಕೆಳ ನ್ಯಾಯಾಲಯಗಳಲ್ಲಿ ಜಾಮೀನು ಅರ್ಜಿ ವಜಾಗೊಂಡಿವೆ. ಹೀಗಾಗಿ ಪ್ರಜ್ವಲ್ ಕಳೆದ 14 ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಈಗ ಒಂದು ಪ್ರಕರಣದಲ್ಲಿ ದೋಷಿಯಾಗಿರುವ ಪ್ರಜ್ವಲ್ ರೇವಣ್ಣ, ಇನ್ನುಳಿದಂತೆ ವಿಚಾರಣೆ ಹಂತದಲ್ಲಿರುವ ಮೂರು ಕೇಸಿನಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಯಾವ ತೀರ್ಪು ನೀಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.