ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಭರ್ಜರಿ ಬಹುಮಾನ!
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ಕರ್ನಾಟಕ ಮಾತ್ರವಲ್ಲ ದೇಶದಲ್ಲೂ ಭಾರೀ ಸದ್ದು ಮಾಡಿದ್ದು, ಸದ್ಯ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ವಿಷಯ ಏನಂದ್ರೆ ಈ ಪ್ರಕರಣಗಳನ್ನು ಸಮರ್ಥವಾಗಿ ತನಿಖೆ ನಡೆಸಿ ಅಪರಾಧವನ್ನು ಸಾಬೀತು ಮಾಡಿ ಶಿಕ್ಷೆಕೊಡಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಭರ್ಜರಿ ಬಹುಮಾನ ಘೋಷಿಸಲಾಗಿದೆ.

ಬೆಂಗಳೂರು, (ಜನವರಿ 22): ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಅಪರಾಧ ಸಾಬೀತುಪಡಿಸಿದ ತನಿಖಾ ತಂಡಕ್ಕೆ ಗೃಹ ಇಲಾಖೆ ನಗದು ಬಹುಮಾನ ಘೋಷಿಸಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ತನಿಖಾ ತಂಡದ 30 ಅಧಿಕಾರಿ, ಸಿಬ್ಬಂದಿಗೆ 25 ಲಕ್ಷ ರೂ. ನಗದು ಬಹುಮಾನ ಘೋಷಣೆ ಮಾಡಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ತನಿಖಾ ತಂಡಕ್ಕೆ 25 ಲಕ್ಷ ರೂ. ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಗೆ ಸೇರಿದಂತೆ ವಿವಿಧ ದರ್ಜೆ ಅಧಿಕಾರಿ, ಸಿಬ್ಬಂದಿಗೆ ಒಟ್ಟು ಒಟ್ಟಾರೆ 35 ಲಕ್ಷ ರೂ. ಬಹುಮಾನವನ್ನು ಘೋಷಿಸಿದೆ.
ಯಾರ್ಯಾರಿಗೆ ಎಷ್ಟು ಹಣ?
ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ, ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್‌ಗಳಾದ ರಾವ್ ಗಣೇಶ್ ಜನಾರ್ದನ್, ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ 30 ಮಂದಿ ಅಧಿಕಾರಿಗಳು, ಸಿಬ್ಬಂದಿಗೆ ಈ 25 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ.
ಇದನ್ನೂ ನೋಡಿ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ಮಾಡಿದ ಅಧಿಕಾರಿಗಳಿಗೆ ಬಂಪರ್ ಗಿಫ್ಟ್ ಘೋಷಿಸಿದ ಗೃಹ ಸಚಿವ
ಡಿಜಿ ಮತ್ತು ಐಜಿಪಿ ದರ್ಜೆ ಅಧಿಕಾರಿಗಳಿಗೆ ತಲಾ 20 ಸಾವಿರದಂತೆ ಒಟ್ಟು 25 ಲಕ್ಷ ರು, ಡಿಜಿಪಿ, ಎಡಿಜಿಪಿ ಮತ್ತು ಐಜಿಪಿ(ರಾಜ್ಯ ವ್ಯಾಪ್ತಿ) ಅಧಿಕಾರಿಗಳಿಗೆ ತಲಾ 8 ಸಾವಿರದಂತೆ ಒಟ್ಟು 3 ಲಕ್ಷ ರು, ಇಲಾಖೆಯ ಇತರೆ ಅಧಿಕಾರಿ-ಸಿಬ್ಬಂದಿಗೆ ತಲಾ 5 ಸಾವಿರದಂತೆ ಒಟ್ಟು 2 ಲಕ್ಷ ರು. ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ 5 ಸಾವಿರದಂತೆ ಒಟ್ಟು 1 ಲಕ್ಷ ನಗದನ್ನು ಒಳ ಆಡಳಿತ ಇಲಾಖೆ ಮಂಜೂರು ಮಾಡಿದೆ.
ಆದೇಶದಲ್ಲೇನಿದೆ?
ಹಾಸನ ಜಿಲ್ಲಾ ಮಾಜಿ ಸಂಸದ ಪುಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಪುಕರಣಗಳ ತನಿಖೆ ಕುರಿತು ರಚಿಸಿರುವ ವಿಶೇಷ ತನಿಖಾ ತಂಡವು ಸದರಿರವರುಗಳ ವಿರುದ್ಧ ಒಟ್ಟು 04 ಪಕರಣ ಮತ್ತು ಹೆಚ್.ಡಿ ರೇವಣ್ಣ ರವರ ವಿರುದ್ಧ ದಾಖಲಾಗಿರುವ ಒಟ್ಟು 01 ಪುಕರಣಗಳ ತನಿಖಾ ಕಾಲದಲ್ಲಿ ಸಮರ್ಪಕವಾಗಿ ತನಿಖೆ ಕೈಗೊಂಡು ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಒಟ್ಟು 05 ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಿದ್ಧಪಡಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ಸದರಿ ಪುಕರಣಗಳ ಪೈಕಿ ಸಿ.ಐ.ಡಿ. ಸೈಬರ್ ಕ್ರೈಂ ಪೊಲೀಸ್ ಠಾಣಾ ಮೊ.ಸಂ.02/2024ರ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆ ವಿಚಾರಣೆ ಪೂರ್ಣಗೊಂಡು ಪುಕರಣದ ಆರೋಪಿಯಾದ ಪ್ರಜ್ವಲ್ ರೇವಣ್ಯ ಕೃತ್ಯ ಸಾಭೀತಾಗಿದ್ದರಿಂದ ಅಪರಾಧಿಗೆ ಅಜೀವ ಕಾರವಾಸ ಮತ್ತು 11,60,000 ರೂ. ದಂಡವನ್ನು ವಿಧಿಸಿ ದಂಡದ ಮೊತ್ತದಲ್ಲಿ 11,25,000 ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್ ರೇವಣ್ಣ ಎಂದು ಪತ್ತೆಹಚ್ಚಿದ್ಹೇಗೆ ಗೊತ್ತಾ? ಸ್ಫೋಟಕ ಮಾಹಿತಿ ಬಹಿರಂಗ
ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಗ್ರ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್ ಪಡೆಯಲ್ಲಿ ವೃತ್ತಿಪರತೆ, ಹೊಣೆಗಾರಿಕೆ ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ನಗದು ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Fri, 23 January 26
