Prajwal Revanna
ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಕೇವಲ 29 ವರ್ಷ ವಯಸ್ಸಿನಲ್ಲಿ ಸಂಸದರಾದವರು. ದೇಶದ ಮೂರನೇ ಅತ್ಯಂತ ಕಿರಿಯ ಸಂಸದ ಎಂಬ ದಾಖಲೆ ಬರೆದವರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮೊಮ್ಮಕ್ಕಳಲ್ಲಿ ಪ್ರಜ್ವಲ್ ರೇವಣ್ಣ ಒಬ್ಬರು. ದೇವೇಗೌಡರ ಹಿರಿಯ ಮಗ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಪ್ರಜ್ವಲ್ ತಂದೆ. ಹಾಸನ ಜಿಲ್ಲೆಯವರಾದ ಪ್ರಜ್ವಲ್ ರೇವಣ್ಣ ಹುಟ್ಟಿದ್ದು 1990 ಆಗಸ್ಟ್ 5ರಂದು. ರಾಜಕೀಯ ಹಿನ್ನೆಲೆಯ ಕುಟುಂಬದ ಸದಸ್ಯರಾದ ಅವರು ನಿರೀಕ್ಷೆಯಂತೆ ರಾಜಕೀಯವಾಗಿ ಬೇಗ ಮುನ್ನೆಲೆಗೆ ಬಂದಿದ್ದಾರೆ. ಬೆಂಗಳೂರಿನ ಬಿಐಟಿಯಲ್ಲಿ 2014ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ ಅವರು ಆಸ್ಟ್ರೇಲಿಯಾಗೆ ಉನ್ನತ ವ್ಯಾಸಂಗಕ್ಕೆ ಹೋಗಿದ್ದರು. 2015ರಲ್ಲಿ ರಾಜಕೀಯ ವೃತ್ತಿಜೀವನ ಬಯಸಿ ಅವರು ಆಸ್ಟ್ರೇಲಿಯಾದಲ್ಲಿ ಓದನ್ನು ಅರ್ಧಕ್ಕೆ ಬಿಟ್ಟು ಹಾಸನಕ್ಕೆ ಬಂದಿದ್ದರು. 2018ರಲ್ಲಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಪಕ್ಷದಿಂದ ಟಿಕೆಟ್ ನಿರಾಕರಿಸಲಾಯಿತು. 2019ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದರು.